ಅವರಿಬ್ಬರೂ ಬಾಲ್ಯದ ಗೆಳೆಯರು. ಅವರಿಬ್ಬರಿಗೂ ಒಬ್ಬನೇ ಗುರು, ಇಬ್ಬರಲ್ಲೂ ಒಂದೇ ರೀತಿಯ ಪ್ರತಿಭೆ, ಇಬ್ಬರೂ ಫೀಲ್ಡಿಗೆ (cricket) ಇಳಿದಿದ್ದು ಏಕಕಾಲಕ್ಕೆ, ಇಬ್ಬರಿಗೂ ಆರಂಭದಲ್ಲಿ ಒಂದೇ ರೀತಿಯ ಅವಕಾಶಗಳು ಸಿಕ್ಕಿದ್ದವು. ಆದ್ರೆ ಒಬ್ಬ ಮಾತ್ರ ಸಾಧನೆ, ಸಿರಿವಂತಿಕೆ ಹಾಗೂ ಜನಪ್ರಿಯತೆಯ ಮೆಟ್ಟಿಲುಗಳನ್ನು ಏರುತ್ತಾ (Sachin Tendulkar) ಹೋದ. ಮತ್ತೊಬ್ಬ ಪಾತಾಳದ ಪಾಲಾದ. ಒಬ್ಬನನ್ನು ಅದೃಷ್ಟ ಕೈಹಿಡಿಯಿತು, ಇನ್ನೊಬ್ಬನನ್ನು ದುರದೃಷ್ಟ ಒದ್ದು ನೆಲಕ್ಕೆ ಕೆಡವಿತು. ಆತ ಇದೀಗ ಅನಾರೋಗ್ಯಕ್ಕೆ ತುತ್ತಾಗಿ ಹಾಸಿಗೆ ಹಿಡಿದಿದ್ದಾನೆ. ಗೆಳೆಯ ಆತನಿಗೆ ಬೆಂಬಲವಾಗಿ ನಿಂತಿದ್ದಾನೆ. ಆದರೆ ಕಳೆದುಹೋದ ದಿನಗಳು ಮರಳಿ ಬರೋಲ್ಲ. ಶಾಶ್ವತವಾಗಿ ಫಾರ್ಮ್ ಕಳೆದುಕೊಂಡ ಆತ (Vinod Kambli) ಮತ್ತೆಂದೂ ಸಾರ್ವಜನಿಕ ಜೀವನದಲ್ಲಿ ಹೀರೋ ಅನಿಸಿಕೊಳ್ಳೋದು ಕಷ್ಟವಿದೆ. ಇದರಲ್ಲಿ ಅದೃಷ್ಟದ ಪಾಲೆಷ್ಟು, ಸ್ವಯಂಕೃತಾಪರಾಧ ಎಷ್ಟು, ಸಮಾಜದ ಪಾಲೆಷ್ಟು ಅನ್ನೋದನ್ನು ನೋಡೋಣ ಬನ್ನಿ.
ಹೌದು, ಇದು ವಿನೋದ್ ಕಾಂಬ್ಳಿ ಮತ್ತು ಸಚಿನ್ ತೆಂಡುಲ್ಕರ್ ಇಬ್ಬರ ಕತೆ. ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಮೂತ್ರ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅವರ ಬಾಲ್ಯದ ಬೆಳೆಯ ಸಚಿನ್ ತೆಂಡುಲ್ಕರ್ ಚಿಕಿತ್ಸೆಗೆ ನೆರವಾಗಿದ್ದಾರೆ. ಇವರಿಬ್ಬರ ಜೋಡಿ ಒಂದು ಕಾಲದಲ್ಲಿ ಕ್ರಿಕೆಟ್ ಪ್ರಿಯರ ಫೇವರಿಟ್ ಆಗಿತ್ತು. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮತ್ತು ವಿನೋದ್ ಕಾಂಬ್ಳಿ ಬಾಲ್ಯದಿಂದಲೂ ಗೆಳೆಯರು. ಒಟ್ಟಿಗೆ ಕ್ರಿಕೆಟ್ ಆಡುತ್ತಾ ಬೆಳೆದ ಇವರಿಬ್ಬರಿಗೆರು ಒಬ್ಬನೇ ಗುರು. ಕೋಚ್ ರಮಾಕಾಂತ್ ಅಜ್ರೇಕರ್ ಗರಡಿಯಲ್ಲಿ ಪಳಗಿದ ಇಬ್ರೂ ಹತ್ತು ಹಲವು ದಾಖಲೆಗಳನ್ನು ಜೊತೆಯಾಗಿಯೇ ಮಾಡಿದರು. ಇವರಿಬ್ಬರ ರೈಟ್ ಹ್ಯಾಂಡ್- ಲೆಫ್ಟ್ ಹ್ಯಾಂಡ್ ಕಾಂಬಿನೇಶನ್ ಬೌಲರ್‌ಗಳಿಗೆ ತಲೆನೋವಿನ ವಿಷಯವಾಗಿತ್ತು. ಎಲ್ಲವೂ ಸರಿಯಾಗಿದ್ದರೆ ವಿನೋದ್ ಕಾಂಬ್ಳಿ ಇಂದು ಸಚಿನ್ ಥರವೇ ಕ್ರಿಕೆಟ್ ಕ್ಷೇತ್ರದ ಅದ್ಭುತ ಹೀರೋ ಆಗಿರಬೇಕಿತ್ತು. ಸಚಿನ್ ಅನ್ನೂ ಮೀರಿಸುವ ಪ್ರತಿಭೆ ಒಂದು ಕಾಲದಲ್ಲಿ ಕಾಂಬ್ಳಿಗೆ ಇತ್ತು. ಆದರೆ ಸಚಿನ್ ತನಗೆ ಸಿಕ್ಕ ಅವಕಾಶಗಳನ್ನು ಚೆನ್ನಾಗಿ ಹೇಗೆ ಬಳಸಿಕೊಳ್ಳಬೇಕು ಎಂಬುದಕ್ಕೆ ಮಾದರಿ ಆದರು. ಕಾಂಬ್ಳಿ ಕ್ರಿಕೆಟಿಗನೊಬ್ಬ ಹೇಗಿರಬಾರದು ಎಂಬುದಕ್ಕೆ ಉದಾಹರಣೆಯಾದರು. ಆಟದಲ್ಲಿ ಅಶಿಸ್ತು ರೂಢಿಸಿಕೊಂಡರು, ಮಾದಕ ವ್ಯಸನಿಯಾದರು, ಗೆಳೆಯರ ಜೊತೆಗೂ ಮನಸು ಮುರಿದುಕೊಂಡರು. ಸಂಸಾರದಲ್ಲೂ ಗಲಾಟೆ ಮಾಡಿಕೊಂಡರು. ಕಾಂಬ್ಳಿ ಬಾಳು ಗೋಳಿನ ಗೂಡಾಯಿತು.

ಈವರಿಬ್ರೂ ಮೊದಲು ಒಟ್ಟಾಗಿ ಫೀಲ್ಡಿಗೆ ಇಳಿದಿದ್ದು 1988ರಲ್ಲಿ ಮುಂಬಯಿಯ ಆಜಾದ್ ಮೈದಾನದಲ್ಲಿ. ರಮಾಕಾಂತ್ ಅಚ್ರೇಕರ್ ಅವರ ಇಬ್ಬರು ಶಿಷ್ಯರು ಅಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಹ್ಯಾರಿಸ್ ಶೀಲ್ಡ್ ಟೂರ್ನಿಯ ಸೆಮಿ-ಫೈನಲ್ ಪಂದ್ಯದಲ್ಲಿ ಶಾರದಾಶ್ರಮ ವಿದ್ಯಾಮಂದಿರ ತಂಡದ ಪರವಾಗಿ ಆಡಿದ ಇಬ್ಬರೂ ತಮ್ಮ ಜೊತೆಯಾಟದ ವೇಳೆ ಸಚಿನ್ 326 ರನ್ ಹಾಗೂ ವಿನೋದ್ ಕಾಂಬ್ಳಿ 349 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು. ಆ ಶ್ರೇಷ್ಠ ಜೊತೆಯಾಟ ಸಚಿನ್ ಮತ್ತು ಕಾಂಬ್ಳಿ ಕ್ರಿಕೆಟ್ ಕರಿಯರ್‌ನಲ್ಲಿ ಮಹತ್ವದ ತಿರುವು ನೀಡಿತ್ತು. ಮುಂದಿನ ವರ್ಷವೇ (1989) ಪಾಕಿಸ್ತಾನದ ವಿರುದ್ಧ ಕರಾಚಿ ಟೆಸ್ಟ್‌ನ ಮೂಲಕ ಸಚಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಆಗ ಸಚಿನ್‌ಗೆ ಕೇವಲ 16 ವರ್ಷ ಮತ್ತು 205 ದಿನ. ಇದಾಗಿ ಎರಡು ವರ್ಷ ಬಳಿಕ ಅಂದರೆ ಅಕ್ಟೋಬರ್ 1991ರಲ್ಲಿ ಶಾರ್ಜಾ ಮೈದಾನದಲ್ಲಿ ಪಾಕಿಸ್ತಾನದ ವಿರುದ್ಧ ಕಾಂಬ್ಳಿ ತಮ್ಮ ODI ಚೊಚ್ಚಲ ಪಂದ್ಯ ಆಡಿದರು.

ಟೆಸ್ಟ್ ಕ್ರಿಕೆಟ್‌ನಲ್ಲಿ ವಿನೋದ್ ಕಾಂಬ್ಳಿ ಅವರ ಆರಂಭ ಎಷ್ಟು ಅದ್ಭುತವಾಗಿತ್ತು ಎಂದರೆ ಮೊದಲ ಏಳು ಟೆಸ್ಟ್ ಪಂದ್ಯಗಳಲ್ಲಿ ನಾಲ್ಕು ಶತಕ ಬಾರಿಸಿದರು. ಅದರಲ್ಲಿ ಎರಡು ದ್ವಿಶತಕಗಳಾಗಿದ್ದವು. ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ ಅಂದರೆ ಕೇವಲ 14 ಇನ್ನಿಂಗ್ಸ್‌ಗಳಲ್ಲಿ 1000 ರನ್ ಗಳಿಸಿ ದಾಖಲೆ ಬರೆದರು. ಸಚಿನ್ ತೆಂಡೂಲ್ಕರ್ ಅವರಂತೆಯೇ ಕಾಂಬ್ಳಿಯನ್ನು ಟೀಮ್ ಇಂಡಿಯಾದ ಭವಿಷ್ಯದ ಸ್ಟಾರ್ ಎಂದು ಕರೆಯಲಾಯಿತು. ಆದರೆ ಯಶಸ್ಸನ್ನು ತಲೆಗೇರಿಸಿಕೊಂಡ ಕಾಂಬ್ಳಿ ಕೆರಿಯರ್‌ನಲ್ಲಿ ಹಾಗೂ ವೈಯಕ್ತಿಕ ಬದುಕಿನಲ್ಲಿ ತಪ್ಪು ಹಜ್ಜೆ ಹಾಕತೊಡಗಿದರು. ಕುಡಿತದಿಂದಾಗಿ ಆಟದಲ್ಲಿ ಹಿಡಿತಕಳೆದುಕೊಳ್ಳಲಾರಂಭಿಸಿದರು. ನವೆಂಬರ್ 1995ರಲ್ಲಿ 24 ವರ್ಷ ವಯಸ್ಸಿನಲ್ಲಿದ್ದಾಗ ಕಾಂಬ್ಳಿ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ನ್ಯೂಜಿಲೆಂಡ್ ವಿರುದ್ಧ ಆಡಿದರು. ಅಕ್ಟೋಬರ್ 2000ರ ನಂತರ ಭಾರತದ ODI ತಂಡದಲ್ಲೂ ಅವರಿಗೆ ಸ್ಥಾನ ಸಿಗಲಿಲ್ಲ. ಕೋಚಿಂಗ್, ರಿಯಾಲಿಟಿ ಶೋಗಳು ಮತ್ತು ರಾಜಕೀಯದಲ್ಲಿಯೂ ತಮ್ಮ ಅದೃಷ್ಟ ಪರೀಕ್ಷಿಸಿದರು. ಆದರೆ ಶಿಸ್ತಿನ ಕೊರತೆಯಿಂದಾಗಿ ಅವುಗಳಲ್ಲಿಯೂ ಅವರಿಗೆ ಯಶಸ್ಸುಸಿಗಲಿಲ್ಲ.
ವೈಯಕ್ತಿಕ ಜೀವನದಲ್ಲೂ ಕಾಂಬ್ಳಿ ಸುಖ ಕಾಣಲಿಲ್ಲ. ಕಾಂಬ್ಳಿ ಪುಣೆಯ ಹೋಟೆಲ್ ಬ್ಲೂ ಡೈಮಂಡ್‌ನಲ್ಲಿ ರಿಸೆಪ್ಶನಿಸ್ಟ್ ಆಗಿದ್ದ ನೋಯೆಲಾ ಲೂಯಿಸ್ ಅವರನ್ನು 1998ರಲ್ಲಿ ವಿವಾಹವಾದರು. ಈ ದಾಂಪತ್ಯ ವಿಚ್ಛೇದನದಲ್ಲಿ ಕೊನೆಗೊಂಡಿತು. ನಂತರ ಕಾಂಬ್ಳಿ ಮಾಡೆಲ್ ಆಂಡ್ರಿಯಾ ಹೆವಿಟ್ ಅವರನ್ನು ವಿವಾಹವಾದರು. ಈ ದಾಂಪತ್ಯದಿಂದ ಒಬ್ಬ ಮಗ ಮತ್ತು ಮಗಳು ಜನಿಸಿದ್ದಾರೆ. ಮಾದಕ ವ್ಯಸನ ಕಾಂಬ್ಳಿ ಅವರನ್ನು ಪೊಲೀಸ್ ಠಾಣೆಗೂ ಎಳೆದುತಂದಿತು. ಬಾಲಿವುಡ್ ಗಾಯಕರೊಬ್ಬರು ಹೊಡೆದರು ಎಂದು ಪೊಲೀಸ್ ಠಾಣೆ ಮೆಟ್ಟಲೇರಿದರು.1996ರ ವಿಶ್ವಕಪ್ ಕ್ರೀಡಾಕೂಟದ ವೇಳೆ ಅಂದಿನ ನಾಯಕ ಮೊಹಮ್ಮದ್ ಅಜರುದ್ದೀನ್ ವಿರುದ್ದ ಮ್ಯಾಚ್ ಫಿಕ್ಸಿಂಗ್ ಆರೋಪ ಮಾಡಿದರು. 2015ರಲ್ಲಿ ಮನೆಯ ಕೆಲಸದಾಕೆಯ ಮೇಲೆ ಹಲ್ಲೆ ಮಾಡಿ, ಅಕ್ರಮ ಬಂಧನದಲ್ಲಿ ಇಟ್ಟಿದ್ದಾರೆ ಎನ್ನುವ ಆರೋಪವೂ ಇವರ ವಿರುದ್ದ ಕೇಳಿ ಬಂತು. ಕೆಲವು ವರ್ಷದ ಕಳಗೆ ಕುಡಿದ ಮತ್ತಿನಲ್ಲಿ ತನ್ನ ಪತ್ನಿಯ ಮೇಲೆಯೇ ಹಲ್ಲೆ ನಡೆಸಿದರು. ಪತ್ನಿ ಇವರ ವಿರುದ್ದ ಠಾಣೆಗೆ ದೂರು ನೀಡಿದರು.

ಹೀಗೆ ಸಚಿನ್ ಶಿಸ್ತು, ಪ್ರತಿಭೆ, ಜೀವನ ಶೈಲಿಯ ಮೂಲಕ ಬದುಕನ್ನು ಸುಂದರವಾಗಿ ಕಟ್ಟಿಕೊಂಡರೆ ಕಾಂಬ್ಳಿ ಪ್ರತಿಭೆ ಇದ್ದರೂ ಅಶಿಸ್ತು, ಕುಡಿತದ ಚಟದಿಂದಾಗಿ ಸರ್ವನಾಶವಾಗಿ ಹೋದರು. ಪ್ರತಿಭಾವಂತರು ಹೇಗಿರಬಾರದು ಎಂಬುದಕ್ಕೆ ಕೆಟ್ಟ ಮಾದರಿಯಾದರು. ಸಾಕಷ್ಟು ನೆರವಾಗಿದ್ದರೂ, ನನ್ನ ಕಷ್ಟದ ಸಮಯದಲ್ಲಿ ಸಚಿನ್ ತೆಂಡೂಲ್ಕರ್ ಕೈಹಿಡಿಯಲಿಲ್ಲ ಎಂದು ಬಹಿರಂಗವಾಗಿ ದೂರಿದರು. ಕ್ರಿಕೆಟ್ ಲೋಕದಿಂದ ದೂರವಾಗಿರುವ ಕಾಂಬ್ಳಿ ಆರೋಗ್ಯವೂ ಹದಗೆಟ್ಟಿದೆ, ಹಣಕಾಸಿನ ಸ್ಥಿತಿಯೂ ಕಳಪೆಯಾಗಿದೆ. ಸರಿಯಾಗಿ ನಡೆಯಲೂ ಕಷ್ಟವಾಗುತ್ತಿದೆ. ಮಾನಸಿಕವಾಗಿಯೂ ಅವರು ಸ್ಥಿರವಾಗಿಲ್ಲ.
ಕೆಲವು ದಿನಗಳ ಹಿಂದೆ, ತಮ್ಮ ಗುರು ಅಚ್ರೇಕರ್ ಸ್ಮರಣಾರ್ಥ ನಡೆದ ಕಾರ್ಯಕ್ರಮದಲ್ಲಿ ಅಪರೂಪಕ್ಕೆ ಈ ಇಬ್ಬರೂ ಸ್ನೇಹಿತರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಒಂದೆಡೆ ಫಿಟ್ ಎಂಡ್ ಫೈನ್ ಆಗಿದ್ದ ತೆಂಡೂಲ್ಕರ್, ಇನ್ನೊಂದು ಕಡೆ ಗುರುತಿಸಲು ಕಷ್ಟವಾಗುವಷ್ಟು ಬದಲಾಗಿದ್ದ ಕಾಂಬ್ಳಿ. ಇದು ಈ ಇಬ್ಬರು ಗೆಳೆಯರ ಕಥೆ. ಒಬ್ಬ ಉಪ್ಪರಿಗೆಯಲ್ಲಿದ್ದರೆ, ಮತ್ತೊಬ್ಬರು ತಿಪ್ಪೆ ಮೇಲಿದ್ದಾರೆ. ಬದುಕು ಎಂಥಾ ವಿಚಿತ್ರ ಅಲ್ವಾ?
ಇದನ್ನೂ ಓದಿ: Vinod Kambli: ಚೇತರಿಕೆ ಕಂಡ ತಕ್ಷಣ ವಿನೋದ್ ಕಾಂಬ್ಳಿ ಹೇಳಿದ್ದೇನು?