Wednesday, 14th May 2025

Viral Video: ಸರ್ಕಾರಿ ಕಟ್ಟಡದಲ್ಲೇ ಎಣ್ಣೆ ಪಾರ್ಟಿ; ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದ ಪುರಸಭೆಯ ನೌಕರರು; ವಿಡಿಯೊ ನೋಡಿ

Viral Video

ಭೋಪಾಲ್‌:ಸರ್ಕಾರಿ ಆಶ್ರಯ ಮನೆಗಳಲ್ಲೇ ನೌಕರರು ಗುಂಡು ಪಾರ್ಟಿ ಮಾಡಿರೋ ಘಟನೆ ವರದಿಯಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ. ಮಧ್ಯಪ್ರದೇಶದ ಜಬಲ್ಪುರ ಮುನ್ಸಿಪಲ್ ಕಾರ್ಪೊರೇಷನ್‍ನ ಗುತ್ತಿಗೆ ನೌಕರರನ್ನು ರೈನ್ ಬಸೆರಾ (ಸರ್ಕಾರಿ ಆಶ್ರಯ ಮನೆ) ವ್ಯವಸ್ಥಾಪಕರು ಮತ್ತು ಉಸ್ತುವಾರಿಗಳಾಗಿ ನಿಯೋಜಿಸಲಾಗಿತ್ತು. ಆದರೆ ಇವರು ಕರ್ತವ್ಯ ಪಾಲಿಸುವ ಬದಲು ಕ್ಯಾಂಪಸ್‍ನಲ್ಲಿ ‘ಮಟನ್ ಮತ್ತು ಎಣ್ಣೆ ಪಾರ್ಟಿ’ ಮಾಡುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ಇತ್ತೀಚೆಗೆ ರಾತ್ರಿಯ ವೇಳೆ ಗೋಕುಲ್‍ದಾಸ್ ಧರ್ಮಶಾಲಾ (ಸರ್ಕಾರಿ ಲಾಡ್ಜ್) ನಲ್ಲಿ ಈ ಘಟನೆ ನಡೆದಿದೆ. ಪುರಸಭೆಯ ಸಹಾಯಕ ಆಯುಕ್ತೆ ಅಂಕಿತಾ ಜೈನ್ ಅವರು ತಡರಾತ್ರಿ ಸಮಯದಲ್ಲಿ ಇದ್ದಕ್ಕಿದ್ದಂತೆ ಈ ಸ್ಥಳಕ್ಕೆ ಬಂದಾಗ ನೌಕರರು  ಮಾಡುತ್ತಿದ್ದ ಘನಕಾರ್ಯ ಕಣ್ಣಿಗೆ ಬಿದ್ದಿದೆ. ಆಶ್ರಯ ಮನೆ, ಮನೆಯಿಲ್ಲದವರನ್ನು ಮತ್ತು ನಿರ್ಗತಿಕರನ್ನು ಚಳಿಯಿಂದ ರಕ್ಷಿಸುವ ಉದ್ದೇಶದಿಂದ ನಿರ್ಮಿಸಲಾಗಿದೆ. ಆದರೆ, ಅದನ್ನು ಸಿಬ್ಬಂದಿಗಳು ತಮ್ಮ ವೈಯಕ್ತಿಕ ಕೆಲಸಕ್ಕೆ ದುರುಪಯೋಗಪಡಿಸಿಕೊಂಡಿದ್ದಾರೆ. ಈ ಘಟನೆಯನ್ನು ವಿಡಿಯೊ ಮಾಡಲಾಗಿದ್ದು, ಇದರಲ್ಲಿ ಅಧಿಕಾರಿ ನೌಕರರನ್ನು ತರಾಟೆಗೆ ತೆಗೆದುಕೊಂಡಿರುವುದನ್ನು ಕಾಣಬಹುದಾಗಿದೆ.

ಘಟನೆಯ ಬಗ್ಗೆ ಮಾಹಿತಿ ನೀಡಿದ ಸಹಾಯಕ ಆಯುಕ್ತ ಜೈನ್, “ಗೋಕುಲ್‍ದಾಸ್ ಧರ್ಮಶಾಲಾದ ಹೊರಗೆ ಸುಮಾರು ಆರರಿಂದ ಏಳು ಮಂದಿ ಪಾರ್ಟಿ ಮಾಡಿ ಸಿಕ್ಕಿಬಿದ್ದಿದ್ದಾರೆ. ಇದು ಸಂಪೂರ್ಣವಾಗಿ ಅನುಚಿತವಾಗಿದೆ, ಏಕೆಂದರೆ ಈ ಆಶ್ರಯದಲ್ಲಿ ಮಹಿಳೆಯರು ಮತ್ತು ಹುಡುಗಿಯರು ಇದ್ದಾರೆ. ಇಲ್ಲಿ ಸಿಕ್ಕಿಬಿದ್ದ ಪುರುಷರು ಸಹ ಮದ್ಯ ಕುಡಿದಿದ್ದಾರೆ ಎಂದು ಶಂಕಿಸಲಾಗಿದೆ. ಈ ಬಗ್ಗೆ ಸಂಪೂರ್ಣ ತನಿಖೆ ಮಾಡಿದ  ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದ್ದಾರೆ.

ವರದಿಗಳ ಪ್ರಕಾರ, ಇಲ್ಲಿ ಆಶ್ರಯ ನಿವಾಸಿಗಳನ್ನು ಬೆಚ್ಚಗಿಡಲು ಮೀಸಲಾದ ಉರುವಲನ್ನು ಮಟನ್ ಬೇಯಿಸಲು ಬಳಸಲಾಗಿತ್ತು. ಪುರಸಭೆಯ ನೌಕರರು ಮತ್ತು ಕೆಲವು ಹೊರಗಿನವರು ಸೇರಿದಂತೆ ಸುಮಾರು 6-7 ವ್ಯಕ್ತಿಗಳು ಇದ್ದರು ಮತ್ತು ಅವರು ಆಶ್ರಯದ ಗೇಟ್ ಬಳಿ ಪಾರ್ಟಿ ಮಾಡಿದ್ದು ಕಂಡುಬಂದಿದೆ. ದಾಳಿ ಮಾಡಿದ ತಂಡವು ಘಟನಾ ಸ್ಥಳದಿಂದ ಮದ್ಯ, ಮಟನ್ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿದೆ.

ಇದನ್ನೂ ಓದಿ: ಮದುವೆಯ ಮೆರವಣಿಗೆ ವೇಳೆ ಕಾರಿನ ಸನ್ ರೂಫ್ ಮೂಲಕ ಪಟಾಕಿ ಸಿಡಿಸಿದ ಪುಂಡರು; ಮುಂದೇನಾಯ್ತು? ವಿಡಿಯೊ ನೋಡಿ

ಜಿಲ್ಲಾಧಿಕಾರಿ ಮತ್ತು ಆಯುಕ್ತರೊಂದಿಗೆ ನಡೆದ  ಸಭೆಯಲ್ಲಿ ಆಶ್ರಯ ಮನೆಗಳನ್ನು ಸರಿಯಾಗಿ ಪರಿಶೀಲಿಸಲು ಮತ್ತು ನಿರ್ವಹಿಸಲು ಸಿಎಂ ಮೋಹನ್ ಯಾದವ್ ಇತ್ತೀಚೆಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಜೈನ್ ಮಾಹಿತಿ ನೀಡಿದ್ದಾರೆ.  ಈ ಸೂಚನೆಗಳ ಹೊರತಾಗಿಯೂ, ಪುರಸಭೆಯ ಸಿಬ್ಬಂದಿಯ ಇಂತಹ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯುತ ನಡೆ ಪುರಸಭೆ ಕಚೇರಿಯಲ್ಲಿ ಕೋಲಾಹಲವನ್ನು ಸೃಷ್ಟಿಸಿದೆ. ಅಲ್ಲದೇ ಈ ಘಟನೆಯಿಂದ ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶಗೊಂಡಿದ್ದಾರೆ. ಮುನ್ಸಿಪಲ್ ಕಾರ್ಪೊರೇಷನ್ ಸಮಗ್ರ ತನಿಖೆಯನ್ನು ಪ್ರಾರಂಭಿಸಿದೆ ಮತ್ತು ತಪ್ಪಿತಸ್ಥರಿಗೆ  ಕಠಿಣ ಶಿಕ್ಷೆಯನ್ನು ವಿಧಿಸಲಾಗುತ್ತದೆ ಎಂದು ಭರವಸೆ ನೀಡಿದೆ.