Monday, 12th May 2025

Viral Video: ರಾಮಾಯಣ ನಾಟಕ ನಡೆಯುತ್ತಿದ್ದ ವೇದಿಕೆಯ ಮೇಲೆಯೇ ಹಂದಿಯನ್ನು ಕೊಂದು ಹಸಿ ಮಾಂಸ ತಿಂದ ನಟ! ವಿಡಿಯೊ ಇದೆ

Viral News

ಭುವನೇಶ್ವರ: ಇತ್ತೀಚಿನ ದಿನಗಳಲ್ಲಿ ಜನರ ಕ್ರೌರ್ಯತೆ ಎಲ್ಲೆ ಮೀರಿದೆ. ಇದಕ್ಕೆ ಸಾಕ್ಷಿ ಎಂಬಂತೆ ಆಗಾಗ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಇದೀಗ ಒಡಿಶಾದಲ್ಲೂ ಇಂತಹದ್ದೇ ಒಂದು ಘಟನೆ ನಡೆದಿದೆ. ರಾಮಾಯಣ ನಡೆಯುತ್ತಿದ್ದ ವೇದಿಕೆಯಲ್ಲೇ ನಟನೊಬ್ಬ ಹಂದಿಯನ್ನು ಕೊಂದು ಹಸಿ ಮಾಂಸ ತಿಂದಿರುವ ವಿಲಕ್ಷಣ ಘಟನೆ ವರದಿಯಾಗಿದೆ. ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌(Viral Video) ಆಗುತ್ತಿದೆ.

ಏನಿದು ಘಟನೆ?

ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಮಾಯಣ ನಾಟಕದಲ್ಲಿ ರಾಕ್ಷಸನ ಪಾತ್ರವನ್ನು ನಿರ್ವಹಿಸಿದ್ದ 45 ವರ್ಷದ ರಂಗಭೂಮಿ ನಟ ಬಿಂಬಧರ್ ಗೌಡ, ವೇದಿಕೆಯ ಮೇಲೆ ಜೀವಂತ ಹಂದಿಯ ಹೊಟ್ಟೆಯನ್ನು ಬಗೆದು ಅದರ ಹಸಿ ಮಾಂಸವನ್ನು ಸೇವಿಸಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ. ಹಿಂಜಿಲಿ ಪೊಲೀಸ್ ಠಾಣೆ ಪ್ರದೇಶದ ರಾಲಾಬ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ರಾಜ್ಯ ವಿಧಾನಸಭೆ ಸೇರಿದಂತೆ ರಾಜ್ಯವ್ಯಾಪಿ ಆಕ್ರೋಶ ಮತ್ತು ವಿವಾದವನ್ನು ಹುಟ್ಟುಹಾಕಿದೆ.

ಈ ಆಘಾತಕಾರಿ ಕೃತ್ಯದ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪ್ರಾಣಿ ಹಕ್ಕುಗಳ ಕಾರ್ಯಕರ್ತರು ಮತ್ತು ರಾಜಕೀಯ ಮುಖಂಡರಿಂದ ವ್ಯಾಪಕ ಟೀಕೆಗೆ ಗುರಿಯಾಗಿದೆ. ಆಡಳಿತಾರೂಢ ಬಿಜೆಪಿ ಶಾಸಕರಾದ ಬಾಬು ಸಿಂಗ್ ಮತ್ತು ಸನಾತನ ಬಿಜುಲಿ ಈ ಘಟನೆಯನ್ನು ವಿಧಾನಸಭೆಯಲ್ಲಿ ಬಲವಾಗಿ ಖಂಡಿಸಿದ್ದು, ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕರೆ ನೀಡಿದ್ದಾರೆ. ಪ್ರಾಣಿ ಕ್ರೌರ್ಯ ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಉಲ್ಲಂಘನೆಯ ಆರೋಪದ ಮೇಲೆ ಗೌಡ ಮತ್ತು ಕಾರ್ಯಕ್ರಮದ ಸಂಘಟಕರಲ್ಲಿ ಒಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಬೆರ್ಹಾಮ್ಪುರ ವಿಭಾಗೀಯ ಅರಣ್ಯ ಅಧಿಕಾರಿ (ಡಿಎಫ್ಒ) ಸನ್ನಿ ಖೋಕರ್ ಅವರು, “ಈ ಘಟನೆಯಲ್ಲಿ ಭಾಗಿಯಾಗಿರುವ ಇತರರನ್ನು ಗುರುತಿಸಲು ತನಿಖೆ ನಡೆದಿದೆ. ವಿಶೇಷವಾಗಿ ನಾಟಕದ ಸಮಯದಲ್ಲಿ ಜೀವಂತ ಪ್ರಾಣಿಗಳನ್ನು ಪ್ರದರ್ಶಿಸಲು ಕಾರಣರಾದವರನ್ನು ಗುರುತಿಸಲು ತನಿಖೆ ಮಾಡಿದ್ದಾರೆ.  ಇದು ಕಳೆದ ವರ್ಷ ಆಗಸ್ಟ್‌ನಲ್ಲಿ ಹೊರಡಿಸಲಾದ ರಾಜ್ಯ ಮಾರ್ಗಸೂಚಿಗಳ ಮತ್ತೊಂದು ಉಲ್ಲಂಘನೆಯಾಗಿದೆ” ಎಂದು ಹೇಳಿದ್ದಾರೆ.

ಕಂಜಿಯಾನಲ್ ಯಾತ್ರಾ ಉತ್ಸವದ ಸಂದರ್ಭದಲ್ಲಿ ಪ್ರೇಕ್ಷಕರನ್ನು ಆಕರ್ಷಿಸಲು ನಾಟಕ ತಂಡವು ಈ ಭಯಾನಕ ಕೃತ್ಯವನ್ನು ಪ್ರದರ್ಶಿಸಿದೆ ಎಂದು ಹಿಂಜಿಲಿ ಪೊಲೀಸ್ ಠಾಣೆಯ ಉಸ್ತುವಾರಿ ಇನ್ಸ್ಪೆಕ್ಟರ್ ಶ್ರೀನಿಬಾಸ್ ಸೇಥಿ ಹೇಳಿದ್ದಾರೆ. ಆತಂಕಕಾರಿ ಸನ್ನಿವೇಶದಲ್ಲಿ, ಹಂದಿಯನ್ನು ವೇದಿಕೆಯ ಛಾವಣಿಗೆ ಕಟ್ಟಲಾಗಿತ್ತು, ನಂತರ ಗೌಡ ಚಾಕುವನ್ನು ಬಳಸಿ ಅದರ ಹೊಟ್ಟೆ ಬಗೆದು ನಂತರ ಅದರ ಅಂಗಗಳ ಭಾಗಗಳನ್ನು ಹಸಿಯಾಗಿ ಪ್ರೇಕ್ಷಕರ ಮುಂದೆ ತಿಂದಿದ್ದಾನೆ.

ಇದನ್ನೂ ಓದಿ:ಹನುಮಂತನಿಗೆ ಅರ್ಪಿಸಿದ ಹಣ್ಣನ್ನು ತಿಂದ ಕೋತಿ; ಭಕ್ತರ ಸಂಭ್ರಮವೋ… ಸಂಭ್ರಮ! ವಿಡಿಯೊ ವೈರಲ್

ಈ ಘಟನೆಯು ಪ್ರಾಣಿ ದಯಾ ಸಂಘದ ಕೋಪಕ್ಕೆ ಕಾರಣವಾಗಿದೆ. ಅವರು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಹಾಗಾಗಿ ಪೊಲೀಸರು  ಪ್ರಕರಣ ದಾಖಲಿಸಿಕೊಂಡು  ಅಪರಾಧಿಗಳಿಗೆ ತಕ್ಕ ಶಿಕ್ಷೆ ವಿಧಿಸುವುದಾಗಿ ತಿಳಿಸಿದ್ದಾರೆ.