Wednesday, 14th May 2025

Viral Video: ಪ್ರವಾಹದಲ್ಲೇ ಸಾಗಿ ಬೆಕ್ಕಿನ ಮರಿಗಳನ್ನು ಕಾಪಾಡಿದ ಪುಟ್ಟ ಬಾಲಕ – ಈತನ ಮಾನವೀಯತೆಗೆ ನೆಟ್ಟಿಗರಿಂದ ಬಹುಪರಾಕ್‌!

ಮಲೇಷ್ಯಾ: ಜಗತ್ತಿನ ಮೂಲೆಯೆಲ್ಲೋ ನಡೆಯುವ ಮಾನವೀಯ ಕಾರ್ಯಗಳು ಸಾಮಾಜಿಕ ಜಾಲತಾಣಗಳೆಂಬ ಸುದ್ದಿ ವಾಹಕಗಳ ನಡುವೆ ಕ್ಷಣ ಮಾತ್ರದಲ್ಲಿ ವೈರಲ್ ಆಗುತ್ತದೆ. ಅಂತಹದ್ದೇ ಒಂದು ವಿಡಿಯೋ ಒಂದು ಇದೀಗ ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್ (Viral Video) ಆಗುತ್ತಿದೆ. ಮಲೇಷ್ಯಾದಲ್ಲಿ (Malaysia) ನೆರೆ ನೀರಿನಲ್ಲಿ ಸಿಲುಕಿದ್ದ ಬೆಕ್ಕಿನ ಮರಿಗಳನ್ನು ಬಾಲಕನೊಬ್ಬ ಸಾಹಸಮಯವಾಗಿ ರಕ್ಷಿಸಿದ ವಿಡಿಯೋ ಇದಾಗಿದ್ದು, ಬಾಲಕನ ಈ ಸಾಹಸಮಯ ಮಾನವೀಯ ಕಾರ್ಯಕ್ಕೆ ವಿಶ್ವವೇ ತಲೆದೂಗುತ್ತಿದೆ.

ಈ ಬಾಲಕ ಮಳೆ ನೀರು ತುಂಬಿದ ರಸ್ತೆಗಳಲ್ಲಿ ಸಾಹಸಮಯವಾಗಿ ಸಾಗಿ, ಅಲ್ಲಿ ನೀರಿನಲ್ಲಿ ಸಿಲುಕಿಕೊಂಡಿದ್ದ ಒಂದು ಬೆಕ್ಕು ಮತ್ತು ಎರಡು ಬೆಕ್ಕಿನ ಮರಿಗಳನ್ನು ತನ್ನ ತೆಕ್ಕೆಯಲ್ಲಿ ಹಿಡಿದುಕೊಂಡು ಸುರಕ್ಷಿತ ಜಾಗದಲ್ಲಿ ಬಿಡುತ್ತಾನೆ. ಇಲ್ಲಿ, ತನ್ನ ಮೊಣಕಾಲಿನ ಮಟ್ಟದವರೆಗೂ ನಿರಿದ್ದರೂ ಅದನ್ನು ಲೆಕ್ಕಿಸಿದೇ ಮೂಕ ಪ್ರಾಣಿಗಳ ರಕ್ಷಣೆಗೆ ಧಾವಿಸಿದ ಈ ಬಾಲಕನ ಸಾಹಸ ಕಾರ್ಯಕ್ಕೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

ಈ ವಿಡಿಯೋದಲ್ಲಿರುವಂತೆ, ಆ ಮಲೆಷಿಯಾದ ಬಾಲಕ ಮೂರು ಬೆಕ್ಕುಗಳನ್ನು ಬಿಗಿಯಾಗಿ ಒಂದು ಕೈಯಲ್ಲಿ ಹಿಡಿದುಕೊಂಡು, ಇನ್ನೊಂದು ಕೈಯಲ್ಲಿ ಚೀಲವನ್ನು ಹಿಡಿದುಕೊಂಡು ನೆರೆ ನೀರಿನಲ್ಲಿ ಹೋಗುತ್ತಿರುವುದು ಮತ್ತು ಸುರಕ್ಷಿತ ಸ್ಥಳದಲ್ಲಿ ಅವುಗಳನ್ನು ಬಿಡುತ್ತಿರುವ ದೃಶ್ಯ ದಾಖಲಾಗಿದೆ.

ಬಾಲಕ ನೆರೆ ನೀರು ತುಂಬಿದ್ದ ಸ್ಥಳದಿಂದ ಸುರಕ್ಷಿತ ಸ್ಥಳಕ್ಕೆ ಬರುತ್ತಿದ್ದಂತೆ ಆತನ ಕೈಯಲ್ಲಿದ್ದ ಒಂದು ಬೆಕ್ಕು ಛಂಗನೆ ಜಿಗಿದಿದ್ದರೆ, ಉಳಿದ ಎರಡೂ ಬೆಕ್ಕುಗಳೂ ಸಹ ಹಾಗೆಯೇ ಜಿಗಿದು ಅಲ್ಲಿದ್ದ ಹುಲ್ಲಿನ ಮೇಲೆ ಆಟವಾಡುತ್ತಾ ಓಡಾಡುತ್ತಿರುತ್ತವೆ. ಮತ್ತೆ, ಅಲ್ಲಿದ್ದ ಇನ್ನೊಬ್ಬ ಪುಟ್ಟ ಬಾಲಕ ಆ ಬೆಕ್ಕಿನ ಮರಿಗಳ ಜೊತೆ ಆಟವಾಡುತ್ತಿರುವುದೂ ಸಹ ಈ ವಿಡಿಯೋದಲ್ಲಿ ದಾಖಲಾಗಿದೆ.

ಮಲೇಷ್ಯಾದ ಕೆಲವು ಭಾಗಗಳಲ್ಲಿ ನೆರೆ ಪರಿಸ್ಥಿತಿ ಸಾಮಾನ್ಯವಾಗಿದ್ದರೂ, ಇತ್ತೀಚೆಗೆ ಮುಂಗಾರು ಅವಧಿಯಲ್ಲಿ ಅಲ್ಲಿ ಸುರಿದ ಭಾರೀ ಮಳೆಗೆ ಈಗಾಗಲೇ 30 ಜನರು ತಮ್ಮ ಪ್ರಾಣಗಳನ್ನು ಕಳೆದುಕೊಂಡಿದ್ದಾರೆ. ಮಾತ್ರವಲ್ಲದೇ ಸಾವಿರಾರು ಜನರು ಮನೆ ಮಠ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ ಎಂದು ಅಲ್ಲಿನ ಸರಕಾರಿ ವರದಿಗಳು ತಿಳಿಸಿವೆ. ನೆರೆ ನೀರಿನಲ್ಲಿ ಮನೆಗಳು ಕೊಚ್ಚಿಕೊಂಡು ಹೋಗುತ್ತಿರುವ ಭೀಕರ ದೃಶ್ಯಗಳೂ ಸಹ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಮತ್ತು ಈ ಪ್ರಾಕೃತಿಕ ದುರಂತದ ಬಿಸಿ ಥಾಯ್ಲೆಂಡ್ ನ ದಕ್ಷಿಣ ಭಾಗದ ಜನರಿಗೂ ಮುಟ್ಟಿದೆ.

ಇದನ್ನೂ ಓದಿ: Mughal Emperor Akbar: ಒಂದೇ ರಾತ್ರಿ ಹಲವು ಮಹಿಳೆಯರೊಂದಿಗೆ ಮಲಗುತ್ತಿದ್ದ ರಾಜ ಅಕ್ಬರ್! ಆತನ ಶಕ್ತಿ ವರ್ಧನೆಯ ಗುಟ್ಟೇನು ಗೊತ್ತಾ?

ಇನ್ನು, ಮಲೇಷ್ಯಾ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ನೆರೆ, ಭೂಕುಸಿತದಂತಹ ಪ್ರಾಕೃತಿಕ ವಿಕೋಪಗಳುಂಟಾದ ಸಂದರ್ಭಗಳಲ್ಲಿ ಯಾವ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ನೆರೆ ನೀರಿನಲ್ಲಿ ಹೇಗೆ ಎಚ್ಚರಿಕೆಯಿಂದ ಓಡಾಡಬೇಕು ಎಂಬ ಮಾಹಿತಿಯನ್ನು ಪ್ರಾತ್ಯಕ್ಷಿಕೆ ಸಹಿತ ನೀಡಲಾಗುತ್ತಿದೆ.

ಇದರಿಂದ ಮಕ್ಕಳಿಗೆ ಪ್ರಾಕೃತಿಕ ವಿಕೋಪಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಮತ್ತು ತಮ್ಮನ್ನು ಹಾಗೂ ತಮ್ಮ ಕುಟುಂಬವನ್ನು ಈ ದುರಂತದಿಂದ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ ಎಂಬುದು ಈ ಕಲಿಕೆಯ ಹಿಂದಿನ ಉದ್ದೇಶವಾಗಿದೆ.