Monday, 12th May 2025

Vande Bharat Train: ವಂದೇ ಭಾರತ್‌ ರೈಲಿಗೆ ಕಲ್ಲು ತೂರಾಟ; ಇಬ್ಬರು ಕಿಡಿಗೇಡಿಗಳು ಅರೆಸ್ಟ್‌

Vande bharat train

ಪಟನಾ: ವಂದೇ ಭಾರತ್‌ ರೈಲು(Vande Bharat Train)ಗಳಿಗೆ ಮತ್ತೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಘಟನೆ ವರದಿಯಾಗಿದೆ. ಬಿಹಾರದ ಗಯಾದಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ಕಿಡಿಗೇಡಿಗಳನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ ಎಂದು ರೈಲ್ವೆ ರಕ್ಷಣಾ ಪಡೆ (RPF)‌ ಅಧಿಕಾರಿಗಳು ತಿಳಿಸಿದ್ದಾರೆ.

ಮೂಲಗಳ ಪ್ರಕಾರ, ರೈಲು ಸಂಖ್ಯೆ 20894 (ಪಾಟ್ನಾ ಟಾಟಾ ವಂದೇ ಭಾರತ್‌ ಎಕ್ಸ್‌ಪ್ರೆಸ್‌) ಮತ್ತು ರೈಲು ಸಂಖ್ಯೆ 22304 (ಗಯಾ ಹೌರಾ ವಂದೇ ಭಾರತ್‌ ಎಕ್ಸ್‌ಪ್ರೆಸ್)‌ ರೈಲು ಗಯಾ ನಿಲ್ದಾಣದಿಂದ ಹೊರಟ ನಂತರ ಮನ್ಪುರ್‌ ರೈಲ್ವೆ ವಿಭಾಗದ ಬಳಿ ಅಪರಿಚಿತ ವ್ಯಕ್ತಿಗಳು ಕಲ್ಲು ಎಸೆದಿದ್ದಾರೆ ಎನ್ನಲಾಗಿದೆ. ಈ ಕುರಿತು ಒಬ್ಬರು ತಮ್ಮ X ಖಾತೆಯಲ್ಲಿ ದೂರನ್ನು ಪೋಸ್ಟ್‌ ಮಾಡಿದ್ದಾರೆ.

ಕಲ್ಲು ತೂರಿದ ಪರಿಣಾಮ ರೈಲಿನ ಕಿಟಕಿ ಗಾಜುಗಳು ಬಿರುಕು ಬಿಟ್ಟಿವೆ. ಘಟನೆಯ ಬಗ್ಗೆ ಮಾಹಿತಿ ಸಿಕ್ಕ ಬೆನ್ನಲ್ಲೇ ಗಯಾ ಆರ್‌ಪಿಎಫ್‌ ತಂಡವು ವಿಶೇಷ ತಂಡವೊಂದನ್ನು ರಚಿಸಿ ಘಟನಾ ಸ್ಥಳಕ್ಕೆ ಭೇಟಿ ಕೊಟ್ಟು ಆರೋಪಿಗಳನ್ನು ಪತ್ತೆ ಹಚ್ಚಿ ಅರೆಸ್ಟ್‌ ಮಾಡಿದ್ದಾರೆ. ಆರೋಪಿಗಳು ಮನ್ಪುರ್‌ ನಿವಾಸಿಗಳಾಗಿದ್ದು ಅವರನ್ನು ಮನೀಶ್‌ ಕುಮಾರ್(‌20) ಮತ್ತು ವಿಕಾಸ್‌ ಕುಮಾರ್‌(20) ಎಂದು ಗುರುತಿಸಲಾಗಿದೆ. ಈ ಹಿಂದೆಯೇ ಇಬ್ಬರ ಮೇಲೂ ಕ್ರಿಮಿನಲ್‌ ಕೇಸ್‌ಗಳು ದಾಖಲಾಗಿದ್ದು, ಜಾಮೀನಿನ ಮೇಲೆ ಹೊರ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಲಿಖಿತ ದೂರಿನ ಆಧಾರದ ಮೇಲೆ ಆರ್‌ಪಿಎಫ್‌ ಪೋಸ್ಟ್‌ ಗಯಾದಲ್ಲಿ ಕಲಂ 153,147 ರೈಲ್ವೆ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಅಸಿಸ್ಟಂಟ್‌ ಸಬ್‌ ಇನ್ಸ್‌ಪೆಕ್ಟರ್‌ ರಾಮಸೇವಕ್‌ ಅವರು ಹೇಳಿದ್ದಾರೆ.

ವಿಚಾರಣೆ ವೇಳೆ ಇಬ್ಬರು ಆರೋಪಿಗಳು ಇನ್ನು ಹೆಚ್ಚಿನ ರೈಲುಗಳನ್ನು ಟಾರ್ಗೆಟ್‌ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಚಲಿಸುತ್ತಿರುವ ಮತ್ತು ನಿಂತಿರುವ ರೈಲುಗಳ ಮೇಲೆ ಕಲ್ಲು ತೂರುವುದು ಕ್ರಿಮಿನಲ್‌ ಕೃತ್ಯವಾಗಿದ್ದು, ಕಲ್ಲು ಎಸೆದಿರುವ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ರೈಲ್ವೆ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕ ದಿಲೀಪ್ ಕುಮಾರ್ ಮಾತನಾಡಿ, ಭಾರತೀಯ ರೈಲ್ವೆಯು ದೇಶದ ಆಸ್ತಿಯಾಗಿದ್ದು, ರೈಲುಗಳನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಆಯಾ ಗ್ರಾಮಗಳು ಮತ್ತು ನಗರಗಳಲ್ಲಿ ಚಲಿಸುವ ರೈಲುಗಳಿಗೆ ಕಲ್ಲು ಎಸೆಯುವ ಆರೋಪಿಗಳನ್ನು ಗುರುತಿಸಿ ಅದರ ಬಗ್ಗೆ ಕೂಡಲೇ ಆರ್‌ಪಿಎಫ್ ಮತ್ತು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡುವಂತೆ ಅವರು ಜನರಲ್ಲಿ ಮನವಿ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ: ವಂದೇ ಭಾರತ್​ ರೈಲುಗಳಲ್ಲಿ ಇಂದಿನಿಂದ ಮಿರಾಕಲ್​ ಸ್ವಚ್ಛತಾ ಪರಿಕಲ್ಪನೆ ಆರಂಭ