ಮುಂಬೈ: ಹಿಂದಿನ ಕಾಲದಲ್ಲಿ ವಿದೇಶಿ ಪ್ರವಾಸಿಗರು ಭಾರತಕ್ಕೆ ಆಗಮಿಸಿ ಇಲ್ಲಿನ ಸಂಸ್ಕೃತಿ, ಆಚಾರ-ವಿಚಾರಗಳು ಹಾಗೂ ಇಲ್ಲಿನ ವೈವಿಧ್ಯತೆಗಳ ಕುರಿತು ದಾಖಲಾತಿ ಮಾಡಿ ಭಾರತದ ವೈಭವವನ್ನು ವಿಶ್ವಕ್ಕೆ ಪರಿಚಯಿಸುತ್ತಿದ್ದರು. ಇದೀಗ ಕಾಲ ಬದಲಾಗಿದೆ, ಅಂತರ್ಜಾಲ ಪ್ರೇರಿತ ಸಾಮಾಜಿಕ ಜಾಲತಾಣಗಳು (Social Media) ಇಡೀ ವಿಶ್ವವನ್ನೇ ಒಂದು ಕುಟುಂಬವನ್ನಾಗಿ ಮಾಡಿದೆ ಮತ್ತು ವಿಶ್ವದ ಯಾವುದೇ ದೇಶಗಳ ಕುರಿತು ನಾವಿಂದು ವಿಲಾಗರ್ಗಳ ಮೂಲಕ ಮಾಹಿತಿಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿದೆ. ಇಷ್ಟೆಲ್ಲ ಪೀಠಿಕೆ ಯಾಕಪ್ಪಾ ಅಂದ್ರೆ, ಐರಿಶ್-ಪರ್ಷಿಯನ್ (Irish-Persian) ಟ್ರಾವೆಲ್ ವಿಲಾಗರ್ (travel vlog) ಒಬ್ಬರು ಭಾರತ ಪ್ರವಾಸದಲ್ಲಿದ್ದು, ಮುಂಬೈಯ(Mumbai) ಫೇಮಸ್ ಲೋಕಲ್ ಟ್ರೈನಿನಲ್ಲಿ (Local Train) ಓಡಾಡಿದ್ದನ್ನು ಮಾಡಿರುವ ವಿಡಿಯೊ ಇದೀಗ ವಿಶ್ವದ ಗಮನ ಸೆಳೆಯುತ್ತಿದೆ.
ಟ್ರಾವೆಲ್ ವಿಲಾಗರ್ ಆಗಿರುವ ಸೀನ್ ಹ್ಯಾಮಂಡ್ (Sean Hammond) ಇತ್ತೀಚೆಗೆ ಮುಂಬೈಯ ಲೋಕಲ್ ಟ್ರೈನಿನಲ್ಲಿ ತಾವು ಓಡಾಡಿದ ಅನುಭವವನ್ನು ಶಾರ್ಟ್ ರೀಲ್ಸ್ ಮೂಲಕ ಹಂಚಿಕೊಂಡಿದ್ದಾರೆ. ಅವರು ತಮ್ಮ ಈ ಪ್ರಯಾಣದ ಅನುಭವವನ್ನು ಸಂಕ್ಷಿಪ್ತವಾಗಿ ‘ಜನಪ್ರಿಯ ಗೊಂದಲಮಯ’ (Famously chaotic) ಎಂದು ಬಣ್ಣಿಸಿದ್ದಾರೆ. ಸಿಯಾನ್ ಅವರು ಬಾಂದ್ರ ಈಸ್ಟ್ಗೆ (Bandra East) ಸೆಕೆಂಡ್ ಕ್ಲಾಸ್ ಟಿಕೆಟ್ ಬುಕ್ ಮಾಡಿದ್ದಾರೆ. ಬಳಿಕ ರೈಲನ್ನೇರಿದ ಸಿಯಾನ್ ತನ್ನ ಬೋಗಿಯಲ್ಲಿ ಅಷ್ಟೊಂದು ಪ್ರಯಾಣಿಕರಿಲ್ಲದಿರುವದನ್ನು ಕಂಡು ಅಚ್ಚರಿಗೊಂಡಿದ್ದಾರೆ. “ಇದು ನಿಜವಾಗಿಯೂ ಅಷ್ಟೊಂದು ಬ್ಯುಸಿಯಾಗಿರಲಿಲ್ಲ” ಎಂದು ಅನುಭವವನ್ನು ಹೇಳಿಕೊಂಡಿದ್ದಾರೆ. ಆದರ ಮುಂದಿನ ನಿಲ್ದಾಣದಲ್ಲಿ ರೈಲು ನಿಂತ ಸಂದರ್ಭದಲ್ಲಿ ಒಮ್ಮೆಲೇ ಪ್ರಯಾಣಿಕರು ತುಂಬಿಕೊಂಡದ್ದನ್ನು ಕಂಡ ಅವರು, ʼʼನಾನು ಬಹಳ ಬೇಗ ಪ್ರತಿಕ್ರಿಯಿಸಿದೆ!ʼʼ ಎಂದು ಉದ್ಘರಿಸಿದ್ದಾನೆ.
ಈ ಲೋಕಲ್ ಟ್ರೈನಿನಲ್ಲಿ ಪ್ರಯಾಣಿಕರು ಹೇಗೆ ಹತ್ತಿ ಇಳಿಯುತ್ತಾರೆ ಎಂದು ತೋರಿಸಲು ಸಿಯಾನ್ ತಮ್ಮ ಕ್ಯಾಮೆರಾವನ್ನು ಆ ಕಡೆ ತಿರುಗಿಸಿದ್ದಾರೆ. ʼʼಪ್ರಾಮಾಣಿಕವಾಗಿ ಹೇಳಬೇಕೆಂದರೆ ಇದು ಬಹಳ ಗೊಂದಲಮಯವಾಗಿದೆ ಮತ್ತು ನನಗಿಲ್ಲಿ ತುಂಬಾ ಕಡಿಮೆ ಸ್ಥಳಾವಕಾಶವಿದೆʼʼ ಎಂದು ಪ್ರತಿಕ್ರಿಯಿಸಿದ್ದಾರೆ.
ಸ್ಟಾಪ್ ಬಂದಾಗ ಸಿಯಾನ್ ಇಳಿದು ಹೋಗಿ, ಲೋಕಲ್ ಟ್ರೈನಿನಲ್ಲಿ ತನ್ನ ಪ್ರಯಾಣದ ಅನುಭವವನ್ನು ಹೀಗೆ ಬರೆದುಕೊಂಡಿದ್ದಾರೆ. ʼʼಪ್ರಾಮಾಣಿಕವಾಗಿ ಹೇಳಬೇಕೆಂದ್ರೆ, ಇದು ಹೇಗಿತ್ತೆಂದ್ರೆ ಲಂಡನ್ನಲ್ಲಿ ಸುರಂಗದೊಳಗೆ ಹೋಗಿ ಬಂದ ಅನುಭವವಾಯ್ತುʼʼ ಎಂದು ಆತ ಹೇಳಿಕೊಂಡಿದ್ದಾರೆ. ʼʼನಾನು ಈ ರೈಲು ಸೇವೆಯ ಬಗ್ಗೆ ಬಹಳಷ್ಟು ಉತ್ಪೇಕ್ಷಕಾರಿ ಮಾತುಗಳನ್ನು ಕೇಳಿದ್ದೆ. ಆದರೆ ಪ್ರಾಮಾಣಿಕವಾಗಿ ಹೇಳಬೇಕೆಂದ್ರೆ ಇದು ನಾನು ಕಲ್ಪನೆ ಮಾಡಿಕೊಂಡದ್ದಕ್ಕಿಂತ ಹೆಚ್ಚು ಆರಾಮದಾಯಕವಾಗಿತ್ತುʼʼ ಎಂದು ಮುಂಬೈ ಲೋಕಲ್ ಟ್ರೈನ್ ಪ್ರಯಾಣದ ಬಗ್ಗೆ ತೀರ್ಪು ನೀಡಿದ್ದಾರೆ.
‘ʼನನ್ನನ್ನು ಆಶ್ಚರ್ಯಗೊಳಿಸಿದ ಅಂಶವೆಂದ್ರೆ ರೈಲು ಚಲಿಸುತ್ತಿರುವಾಗಲೇ ಜನರು ಹತ್ತುವುದು ಮತ್ತು ಇಳಿಯುವುದನ್ನು ಮಾಡುತ್ತಿದ್ದರು. ಇದನ್ನು ಹೊರತುಪಡಿಸಿದರೆ ಉಳಿದಂತೆ ಈ ಪ್ರಯಾಣದ ಅನುಭವ ಉತ್ತಮ ಮಟ್ಟದಲ್ಲಿತ್ತು. ಈ ರೈಲಿನ ಒಳಗೆ ಫ್ಯಾನುಗಳೂ ಇವೆ. ಈ ಮೂಲಕ ನಿಮ್ಮ ಪ್ರಯಾಣ ಕೂಲ್ ಆಗಿರುತ್ತದೆ ಹಾಗೂ ಚೆನ್ನಾಗಿ ಗಾಳಿ ಓಡಾಡುತ್ತದೆ. 20 ನಿಮಿಷಗಳ ನನ್ನ ಈ ಪ್ರಯಾಣಕ್ಕೆ ನನಗೆ ತಗಲಿದ್ದು ಕೇವಲ 5 ರೂ. ಒಟ್ಟಿನಲ್ಲಿ ಮುಂಬೈ ಲೋಕಲ್ ರೈಲಿನಲ್ಲಿ ನನ್ನ ಪ್ರಯಾಣದ ಅನುಭವದಲ್ಲಿ ಯಾವುದೇ ದೂರುಗಳಿಲ್ಲ!ʼʼ ಎಂದು ಸಿಯಾನ್ ತಿಳಿಸಿದ್ದಾರೆ.
ಸಿಯಾನ್ ಪೋಸ್ಟ್ ಮಾಡಿರುವ ಈ ರೀಲ್ ಈಗಾಗಲೇ 1.5 ಮಿಲಿಯನ್ ವೀಕ್ಷಣೆಯನ್ನು ಪಡೆದುಕೊಂಡಿದೆ.