ಹೊಸದಿಲ್ಲಿ: ಹೆಚ್ಚಿನ ಜನರು ಸಿನಿಮಾಗಳನ್ನು ನೋಡಿ ಅದರಿಂದ ಪ್ರೇರಿತರಾಗಿ ತೋರಿಸಿದಂತೆ ನಿಜ ಜೀವನದಲ್ಲಿ ಅನುಕರಿಸಲು ಮುಂದಾಗುತ್ತಾರೆ. ಅದೇ ರೀತಿ ಇತ್ತೀಚೆಗೆ ಬಾಲಿವುಡ್ ಸಿನಿಮಾ ಅನಿಮಲ್‌ನ ಸ್ಟೈಲ್‍ನಿಂದ ಪ್ರೇರಿತರಾದ ಭಾರತೀಯ ವಧು-ವರರಿಬ್ಬರು ಚಿತ್ರದಲ್ಲಿ ತೋರಿಸಿದ ವಿಚಿತ್ರವಾದ ವಾಹನದ ಮೂಲಕ ಮದುವೆಯ ಸ್ಥಳಕ್ಕೆ ಪ್ರವೇಶಿಸಿದ್ದಾರೆ. ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 2023ರ ಬಾಲಿವುಡ್‌ನ ಹಿಟ್ ಚಿತ್ರ ʼಅನಿಮಲ್ʼನಿಂದ ಸ್ಫೂರ್ತಿ ಪಡೆದ ಈ ಜೋಡಿ ಚಲಿಸುವ ಸ್ಟೀಲ್ ಮೆಷಿನ್ ಗನ್‍ನಲ್ಲಿ ಸವಾರಿ ಮಾಡಿ ಮದುವೆ ಮಂಟಪಕ್ಕೆ ಪ್ರವೇಶಿಸಿದೆ. ಈ ಜೋಡಿ ತಮ್ಮ ಮದುವೆಗಾಗಿ ಮೆಷಿನ್ ಗನ್‍ನ ಸಣ್ಣ ಆವೃತ್ತಿಯನ್ನು ಹೋಲುವ ಪ್ರಾಪ್ ಅನ್ನು ಆರ್ಡರ್ ಮಾಡಿದ್ದಾರೆ ಮತ್ತು ಅತಿಥಿಗಳನ್ನು ರಂಜಿಸಲು ಈ ಯಂತ್ರದಲ್ಲಿ ಬಂದಿದ್ದಾರೆ. ವೈರಲ್ ವಿಡಿಯೊದಲ್ಲಿ, ಈ ಜೋಡಿ ದೈತ್ಯ ಮಷಿನ್ ಗನ್ ಬ್ಯಾರೆಲ್ ಹಿಂದೆ ಕುಳಿತಿರುವುದು ಕಂಡು ಬಂದಿದೆ.
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಎಲ್ಲ ಕಡೆಯಿಂದಲೂ ನೆಟ್ಟಿಗರಿಂದ ಕಾಮೆಂಟ್‍ಗಳು ಹರಿದು ಬರುತ್ತಿವೆ. ಒಬ್ಬ ನೆಟ್ಟಿಗರು, ʼʼಏನು!! ಸೇಡು / ಅಧಿಕಾರಕ್ಕಾಗಿ ಜನರನ್ನು ಕೊಲ್ಲುವ ಪಾತ್ರವಾಗಲು ನೀವು ಬಯಸುತ್ತೀದ್ದೀರಾ?” ಎಂದು ಕೇಳಿದರೆ ಇನ್ನೊಬ್ಬರು ಹೇಳಿದರು, ʼʼಅವಳು ತನ್ನ ಜೀವನದ ಮುಂದಿನ ಯುದ್ಧಕ್ಕೆ ತಯಾರಾಗುತ್ತಿದ್ದಾಳೆʼʼ ಎಂದಿದ್ದಾರೆ. ಮತ್ತೊಬ್ಬರು ʼʼಮದುವೆ ಅಥವಾ ಯುದ್ಧ?ʼʼ ಎಂದು ಕಾಮೆಂಟ್ ಮಾಡಿದ್ದಾರೆ. “ಮೆದುಳು ಹೊಂದಿರುವ ಯಾರಾದರೂ ಇದನ್ನು ಏಕೆ ಮಾಡುತ್ತಾರೆ?” ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. “ಕೆಟ್ಟ ಸಿನೆಮಾದ ಪ್ರಭಾವ” ಎಂದು ಒಬ್ಬರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ:ರೈಲಿಸುವ ರೈಲಿನ ಯುವಕನ ಸಾಹಸ; ಎದೆ ಝಲ್ಲೆನಿಸುವ ವಿಡಿಯೊ ನೋಡಿ
ಇಂತಹ ಘಟನೆ ನಡೆದಿದ್ದು ಇದೆ ಮೊದಲಲ್ಲ . ಜನರು ಕೆಲವೊಮ್ಮೆ ಇದೇ ರೀತಿಯ ಕೆಲಸಗಳನ್ನು ಮಾಡಿ ಸುದ್ದಿಯಾಗಿದ್ದಾರೆ. ಈ ಹಿಂದೆ ವಧು ಮತ್ತು ಅವಳ ತಂದೆ ಚಲಿಸುವ ಶಾಂಡ್ಲಿಯರ್‌ನಲ್ಲಿ ಬಂದ ವಿಡಿಯೊ ಕೂಡ ಸಖತ್ ವೈರಲ್ ಆಗಿತ್ತು.
ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಅನಿಮಲ್’ ಈ ತಿಂಗಳು ಒಂದು ವರ್ಷ ಪೂರೈಸಿದೆ. ನಿರ್ದೇಶಕರು ಶೀಘ್ರದಲ್ಲೇ ಚಿತ್ರದ ಎರಡನೇ ಕಂತನ್ನು ‘ಅನಿಮಲ್ ಪಾರ್ಕ್’ ಎಂಬ ಶೀರ್ಷಿಕೆಯೊಂದಿಗೆ ತೆರೆಗೆ ತರಲಿದ್ದಾರೆ ಎನ್ನಲಾಗಿದೆ.