Saturday, 17th May 2025

Viral Video: ಮಹಿಳಾ ಮ್ಯಾನೇಜರ್‌ಗೆ ಥಳಿಸಿ ಮೊಬೈಲ್ ಒಡೆದು ಹಾಕಿದ ವ್ಯಕ್ತಿಯ ಬಂಧನ: ವೈರಲ್ ಆಯ್ತು ವಿಡಿಯೊ

Viral Video

ಪಟ್ನಾ: ಮಹಿಳಾ ಬ್ಯಾಂಕ್ ಮ್ಯಾನೇಜರ್ ಜೊತೆ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿರುವ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಆಘಾತಕಾರಿ ಘಟನೆ ಬಿಹಾರದ ಪಾಟ್ನಾದ ಕೆನರಾ ಬ್ಯಾಂಕ್ ಶಾಖೆಯೊಂದರಲ್ಲಿ ನಡೆದಿದ್ದು ಇದಕ್ಕೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ. ಈ ಕೃತ್ಯವನ್ನು ಸೆರೆ ಹಿಡಿಯುತ್ತಿದ್ದರು ಎನ್ನುವ ಕಾರಣಕ್ಕೆ ವ್ಯಕ್ತಿಯು ಆಕೆಯ ಮೊಬೈಲ್ ಅನ್ನು ನೆಲಕ್ಕೆ ಎಸೆದು ಒಡೆದು ಹಾಕಿರುವ ದೃಶ್ಯ ಕೂಡ ವಿಡಿಯೊದಲ್ಲಿ ಸೆರೆಯಾಗಿದೆ. ಮಹಿಳೆಯು ಈ ಕುರಿತಾಗಿ ಪೊಲೀಸರಿಗೆ ದೂರು ನೀಡಿದ್ದು, ಮಹಿಳೆಯೊಂದಿಗೆ ದುರ್ವರ್ತನೆ ಹಾಗೂ ಬೆದರಿಕೆ ಒಡ್ಡಿದ ಆರೋಪದ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.

ಪಟ್ನಾದ ಗಾಂಧಿ ಮೈದಾನ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಶುಕ್ರವಾರ (ಡಿಸೆಂಬರ್ 6) ನಡೆದ ಈ ಘಟನೆಯಿಂದಾಗಿ ಬ್ಯಾಂಕ್‌ನಲ್ಲಿ ಆತಂಕದ ವಾತಾವರಣ ಏರ್ಪಟ್ಟಿತ್ತು. ಆರೋಪಿಯನ್ನು ರಾಕೇಶ್ ಕುಮಾರ್ ಸಿಂಗ್ ಎಂದೂ ಮಹಿಳಾ ಬ್ಯಾಂಕ್ ಮ್ಯಾನೇಜರ್ ಅನ್ನು ವಂದನಾ ಶರ್ಮಾ ಎಂದು ಗುರುತಿಸಲಾಗಿದೆ. ವೃತ್ತಿಯಿಂದ ಗುತ್ತಿಗೆದಾರನಾಗಿರುವ ರಾಕೇಶ್ ಕುಮಾರ್, ಬ್ಯಾಂಕ್‌ನಿಂದ ಸಾಲ ನೀಡುವಂತೆ ಮನವಿ ಸಲ್ಲಿಸಿದ್ದ. ಆದರೆ ಆತನ ಸಿಐಬಿಐಎಲ್ ಸ್ಕೋರ್ ನಿಗದಿತ ಪ್ರಮಾಣದಲ್ಲಿ ಇಲ್ಲದೆ ಇರುವ ಕಾರಣಕ್ಕೆ ಸಾಲವನ್ನು ಮಂಜೂರು ಮಾಡಿರಲಿಲ್ಲ.

ಸಾಲವನ್ನು ಮಂಜೂರು ಮಾಡದೆ ಇರುವ ಕಾರಣಕ್ಕೆ ಸಿಟ್ಟಿಗೆದ್ದ ರಾಕೇಶ್ ಕುಮಾರ್, ತನ್ನ ಸಿಐಬಿಐಎಲ್ ಸ್ಕೋರ್‌ನ್ನು ಸರಿಪಡಿಸಿ ಸಾಲವನ್ನು ಕೂಡಲೇ ಮಂಜೂರು ಮಾಡುವಂತೆ ಬ್ಯಾಂಕ್ ಮ್ಯಾನೇಜರ್‌ಗೆ ಬೆದರಿಕೆ ಒಡ್ಡಲು ಪ್ರಾರಂಭಿಸಿದ್ದಾನಂತೆ. ಬ್ಯಾಂಕ್‌ನಿಂದ ಸಿಐಬಿಐಎಲ್ ಸ್ಕೋರ್ ಅನ್ನು ಸರಿಪಡಿಸಲು ಸಾಧ್ಯವಿಲ್ಲ ಎಂದು ಮಹಿಳೆ ಉತ್ತರಿಸುತ್ತಿದ್ದಂತೆ ಸಿಟ್ಟಿಗೆದ್ದ ವ್ಯಕ್ತಿಯು ಅವರ ಮೇಲೆ ಕೂಗಾಡಿದ್ದಾನೆ. ಆರೋಪಿಯು ಬ್ಯಾಂಕ್ ಮ್ಯಾನೇಜರ್ ಕಡೆಗೆ ಕೈ ತೋರಿಸಿ ಕಿರುಚಾಡುತ್ತಿರುವ ದೃಶ್ಯವೂ ವಿಡಿಯೊದಲ್ಲಿದೆ.

“ತುಂಬಾ ಬುದ್ಧಿವಂತೆಯಂತೆ ನಟಿಸುವುದು ಬೇಡ. ಮೊದಲು ನನ್ನ ಸಿಐಬಿಐಎಲ್ ಸ್ಕೋರ್ ಅನ್ನು ಸರಿಪಡಿಸಿ. ಇಲ್ಲವಾದರೆ ನಿಮ್ಮ ಚೇಂಬರ್ ಒಳಗೆ ನುಗ್ಗಿ ನಾನೇನು ಮಾಡುತ್ತೇನೆ ಎನ್ನುವುದನ್ನು ಕಾದು ನೋಡಿ. ಇದನ್ನೆಲ್ಲ ರೆಕಾರ್ಡ್‌ ಮಾಡಿ ನನಗೆ ಅವಮಾನ ಮಾಡುತ್ತಿದ್ದೀರಾ? ನಾನ್ಯಾರು ಅನ್ನುವುದು ನಿಮಗಿನ್ನೂ ತಿಳಿದಿಲ್ಲ. ಎಲ್ಲೇ ಬೇಕಾದರೂ ಹೋಗಿ ನನ್ನ ಬಗ್ಗೆ ವಿಚಾರಿಸಿ. ಹೆಚ್ಚಿನ ಬ್ಯಾಂಕ್‌ಗಳಲ್ಲಿ ನನ್ನ ಹೆಸರಿನಲ್ಲಿ ಸಾಲಗಳಿವೆ. ನಮ್ಮ ಮನೆಯ ಎಷ್ಟೊಂದು ಜನರು ಅಧಿಕಾರಯುತ ಸ್ಥಾನದಲ್ಲಿದ್ದಾರೆ ಗೊತ್ತಾ?” ಎಂದು ಆ ವ್ಯಕ್ತಿ ಕಿರುಚಾಡಿದ್ದಾನೆ.

ಆತನ ಈ ಕೃತ್ಯವನ್ನು ಮಹಿಳೆಯು ತಮ್ಮ ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್‌ ಮಾಡಲು ಪ್ರಯತ್ನಿಸುತ್ತಿರುವುದನ್ನು ಕಂಡು ಸಿಟ್ಟಿಗೆದ್ದು ಆಕೆಯನ್ನು ನಿಂದಿಸಿದ್ದಾನೆ. ಜೊತೆಗೆ ಆಕೆಯ ಮೊಬೈಲ್ ಅನ್ನು ಒಡೆದು ಹಾಕಿದ್ದಾನೆ. ಮಹಿಳೆಯು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: 60 ಅಡಿ ಎತ್ತರದಲ್ಲಿರುವ ಫೆರಿಸ್ ವೀಲ್‍ನಲ್ಲಿ ನೇತಾಡಿದ ಬಾಲಕಿ! ಬೆಚ್ಚಿ ಬೀಳಿಸುವ ವಿಡಿಯೊ

ಎಫ್‌ಐಆರ್ ದಾಖಲಿಸಲಾಗಿದ್ದು ಘಟನೆಗೆ ಸಂಬಂಧಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪಟ್ನಾದ ಗಾಂಧಿ ಮೈದಾನ ಪೊಲೀಸ್ ಠಾಣೆ ವ್ಯಾಪ್ತಿಯ ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ತನಿಖೆಯನ್ನು ಕೈಗೆತ್ತಿಕೊಂಡಿರುವ ಪೊಲೀಸರು, ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಕಾನೂನು ರೀತ್ಯಾ ಶಿಕ್ಷೆ ವಿಧಿಸಲಾಗುವುದು ಎಂದು ಹೇಳಿದ್ದಾರೆ.