Wednesday, 14th May 2025

Viral Video: ಕೊನೆಗೂ ಈಡೇರಿತು ತಾಜ್ ಹೋಟೆಲ್‍ನಲ್ಲಿ ಒಂದು ಕಪ್ ಚಹಾ ಸವಿಯೋ ಈತನ ಕನಸು; ಅಂದಹಾಗೇ, ಈ ಟೀ ಬೆಲೆಯೆಷ್ಟು ಗೊತ್ತಾ?

Viral Video

ಮುಂಬೈ : ಮುಂಬೈನ ತಾಜ್ ಮಹಲ್ ಪ್ಯಾಲೇಸ್ ಇದು ಐಷಾರಾಮಿ ಮತ್ತು ಭವ್ಯತೆಯ ಸಂಕೇತವಾಗಿರು ಹೊಟೇಲ್‌. ಈ ಹೋಟೆಲ್‍ಗೆ ಹೆಚ್ಚಾಗಿ ಶ್ರೀಮಂತ ವ್ಯಕ್ತಿಗಳು ಹೋಗುತ್ತಾರೆ. ಆದರೆ ಬಡವ ಹಾಗೂ ಮಧ್ಯಮವರ್ಗದವರು ಇಲ್ಲಿಗೆ ಹೋಗುವುದು ಎಂದರೆ ತುಸು ಕಷ್ಟವೇ. ಹೆಚ್ಚಿನವರಿಗೆ ಫೈವ್‌ಸ್ಟಾರ್‌ ಹೋಟೆಲ್‌ಗೆ ಹೋಗಬೇಕು ಎಂಬ ಆಸೆ ಇದ್ದೇ ಇರುತ್ತದೆ. ಆದರೆ ಸ್ಟಾರ್‌ ಹೋಟೆಲ್‌ಗೆ ಬಿಡಿ ಮನೆ ಪಕ್ಕದಲ್ಲಿರುವ ಹೋಟೆಲ್‌ಗೂ ಹೋಗುವುದಕ್ಕೂ ಯೋಚಿಸುವಂತಹ ಎಷ್ಟೋ ಜನರಿದ್ದಾರೆ! ಆದರೆ ಇತ್ತೀಚೆಗೆ, ಮಧ್ಯಮ ವರ್ಗದ ವ್ಯಕ್ತಿಯೊಬ್ಬರು ತಾಜ್‍ ಹೋಟೆಲ್‍ನಲ್ಲಿ ಒಂದು ಕಪ್ ಚಹಾ ಕುಡಿದ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌(Viral Video) ಆಗಿದೆ.

ತಾಜ್‌ ಹೋಟೆಲ್‌ ಒಳಗೆ ಹೋಗಿ ಒಂದು ಕಪ್‌ ಚಹಾ ಕುಡಿಯಬೇಕು ಎಂಬ ಕನಸು ಕಟ್ಟಿಕೊಂಡಿರುವ ವ್ಯಕ್ತಿಯೊಬ್ಬರು ಕೊನೆಗೂ ಅದನ್ನು ಈಡೇರಿಸಿಕೊಂಡ ವಿಡಿಯೊವೊಂದು ಎಲ್ಲರ ಗಮನ ಸೆಳೆದಿದೆ. ವೈರಲ್ ವಿಡಿಯೊದಲ್ಲಿ, ಅದ್ನಾನ್ ಪಠಾಣ್ ಎಂಬ ಮಧ್ಯಮ ವರ್ಗದ ವ್ಯಕ್ತಿ ಭಾರೀ ಖುಷಿಯಿಂದ ತಾಜ್ ಮಹಲ್ ಹೋಟೆಲ್ ಒಳಗೆ ಹೋಗಿದ್ದಾರೆ. ಅಲ್ಲಿನ ವಿನ್ಯಾಸ, ಸವಲತ್ತುಗಳನ್ನು ನೋಡಿ ತಾಜ್ ತುಂಬಾ ಸುಂದರವಾಗಿದೆ, ರಾಜಮನೆತನದ ಅರಮನೆ ಇದ್ದಂತೆ ಇದೆ ಎಂದು ಖುಷಿಯಿಂದ ಹೇಳಿದ್ದಾರೆ.

ನಂತರ ಪಠಾಣ್ “ಬೊಮ್ ಹೈ-ಟೀ” ಅನ್ನು ಆರ್ಡರ್ ಮಾಡಿದ್ದಾರಂತೆ. ಇದರ 1800ರೂಪಾಯಿ. ತೆರಿಗೆ ಸೇರಿ ಒಟ್ಟು ಬಿಲ್ ರೂ 2124. ಇದರಲ್ಲಿ ವಡಾ ಪಾವ್, ಗ್ರಿಲ್ಡ್ ಸ್ಯಾಂಡ್ ವಿಚ್‍ಗಳು, ಕಾಜು ಕಟ್ಲಿ, ಖಾರಿ ಪಫ್ ಮತ್ತು ಬೆಣ್ಣೆಯಂತಹ ಖಾದ್ಯಗಳ ಜೊತೆ ಒಂದು ಕಪ್ ಭಾರತೀಯ ಚಹಾ ಸೇರಿದೆಯಂತೆ. “ಜೀವನದಲ್ಲಿ ಒಮ್ಮೆಯಾದರೂ ಇಲ್ಲಿಗೆ ಭೇಟಿ ನೀಡಬೇಕು ಎಂದು ಪಠಾಣ್ ಹೇಳಿದ್ದಾರೆ. ಈ ವಿಡಿಯೊ 20 ದಶಲಕ್ಷಕ್ಕೂ ಹೆಚ್ಚು ವ್ಯೂವ್ಸ್‌ ಗಳಿಸಿದೆ. ಅನೇಕ ಬಳಕೆದಾರರು ಪಠಾಣ್ ಅವರ ಪ್ರಯಾಣದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ರೈಲಿನ ಎಂಜಿನೊಳಗೆ ಹಾವು; ಹೌಹಾರಿದ ಲೋಕೊ ಪೈಲಟ್!

“ಯಾರಾದರೂ ತಮ್ಮ ಕನಸನ್ನು ಈಡೇರಿಸಿಕೊಳ್ಳುವುದನ್ನು ಮತ್ತು ಅದನ್ನು ಇತರರೊಂದಿಗೆ ಹಂಚಿಕೊಳ್ಳುವುದನ್ನು ನೋಡುವುದು ತುಂಬಾ ಸ್ಪೂರ್ತಿದಾಯಕವಾಗಿದೆ” ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, “ಚಹಾಕ್ಕೆ ರೂ. 2124? ಅದು ಖಂಡಿತವಾಗಿಯೂ ಐಷಾರಾಮಿ!” ಎಂದಿದ್ದಾರೆ.