Monday, 12th May 2025

Vasudev Devnani: ರಾಜಸ್ಥಾನ ಸ್ಪೀಕರ್‌ಗೆ ಪ್ರಾಣಾಪಾಯ ಇದ್ಯಾ? ಕಾರು ಚೇಸ್‌ ಮಾಡಿ, ಫೋಟೊ ಕ್ಲಿಕ್ಕಿಸಿ ದುಷ್ಕರ್ಮಿಗಳಿಂದ ಆತಂಕ ಸೃಷ್ಟಿ!

Vasudev Devnani

ಜೈಪುರ: ರಾಜಸ್ಥಾನ ವಿಧಾನಸಭಾ ಸ್ಪೀಕರ್ (Rajasthan Assembly Speaker) ವಾಸುದೇವ್ ದೇವ್ನಾನಿ (Vasudev Devnani) ಅವರು ಮಂಗಳವಾರ ಜೈಪುರದಿಂದ ಅಜ್ಮೀರ್‌ಗೆ ಹೋಗುತ್ತಿದ್ದಾಗ ಅವರ ಕಾರನ್ನು ಅನುಮಾನಾಸ್ಪದ ವಾಹನವೊಂದು ಹಿಂಬಾಲಿಸಿದೆ ಎಂದು ವರದಿಯಾಗಿದೆ. ನಂತರ ದೇವ್ನಾನಿ ಭದ್ರತಾ ಬೆಂಗಾವಲು ಪಡೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ಹಲವಾರು ಪೊಲೀಸ್‌ ತಂಡಗಳನ್ನು ಹೆದ್ದಾರಿ ಬಳಿ ನಿಯೋಜಿಸಲಾಗಿದೆ ಎಂದು ತಿಳಿದು ಬಂದಿದೆ.

ಮೂಲಗಳ ಪ್ರಕಾರ, ದೇವ್ನಾನಿ ಅವರು ತಮ್ಮ ಊರಿಗೆ ಪ್ರಯಾಣಿಸುತ್ತಿದ್ದಾಗ, ಮೂರು-ನಾಲ್ಕು ಯುವಕರು ಇದ್ದ ಅನುಮಾನಾಸ್ಪದ ಕಾರು, ಹೆದ್ದಾರಿಯಲ್ಲಿ ಸ್ವಲ್ಪ ಸಮಯದವರೆಗೆ ಅವರ ವಾಹನವನ್ನು ಹಿಂಬಾಲಿಸಲು ಪ್ರಾರಂಭಿಸಿತು. ಅವರು ತಮ್ಮ ಮೊಬೈಲ್ ಫೋನ್‌ಗಳಿಂದ ದೇವ್ನಾನಿ ಕಾರಿನ ವೀಡಿಯೊವನ್ನು ಸಹ ಚಿತ್ರೀಕರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ವರದಿಯಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು ಇಡೀ ಜಿಲ್ಲೆಯಲ್ಲಿ ದಿಗ್ಬಂಧನವನ್ನು ವಿಧಿಸಿದ್ದಾರೆ. ಈ ಬಗ್ಗೆ ಸಿವಿಲ್ ಲೈನ್ ಪೊಲೀಸ್ ಠಾಣಾಧಿಕಾರಿ ಛೋಟಾಲಾಲ್ ಮೀನಾ ಮಾತನಾಡಿ, ಉನ್ನತ ಅಧಿಕಾರಿಗಳ ಸೂಚನೆ ಮೇರೆಗೆ ಒಳಬರುವ ಮತ್ತು ಹೊರಹೋಗುವ ವಾಹನಗಳ ತೀವ್ರ ತಪಾಸಣೆ ಹಾಗೂ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ದೇವನಾನಿ ಸುರಕ್ಷಿತವಾಗಿ ಅಜ್ಮೀರ್ ತಲುಪಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತ್ಯೇಕ ಘಟನೆಯಲ್ಲಿ ನ್ಯಾಯಾಧೀಶರೊಬ್ಬರ ಮೇಲೆ ಕುಖ್ಯಾತ ಗ್ಯಾಂಗ್‌ಸ್ಟರ್‌ ತಂಡವೊಂದು ದಾಳಿಗೆ ಯತ್ನಿಸಿರುವ ಶಾಕಿಂಗ್‌ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ದರೋಡೆಕೋರ ಸುಂದರ್ ಭಾಟಿ ನೇತೃತ್ವದ ಗ್ಯಾಂಗ್‌ನ ಗೂಂಡಾಗಳು ತಮ್ಮ ಮೇಲೆ ದಾಳಿ ನಡೆಸಿದ್ದಾರೆ ಎಂದು ಫರೂಕಾಬಾದ್‌ನ ನ್ಯಾಯಾಧೀಶರು ಆರೋಪಿಸಿದ್ದಾರೆ.

ಅಕ್ಟೋಬರ್ 29 ರಂದು, ನೋಯ್ಡಾಗೆ ಪ್ರಯಾಣಿಸುತ್ತಿದ್ದಾಗ, ಫರೂಕಾಬಾದ್‌ನ ಅಬಕಾರಿ ಕಾಯ್ದೆಯಡಿಲ್ಲಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಡಾ.ಅನಿಲ್ ಕುಮಾರ್ ಸಿಂಗ್‌ ಅವರ ಮೇಲೆ ಕಿಡಿಗೇಡಿಗಳು ದಾಳಿಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಖೈರ್‌ನ ಗೋಮ್ತಿ ಚೌರಾಹಾ ಬಳಿ, ಬಿಳಿ ಬಣ್ಣದ ಬೊಲೆರೋ ಎಸ್‌ಯುವಿಯಲ್ಲಿ ಬಂದ ಐವರು ತಮ್ಮ ಕಾರನ್ನು ಹಿಂಬಾಲಿಸಿದ್ದಲ್ಲದೆ ತಮಗೆ ಕಿರುಕುಳ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಈ ಘಟನೆಯ ಹಿಂದೆ ಕುಖ್ಯಾತ ದರೋಡೆಕೋರ ಸುಂದರ್ ಭಾಟಿ ಗ್ಯಾಂಗ್‌ನ ಸದಸ್ಯರಿದ್ದಾರೆ ಎಂದು ಊಹೆ ಮಾಡಲಾಗಿದೆ. ಗೌತಮ್ ಬುದ್ಧ ನಗರದಲ್ಲಿ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ (ಎಡಿಜೆ) ಆಗಿದ್ದ ಅವಧಿಯಲ್ಲಿ, ಏಪ್ರಿಲ್ 5, 2021 ರಂದು ಸಿಂಗ್ ಅವರು ಈ ಗ್ಯಾಂಗ್‌ನ ಹಲವು ಸದಸ್ಯರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದರು. ಅದೇ ದ್ವೇಷದ ಇಟ್ಟುಕೊಂಡು ಈಗ ತಮ್ಮ ಮೇಲೆ ದಾಳಿ ನಡೆಸಲು ಪ್ರಯತ್ನಪಟ್ಟಿರಬಹುದು ಎಂದು ಅವರು ಊಹಿಸಿದ್ದಾರೆ.

ಈ ಸುದ್ದಿಯನ್ನೂ ಓದಿ : Keerthy Suresh : ಕೀರ್ತಿ ಸುರೇಶ್ ವಿವಾಹ ಆಮಂತ್ರಣ ಪತ್ರಿಕೆ ವೈರಲ್‌ , ಗೋವಾದಲ್ಲಿ ನಡೆಯಲಿದೆ ಅದ್ಧೂರಿ ಮದುವೆ!