Saturday, 10th May 2025

Viral News: 4 ಮಕ್ಕಳು ಹುಟ್ಟಿಸಿ 1 ಲಕ್ಷ ರೂ. ಬಹುಮಾನ ಗೆಲ್ಲಿ; ಬಂಪರ್‌ ಆಫರ್‌ ಘೋಷಿಸಿದ ಹಿಂದೂಪರ ನಾಯಕ!

ಭೋಪಾಲ್:‌ ನಾಲ್ಕು ಮಕ್ಕಳು ಹುಟ್ಟಿಸಿದರೆ ದಂಪತಿಗಳಿಗೆ 1 ಲಕ್ಷ ರೂ ಬಹುಮಾನ ನೀಡುತ್ತೇವೆ ಎಂದು ಮಧ್ಯ ಪ್ರದೇಶದ (Madhya Pradesh) ಹಿಂದೂಪರ ನಾಯಕರೊಬ್ಬರು ತುಂಬಿದ ಸಭೆಯಲ್ಲಿ ಬಂಪರ್ ಆಫರ್ ಘೋಷಣೆ ಮಾಡಿದ್ದಾರೆ.‌ ಅವರ ಹೇಳಿಕೆ ಇದೀಗ ಭಾರೀ ವೈರಲ್‌ ಆಗಿದೆ(Viral News)

ಕೆಲ ದಿನಗಳ ಹಿಂದೆಯಷ್ಟೇ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಇಂಥದ್ದೇ ಹೇಳಿಕೆ ನೀಡಿದ್ದರು. ಅವರು ತಮ್ಮ ಭಾಷಣವೊಂದರಲ್ಲಿ ಮೂರು ಮಕ್ಕಳನ್ನು ಹೊಂದುವಂತೆ ಹೇಳಿದ್ದರು. ಜನಸಂಖ್ಯೆಯಲ್ಲಿನ ಕುಸಿತವು ಕಳವಳಕಾರಿ ವಿಷಯವಾಗಿದೆ. ಆಧುನಿಕ ಜನಸಂಖ್ಯಾ ಅಧ್ಯಯನಗಳು ಒಂದು ಸಮುದಾಯದ ಜನಸಂಖ್ಯೆಯು 2.1 ದರಕ್ಕಿಂತ ಕಡಿಮೆಯಾದಾಗ, ಆ ಸಮಾಜವು ಅಳಿವಿನಂಚಿನಲ್ಲಿದೆ ಎಂದು ಸೂಚಿಸುತ್ತದೆ. ಹೀಗಾಗಿ ಪ್ರತೀ ಭಾರತೀಯ ಕುಟುಂಬವು ಮೂರು ಮಕ್ಕಳನ್ನು ಹೊಂದಬೇಕು ಎಂದಿದ್ದರು.

ಇದೀಗ ಮತ್ತೋರ್ವ ಹಿಂದೂಪರ ನಾಯಕ ನಾಲ್ಕು ಮಕ್ಕಳನ್ನು ಹೊಂದುವಂತೆ ತಮ್ಮ ಬ್ರಾಹ್ಮಣ ಸಮುದಾಯಕ್ಕೆ ಕರೆ ನೀಡಿದ್ದಾರೆ. ಮಧ್ಯಪ್ರದೇಶದ ಪರಶುರಾಮ ಕಲ್ಯಾಣ ಮಂಡಳಿಯ ಅಧ್ಯಕ್ಷರು ಮತ್ತು ಕ್ಯಾಬಿನೆಟ್ ಸಚಿವರಾಗಿರುವ ಪಂಡಿತ್ ವಿಷ್ಣು ರಾಜೋರಿಯಾ(Vishnu Rajoria) ಅವರು ಈ ಹೇಳಿಕೆ ನೀಡಿದ್ದು, ನಾಲ್ಕು ಮಕ್ಕಳನ್ನು ಹೊಂದುವ ಯುವ ಬ್ರಾಹ್ಮಣ ದಂಪತಿಗಳಿಗೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

ಧರ್ಮದ್ರೋಹಿಗಳಿದ್ದಾರೆ

ಭೋಪಾಲ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ರಾಜೋರಿಯಾ, “ನಾವು ನಮ್ಮ ಕುಟುಂಬಗಳ ಮೇಲೆ ಹೆಚ್ಚಾಗಿ ಗಮನಹರಿಸುವುದನ್ನು ನಿಲ್ಲಿಸಿರುವುದರಿಂದ ಧರ್ಮದ್ರೋಹಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಹೇಳಿದರು.

ನನಗೆ ಯುವಕರ ಮೇಲೆ ಹೆಚ್ಚಿನ ಭರವಸೆಗಳಿವೆ. ವಯೋವೃದ್ಧರಿಂದ ನಾವು ಹೆಚ್ಚಿನದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ನಾನು ಹೇಳುವುದನ್ನು ಎಚ್ಚರಿಕೆಯಿಂದ ಕೇಳಿಸಿಕೊಳ್ಳಿ, ಭವಿಷ್ಯದ ಪೀಳಿಗೆಯ ರಕ್ಷಣೆಗೆ ಜವಾಬ್ದಾರಿ ನಮಗಿದೆ.ಈಗಿನ ಯುವಕರು ಒಂದು ಮಗು ನೀತಿಯನ್ನು ನಿಲ್ಲಿಸಬೇಕು. ಅದು ಸಮಂಜಸವಲ್ಲ. ಕನಿಷ್ಠ ನಾಲ್ಕು ಮಕ್ಕಳನ್ನು ಹೊಂದಲು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ” ಎಂದು ಅವರು ಹೇಳಿದರು.

ಅಲ್ಲದೆ ಹೀಗೆ ನಾಲ್ಕು ಮಕ್ಕಳನ್ನು ಹೊಂದುವ ದಂಪತಿಗಳಿಗೆ ಪರಶುರಾಮ ಮಂಡಳಿಯು ಯುವ ಬ್ರಾಹ್ಮಣ ದಂಪತಿಗೆ 1 ಲಕ್ಷ ರೂ. ಪ್ರಶಸ್ತಿಯನ್ನು ನೀಡುತ್ತದೆ. ನಾನು ಮಂಡಳಿಯ ಅಧ್ಯಕ್ಷನಾಗಿದ್ದರೂ ಅಥವಾ ಇಲ್ಲದಿದ್ದರೂ ಪ್ರಶಸ್ತಿಯನ್ನು ನೀಡಲಾಗುವುದು. ಶಿಕ್ಷಣ ಎಂಬುದು ಈಗ ತುಂಬಾ ದುಬಾರಿಯಾಗಿದೆ. ಹೇಗಾದರೂ ನಿರ್ವಹಿಸಿ, ಆದರೆ ಮಕ್ಕಳಿಗೆ ಜನ್ಮ ನೀಡುವಲ್ಲಿ ಹಿಂದುಳಿಯಬೇಡಿ. ಇಲ್ಲದಿದ್ದರೆ, ಧರ್ಮದ್ರೋಹಿಗಳು ಈ ದೇಶವನ್ನು ವಶಪಡಿಸಿಕೊಂಡು ಆಳುತ್ತಾರೆ ಎಂದು ರಾಜೋರಿಯಾ ಎಚ್ಚರಿಕೆ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ:Narendra Modi: ಝಡ್-‌ಮೋರ್ಹ್‌ ಸುರಂಗ; ಪ್ರಧಾನಿ ನರೇಂದ್ರ ಮೋದಿಯಿಂದ ಉದ್ಘಾಟನೆ!

Leave a Reply

Your email address will not be published. Required fields are marked *