Saturday, 10th May 2025

Viral News: ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆಲ್ಲ ಯುವಕನಿಂದ ಮನಸ್ಸೋ ಇಚ್ಛೆ ಹಲ್ಲೆ; ಇದರ ಹಿಂದಿದೆ ವಿಚಿತ್ರ ಕಾರಣ

ಮೀರತ್: ಉತ್ತರಪ್ರದೇಶದ (Uttar Pradesh) ಮೀರತ್‌ (Meerut)ನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಯುವಕನೊಬ್ಬ ತನ್ನ ಬೈಕನ್ನೇರಿಕೊಂಡು ಸಿಕ್ಕಸಿಕ್ಕವರಿಗೆಲ್ಲ ಹೊಡೆಯುತ್ತ ಸಾಗಿದ್ದಾನೆ. ಖಿನ್ನತೆಯಿಂದ (depression) ಬಳಲುತ್ತಿರುವ ಈ ಯುವಕ ಡೊಪಮೈನ್ ರಶ್‌ನ (dopamine rush) ಪ್ರಭಾವದಿಂದ ಈ ರೀತಿಯಾಗಿ ರಸ್ತೆಯಲ್ಲಿ ಸಿಕ್ಕಿದವರಿಗೆಲ್ಲ ಕಳೆದ 5-6 ತಿಂಗಳುಗಳಿಂದ ಬಾರಿಸುತ್ತಾ ಸಾಗುತ್ತಿದ್ದಾನೆ ಎಂಬ ಸುದ್ದಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral News) ಆಗಿದೆ.

ಕಪಿಲ್ ಕುಮಾರ್ ಎಂಬ 23 ವರ್ಷ ಪ್ರಾಯದ ಯುವಕನೇ ಈ ರೀತಿಯಾಗಿ ಸಾರ್ವಜನಿಕ ಸ್ಥಳಗಳಲ್ಲಿ ವಿಚಿತ್ರವಾಗಿ ವರ್ತಿಸುತ್ತಿರುವ ವ್ಯಕ್ತಿ. ಈತ ಕಳೆದ ಐದಾರು ತಿಂಗಳುಗಳಿಂದ ಈ ರೀತಿಯ ಕೃತ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು ಈ ಭಾಗದ ಸಾರ್ವಜನಿಕರಿಗೊಂದು ದೊಡ್ಡ ಕಿರಿಕಿರಿಯಾಗಿ ಬದಲಾಗಿದ್ದಾನೆ.

ಡೊಪಮೈನ್ ರಶ್ ಮತ್ತು ಖಿನ್ನತೆಯ ಕಾರಣದಿಂದ ಈತ ಬೈಕಿನಲ್ಲಿ ಸಾಗುತ್ತಾ ರಸ್ತೆಯಲ್ಲಿ ಸಿಕ್ಕಿದವರಿಗೆಲ್ಲ ಬಾರಿಸುತ್ತಾ ಹೋಗುತ್ತಿದ್ದ. ಈತ ತನ್ನ ದ್ವಿಚಕ್ರ ವಾಹನದಲ್ಲಿ ಸಾಗುವ ಸಂದರ್ಭದಲ್ಲಿ ಹಿಂಸಾ ಪ್ರವೃತ್ತಿಯನ್ನು ತೋರುತ್ತಾ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದವರಿಗೆಲ್ಲಾ ಹಿಂಸೆ ನೀಡುತ್ತಿದ್ದ.

ಕಪಿಲ್ ಕುಮಾರನ ಈ ಕೃತ್ಯಗಳ ಮಾಹಿತಿಯನ್ನು ಪಡೆದ ಪೊಲೀಸರು ವಿಡಿಯೊ ಫೂಟೇಜ್‌ ಮೂಲಕ ಈ ಅಂಶವನ್ನು ಕಂಡುಕೊಂಡಿದ್ದಾರೆ. ಈ ವೇಳೆ ಕುಮಾರ್ ಒಬ್ಬ ನಿವೃತ್ತ ಪಿ.ಸಿ.ಎಸ್. ಹಾಗೂ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಕಂಡುಬಂದಿದೆ. ಈ ರೀತಿಯಾಗಿ ಕುಮಾರ್‌ನಿಂದ ಹಲ್ಲೆಗೊಳಗಾದ ಮಹಿಳೆಯೊಬ್ಬರು, ಈತ ತಾನು ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ವಿನಾಕಾರಣ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸ್ ದೂರನ್ನು ನೀಡಿದ್ದರು.

ಇದನ್ನೂ ಓದಿ: Viral Video: ಈ ಬಾಲಿವುಡ್ ಹಾಡಿನ ಮೂಲಕ ಹೊಸ ವರ್ಷವನ್ನು ಸ್ವಾಗತಿಸಿದ ತಾಜೇನಿಯಾದ ಕಂಟೆಂಟ್ ಕ್ರಿಯೇಟರ್ ಕಿಲಿ ಪಾಲ್

ಬಳಿಕ ದೂರನ್ನು ಆಧರಿಸಿ ಪೊಲೀಸರು ಇದೀಗ ಕುಮಾರ್ ನನ್ನು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸರಿಯಾದ ಕೆಲಸವಿಲ್ಲದೆ ಕಾರಣದಿಂದ ಕುಮಾರ್ ಖಿನ್ನತೆಗೆ ಜಾರಿದ್ದ ಮತ್ತು ಐದು ವರ್ಷಗಳ ಹಿಂದೆ ತನ್ನ ತಂದೆಯ ಸಾವಿನಿಂದ ಈತ ಮನನೊಂದು ತೀವ್ರ ಬೇಸರದಲ್ಲಿದ್ದ, ಇದೇ ಸಂದರ್ಭದಲ್ಲಿ ಈತನ ತಾಯಿ ಇನ್ನೊಂದು ಮದುವೆಯಾಗಿದ್ದರು. ಇವೆಲ್ಲವೂ ಕುಮಾರ್ ನ ಮನಸ್ಸನ್ನು ಘಾಸಿಗೊಳಿಸಿತ್ತು ಮತ್ತು ಆತನ ಈ ರೀತಿಯ ವಿಕ್ಷಿಪ್ತ ನಡಳಿಕೆಗಳಿಗೆ ಕಾರಣವಾಗಿತ್ತು ಎನ್ನುವ ಅಂಶ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.

ವೈದ್ಯಕೀಯ ಪರೀಕ್ಷೆಗಳ ಮೂಲಕ ಕುಮಾರ್‌ನ ಆರೋಗ್ಯ ಸ್ಥಿತಿಯ ಸ್ಪಷ್ಟ ಮಾಹಿತಿ ಇನ್ನೂ ಲಭಿಸಿಲ್ಲ ಎನ್ನಲಾಗಿದೆ. ಆದರೆ ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕುಮಾರ್ ವಿರುದ್ಧ ಬಿ.ಎನ್.ಎಸ್.ನ ಸೆಕ್ಷನ್ 115ರಡಿಯಲ್ಲಿ (ಐಚ್ಛಿಕವಾಗಿ ನೋವುಂಟು ಮಾಡಿರುವುದು) ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.