ಗೋರಖ್‌ಪುರ: ಹೊಸ ವರ್ಷಕ್ಕೊಂದು ಗಮ್ಮತ್ತಿನ ಸುದ್ದಿಯೊಂದಿಗೆ ನಾವು ಬಂದಿದ್ದೇವೆ ನೋಡಿ! ಇದು ಅಂತಿಂಥ ಸುದ್ದಿಯಲ್ಲ! ಈ ಸುದ್ದಿಯನ್ನು ಓದಿದ್ರೆ ನೀವೂ ಕೂಡಾ ‘ಇದನ್ನೊಮ್ಮೆ ಟ್ರೈ ಮಾಡ್ಬಹುದಾ..’ ಅಂತ ಅಂದ್ಕೋತೀರಾ ಅಂತಹ ಸುದ್ದಿಯಿದು. ಉತ್ತರಪ್ರದೇಶದಲ್ಲಿ (Uttar Pradesh) ಕಳ್ಳರ ಗ್ಯಾಂಗೊಂದರ ಸದಸ್ಯರಿಗೆ ಫಿಕ್ಸ್ ಸ್ಯಾಲರಿ ಇದೆ. ಇಷ್ಟು ಮಾತ್ರವಲ್ಲದೇ ಟ್ರಾವೆಲ್ ಅಲವೆನ್ಸ್ ಬೇರೆ ಕೊಡ್ತಾರಂತೆ ಮಾರ್ರೆ..! ಇದೀಗ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ (Viral News) ಆಗುತ್ತಿರುವಂತೆ ನೆಟ್ಟಿಗರು ಈ ಜಾಬ್‌ಗೆ ಅಪ್ಲೈ ಮಾಡೋದು ಹೇಗೆ ಎಂದು ಕೇಳ್ತಿದ್ದಾರೆ.. ತಮಾಷೆ ಅಲ್ಲ ಮಾರ್ರೆ.. ವಿಷ್ಯ ಸೀರಿಯಸ್..!
ಗೋರಖ್‌ಪುರ (Gorakhpur) ಪೊಲೀಸರು ಮೊಬೈಲ್ ಕಳ್ಳರ ಗ್ಯಾಂಗೊಂದನ್ನು ಬಂಧಿಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರಿಗೆ ಈ ಗ್ಯಾಂಗಿನ ಕುರಿತಾಗಿ ಹಲವಾರು ವಿಚಿತ್ರ ಮಾಹಿತಿಗಳು ಲಭ್ಯವಾಗಿದ್ದು, ಇದು ಪೊಲೀಸರನ್ನು ಮಾತ್ರವಲ್ಲದೇ ಈ ಸುದ್ದಿ ಓದುತ್ತಿರುವ ಎಲ್ಲರನ್ನೂ ಅಚ್ಚರಿಗೊಳಗಾಗಿಸುವಂತಿದೆ.
ಈ ಗ್ಯಾಂಗಿನ ಸದಸ್ಯರಿಗೆ ಅವರ ‘ಸಕ್ಸಸ್ ರೇಟ್’ನ ಹೊರತಾಗಿ ನಿಗದಿತ ಸಂಬಳವಿದೆ ಎನ್ನುವ ಮಾಹಿತಿ ಸರಕಾರಿ ರೈಲ್ವೇ ಪೊಲೀಸರು (Government Railway Police) ಗೋರಖ್‌ಪುರದಲ್ಲಿ ಈ ಗ್ಯಾಂಗಿನ ಕಿಂಗ್ ಪಿನ್ ವ್ಯಕ್ತಿಯನ್ನು ಬಂಧಿಸಿದಾಗ ಈ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಈತನ ಜೊತೆಗೆ ಈ ಕುಖ್ಯಾತ ತಂಡದ ಇನ್ನಿಬ್ಬರು ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಕುಖ್ಯಾತ ಮೊಬೈಲ್ ಕಳ್ಳರ ತಂಡದ ಬಂಧಿತ ನಾಯಕನನ್ನು 35 ವರ್ಷದ ಮನೋಜ್ ಮಂಡಲ್ ಎಂದು ಗುರುತಿಸಲಾಗಿದೆ. ಈತ ಎಲ್ಲಾ ಕಳ್ಳತನ ಮತ್ತು ದರೋಡೆ ಕೃತ್ಯಗಳ ಮಾಸ್ಟರ್ ಮೈಂಡ್ ಆಗಿದ್ದಾನೆ. ಈತನ ಸಹಚರರಾದ 19 ವರ್ಷ ಪ್ರಾಯದ ಕರಣ್ ಕುಮಾರ್ ಹಾಗೂ 15 ವರ್ಷ ಪ್ರಾಯದ ಕುಮಾರ್ ನ ಸಹೋದರನನ್ನು ಇದೀಗ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಬಂಧಿತರ ಬಳಿಯಲ್ಲಿದ್ದ 44 ಕಳವು ಮಾಡಿದ ಮೊಬೈಲ್ ಫೋನ್ ಗಳನ್ನು ಪೊಲೀಸರು ಇದೀಗ ವಶಪಡಿಸಿಕೊಂಡಿದ್ದು, ಇವುಗಳ ಒಟ್ಟು ಮೌಲ್ಯ 10 ಲಕ್ಷ ರೂಪಾಯಿಗಳು ಎಂದು ತಿಳಿದುಬಂದಿದೆ. ಇನ್ನು ಕಳವು ಪ್ರಕರಣಗಳಲ್ಲಿ ಇವರು ಬಳಸುತ್ತಿದ್ದ ಸಣ್ಣ ಗನ್ ಮತ್ತು ಚೂರಿಗಳನ್ನೂ ಸಹ ವಶಪಡಿಸಿಕೊಳ್ಳಲಾಗಿದೆ.
ಈ ಗ್ಯಾಂಗ್ ‘ವ್ಯವಸ್ಥಿತ ಅಪರಾಧ’ ಶಬ್ದಕ್ಕೆ ಸರಿಯಾಗಿ ಕಾರ್ಯ ನಿರ್ವಹಿಸುತ್ತಿತ್ತು ಮತ್ತು ಇದಕ್ಕನುಗುಣವಾಗಿಯೇ ತಮ್ಮ ಅಪರಾಧ ಕೃತ್ಯಗಳನ್ನು ನಡೆಸುತ್ತಿತ್ತು ಎಂಬ ವಿಚಾರವೂ ಇದೀಗ ಬೆಳಕಿಗೆ ಬಂದಿದೆ.
ಗೋರಖ್ ಪುರ ಜಿ.ಆರ್.ಪಿ. ಎಸ್.ಪಿ. ಸಂದೀಪ್ ಕುಮಾರ್ ಮೀನಾ ಅವರು ಈ ಗ್ಯಾಂಗಿನ ವ್ಯವಸ್ಥಿತ ಸ್ವರೂಪದ ಮಾಹಿತಿಯನ್ನು ಮಾದ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ. ಈ ತಂಡದ ನಾಯಕ ಮನೋಜ್ ತನ್ನ ತಂಡದ ಸದಸ್ಯರಿಗೆ 15 ಸಾವಿರ ಸಂಬಳವನ್ನು ತಿಂಗಳಿಗೆ ನೀಡುತ್ತಿದ್ದ. ಮಾತ್ರವಲ್ಲದೇ ಈ ಗ್ಯಾಂಗಿನ ಸದಸ್ಯರಿಗೆ ಉಚಿತ ಆಹಾರ ಮತ್ತು ಹೊರ ಭಾಗಗಳಿಗೆ ಪ್ರಯಾಣಿಸಿದಲ್ಲಿ ಟ್ರಾವೆಲ್ ಅಲವೆನ್ಸ್ ಸಹ ನೀಡಲಾಗುತ್ತಿತ್ತು!
ಈ ಸುದ್ದಿಯನ್ನೂ ಓದಿ: New Orleans Attack: ಹೊಸ ವರ್ಷದಂದೇ 15 ಬಲಿ ಪಡೆದ ಶಮ್ಸುದ್-ದಿನ್ ಜಬ್ಬಾರ್ ಯಾರು? ಈತನ ಹಿನ್ನಲೆಯೇನು?
ಈ ಗ್ಯಾಂಗಿನ ಸದಸ್ಯರು ರೈಲು ನಿಲ್ದಾಣಗಳಲ್ಲಿ ಮತ್ತು ಜನನಿಬಿಡ ಮಾರುಕಟ್ಟೆ ಪ್ರದೇಶಗಳಲ್ಲಿ ಮೊಬೈಲ್ ಫೋನ್ ಎಗರಿಸುವುದರಲ್ಲಿ ನಿಪುಣರಾಗಿದ್ದರು.
ಈ ಕುಖ್ಯಾತ ತಂಡದ ನಾಯಕ ಮನೋಜ್ ತನ್ನ ಗ್ರಾಮದಲ್ಲಿ ಯಾರಿಗೆ ಹಣದ ಅಗತ್ಯತೆ ಇರುವ ಯುವಕರನ್ನು ಗುರುತಿಸಿ ಅವರನ್ನು ತನ್ನ ತಂಡಕ್ಕೆ ಸೇರಿಸಿಕೊಳ್ಳುತ್ತಿದ್ದ. ಬಳಿಕ ಇವರಿಗೆ ಮೂರು ತಿಂಗಳ ತರಬೇತಿಯನ್ನೂ ಸಹ ನೀಡುತ್ತಿದ್ದ. ಬಳಿಕ ಈ ಟ್ರೈನೀಗಳಿಗೆ ಕಳ್ಳತನ ಮಾಡಲು ಸಣ್ಣ ಟಾರ್ಗೆಟ್ ಗಳನ್ನು ನೀಡುತ್ತಿದ್ದ. ಈ ಟಾರ್ಗೆಟ್ ಗಳನ್ನು ಯಶಸ್ವಿಯಾಗಿ ಪೂರೈಸುವ ಯುವಕರನ್ನು ತನ್ನ ತಂಡಕ್ಕೆ ನೇಮಕ ಮಾಡಿಕೊಂಡು ಅವರಿಗೆ ಸಂಬಳವನ್ನು ನಿಗದಿಪಡಿಸುತ್ತಿದ್ದ ಎಂದು ಮೀನಾ ಅವರು ಮಾಹಿತಿ ನೀಡಿದ್ದಾರೆ.
ಇನ್ನು, ಕಳ್ಳತನಕ್ಕಾಗಿ ಬೇರೆ ಕಡೆಗೆ ಪ್ರಯಾಣಿಸಬೇಕಾಗಿ ಬಂದ ಸಂದರ್ಭದಲ್ಲಿ ಈ ಗ್ಯಾಂಗ್ ಸದಸ್ಯರಿಗೆ ಉಚಿತ ಆಹಾರ ಮತ್ತು ವಸತಿಗಾಗಿ ಹಣವನ್ನೂ ಸಹ ನೀಡಲಾಗುತ್ತಿತ್ತು ಎಂಬ ಮಾಹಿತಿಯೂ ಬೆಳಕಿಗೆ ಬಂದಿದೆ. ‘ಕಳ್ಳತನ ಮಾಡುವ ಸಂದರ್ಭದಲ್ಲಿ ಯಾರಾದ್ರೂ ಪ್ರತಿರೋಧ ತೋರಿದರೆ ಅವರನ್ನು ಬೆದರಿಸಲು ಈ ತಂಡದ ಸದಸ್ಯರು ಆಯುಧಗಳನ್ನು ಬಳಸುತ್ತಿದ್ದರು, ಮತ್ತು ಸಂತ್ರಸ್ತರನ್ನು ಬೆದರಿಸಲೂ ಸಹ ಈ ಆಯುಧಗಳನ್ನು ಬಳಸಲಾಗುತ್ತಿತ್ತು’ ಎಂದು ಮೀನಾ ಮಾಹಿತಿ ನೀಡಿದರು.
ತಾವು ಕಳವು ಮಾಡಿದ ಮೊಬೈಲ್ ಫೋನ್ ಗಳನ್ನು ನೇಪಾಳ ಮತ್ತು ಬಾಂಗ್ಲಾದೇಶದ ಗಡಿಗಳ ಮೂಲಕ ಇವರು ಸಾಗಿಸುತ್ತಿದ್ದರು. ಮತ್ತು ಇವುಗಳನ್ನು ಇವರು ಈ ಮೊಬೈಲ್ ಗಳ ಮೂಲ ಬೆಲೆಗಿಂತ 30 ರಿಂದ 40% ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು.