Wednesday, 14th May 2025

Viral News: ‘ಶ್ರೀಜನಾ ಸುಬೇದಿಯಂತೆ ಇರಿ, ನಿಖಿತಾ ಸಿಂಘಾನಿಯಾ ರೀತಿ ಅಲ್ಲ’ ಎಂದ ನೆಟ್ಟಿಗರು; ಕಾರಣವೇನು?

Viral News

ಮುಂಬೈ: ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಅತುಲ್‌ ಸುಭಾಷ್‌ ಪ್ರಕರಣ ಸದ್ಯ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಪತ್ನಿ ನಿಖಿತಾ ಸಿಂಘಾನಿಯಾ ಕಿರುಕುಳದಿಂದ ಬೇಸತ್ತು ಅತುಲ್‌ ಸುಭಾಷ್‌ ಸಾವಿಗೆ ಶರಣಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಹಲವರು ನಿಖಿತಾ ಸಿಂಘಾನಿಯಾ ವಿರುದ್ದ ಕಿಡಿ ಕಾರುತ್ತಿದ್ದಾರೆ. ಈ ಮಧ್ಯೆ ಗಂಭೀರ ಕಾಯಿಲೆಗೆ ತುತ್ತಾದ ಪತಿಯನ್ನು ಮಗುವಿನಂತೆ ಕಾಳಜಿಯಿಂದ ನೋಡಿಕೊಂಡ ಶ್ರೀಜನಾ ಸುಬೇದಿ ಅವರ ವಿಡಿಯೊ ಮುನ್ನಲೆಗೆ ಬಂದಿದೆ. ಶ್ರೀಜನಾ ಸುಬೇದಿಯಂತೆ ಇರಿ, ನಿಖಿತಾ ಸಿಂಘಾನಿಯಾ ರೀತಿ ಅಲ್ಲ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ (Viral News).

ಗ್ಲಿಯೋಮಾ ಎಂಬ ಮೆದುಳಿನ ಗೆಡ್ಡೆಯಿಂದ ಬಳಲುತ್ತಿದ್ದ ನೇಪಾಳದ ವ್ಯಕ್ತಿ ಮತ್ತು ಜಾರ್ಜಿಯಾ ವಿಶ್ವವಿದ್ಯಾಲಯದ ಪಿಎಚ್‍ಡಿ ಅಭ್ಯರ್ಥಿ ಬಿಬೆಕ್ ಪಾಂಗೇನಿ ನಿಧನ ಹೊಂದಿದರು. 2022ರಲ್ಲಿ ಈ ರೋಗದ ಬಗ್ಗೆ ತಿಳಿದ ನಂತರ ಪಾಂಗೇನಿ ಮತ್ತು ಅವರ ಪತ್ನಿ ಶ್ರೀಜನಾ ಸುಬೇದಿ ಅವರು ತಮ್ಮ ಪ್ರೀತಿಯ ಪ್ರಯಾಣವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಅನೇಕರಿಗೆ ಮಾದರಿಯಾಗಿದ್ದಾರೆ. ಈ ಸುದ್ದಿ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಪತಿಯ ಅನಾರೋಗ್ಯದ ಸಮಯದಲ್ಲಿ ಶ್ರೀಜನಾ ಸುಬೇದಿ ಅವರು ನೀಡಿದ ಬೆಂಬಲವನ್ನು ಕಂಡ  ಸೋಶಿಯಲ್ ಮೀಡಿಯಾದ ಮಂದಿ ಆಕೆಯನ್ನು ಹೊಗಳಿದ್ದಾರೆ. ಪ್ರತಿ ಸವಾಲಿನ ಸಮಯದಲ್ಲಿ ಪತಿಯೊಂದಿಗೆ ನಿಂತಿದ್ದಾರೆ. ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು ಮತ್ತು ನಿರಂತರವಾಗಿ ಅವರನ್ನು ಆರೈಕೆ ಮಾಡುತ್ತಿದ್ದರು. ಪಾಂಗೇನಿ ಅವರ ನಿಧನದ ನಂತರ ಅವರು ಹಂಚಿಕೊಂಡ ಪೋಸ್ಟ್‌ಗಳಿಗೆ ನೆಟ್ಟಿಗರು ಭಾವನಾತ್ಮಕವಾಗಿ ಸ್ಪಂದಿಸಿದ್ದಾರೆ. ಜತೆಗೆ ತಮ್ಮ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. 

ಬಿಬೆಕ್ ಪಾಂಗೇನಿ ಸಾವಿನ ನಂತರ, ನೆಟ್ಟಿಗರು ನಿಕಿತಾ ಸಿಂಘಾನಿಯಾ ಮತ್ತು ಶ್ರೀಜನಾ ಸುಬೇದಿ ನಡುವೆ ಹೋಲಿಕೆ ಮಾಡಿದ್ದಾರೆ. ಕಷ್ಟದ ಸಮಯದಲ್ಲಿ ತನ್ನ ಗಂಡನನ್ನು ನೋಡಿಕೊಳ್ಳುವ ವಿಡಿಯೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹಂಚಿಕೊಂಡ ನಂತರ ನೆಟ್ಟಿಗರು  “ಶ್ರೀಜನಾ ಸುಬೇದಿಯಂತೆ ಇರಿ, ನಿಕಿತಾ ಸಿಂಘಾನಿಯಾ ರೀತಿ ಅಲ್ಲ” ಎಂದು ಹೇಳಿದ್ದಾರೆ.

ನೆಟ್ಟಿಗರೊಬ್ಬರು, “ನಿಕಿತಾ ಸಿಂಘಾನಿಯಾದವರಿಂದ ತುಂಬಿದ ಜಗತ್ತಿನಲ್ಲಿ ಶ್ರೀಜನಾ ಸುಬೇದಿಯಂತ ಮಹಿಳೆಯಾಗಿರಿ” ಎಂದಿದ್ದಾರೆ.

ಮತ್ತೊಬ್ಬರು, ಶ್ರೀಜನಾ ಸುಬೇದಿ ತನ್ನ ಗಂಡನನ್ನು ಉಳಿಸಲು ತನ್ನಿಂದ ಸಾಧ್ಯವಾದ ಎಲ್ಲವನ್ನೂ ಮಾಡಿದಳು ಆದರೆ ದುಃಖಕರ ಎಂದರೆ ಅದು ಸಾಧ್ಯವಾಗಲಿಲ್ಲ. ಓಂ ಶಾಂತಿ. ಸೃಜನಾ ಸುಬೇದಿಯಂತೆ ಇರಿ, ನಿಕಿತಾ ಸಿಂಘಾನಿಯಾ ಅವರಂತೆ ಅಲ್ಲ” ಎಂದು ಬರೆದಿದ್ದಾರೆ.

ಈ ಸುದ್ದಿಯನ್ನೂ ಓದಿ: ಬಸ್‌ನಲ್ಲಿ ಲೈಂಗಿಕ ಕಿರುಕುಳ ನೀಡಿದ ಕಿಡಿಗೇಡಿಗೆ ಬರೋಬ್ಬರಿ 26 ಬಾರಿ ಕಪಾಳಮೋಕ್ಷ ಮಾಡಿದ ಮಹಿಳೆ; ವಿಡಿಯೊ ಭಾರೀ ವೈರಲ್‌

ಬಿಬೆಕ್ ಪಾಂಗೆನಿ ಅವರಿಗೆ  2022 ರಲ್ಲಿ ಮೆದುಳಿನ ಕ್ಯಾನ್ಸರ್ ಇರುವುದು ತಿಳಿದುಬಂದಿದೆ. ಇದರಿಂದ  ಪೀಡ್ಮಾಂಟ್ ಅಥೆನ್ಸ್ ಆಸ್ಪತ್ರೆಯಲ್ಲಿ ತಕ್ಷಣದ ಶಸ್ತ್ರಚಿಕಿತ್ಸೆಗೆ ಒಳಗಾದರು.  ಅಲ್ಲಿ ಶಸ್ತ್ರಚಿಕಿತ್ಸಕರು ಹೆಚ್ಚಿನ ಪರೀಕ್ಷೆಗಾಗಿ ಗೆಡ್ಡೆಯ ಭಾಗವನ್ನು ತೆಗೆದುಹಾಕಿದರು. ಆದರೂ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ.