Wednesday, 14th May 2025

‘ಮಿತ್ರ 181’ ಸಹಾಯವಾಣಿ ಕೇಂದ್ರಕ್ಕೆ ಎರಡು ಲಕ್ಷ ಕರೆಗಳು

ತಿರುವನಂತಪುರಂ: ಮಹಿಳೆಯರಿಗಾಗಿ ತೆರೆಯಲಾದ ‘ಮಿತ್ರ 181’ ಎಂಬ ಸಹಾಯವಾಣಿ ಕೇಂದ್ರ ಸೇವೆಯನ್ನು ಹೆಚ್ಚಿನ ಜನರು ಬಳಸಿಕೊಳ್ಳಬೇಕು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶನಿವಾರ ಹೇಳಿದ್ದಾರೆ. ಸಹಾಯವಾಣಿ ಕೇಂದ್ರದಲ್ಲಿ ಸ್ವೀಕರಿಸಿದ ಕರೆಗಳ ಸಂಖ್ಯೆ ಎರಡು ಲಕ್ಷ ದಾಟಿದೆ.

ತುರ್ತು ಸಹಾಯವಾಣಿಯಲ್ಲಿ ಸ್ವೀಕರಿಸಿದ ಒಟ್ಟು ಕರೆಗಳಲ್ಲಿ, ಕರೆ ಮಾಡಿದ 90,000 ಜನರಿಗೆ ಅಗತ್ಯ ಸೇವೆ ಒದಗಿಸಲಾಗಿದೆ ಎಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಈ ಸಹಾಯವಾಣಿ ಮಹಿಳೆಯರ ಸುರಕ್ಷತೆ ಮತ್ತು ಕಲ್ಯಾಣಕ್ಕಾಗಿ 2017 ರಲ್ಲಿ ಆರಂಭಿಸಲಾಗಿತ್ತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಡಿಯಲ್ಲಿ ಕೇರಳ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು (KSWDC) 24 x 7 ತುರ್ತು ಸಹಾಯವಾಣಿ ಸೇವೆಯನ್ನು ನಡೆಸುತ್ತಿದೆ.

ಕೌನ್ಸೆಲಿಂಗ್ ಜೊತೆಗೆ, ಅಗತ್ಯವಿರುವವರಿಗೆ ಪೊಲೀಸ್ ಸೇವೆ, ಆಯಂಬುಲೆನ್ಸ್, ಆಸ್ಪತ್ರೆ ಮತ್ತು ಕಾನೂನು ನೆರವನ್ನು ವಿವಿಧ ಇಲಾಖೆಗಳ ಸಮನ್ವಯದಲ್ಲಿ ನೀಡಲಾಗುತ್ತಿದೆ. ಕರೆ ಮಾಡುವ ಪ್ರತಿಯೊಬ್ಬರ ಸಮಸ್ಯೆ ಗಳನ್ನು ಆಲಿಸುತ್ತಾರೆ ಮತ್ತು ಸರಿಯಾದ ಪರಿಹಾರ ಕಂಡುಕೊಳ್ಳುವವರೆಗೆ ಮತ್ತು ನ್ಯಾಯ ದೊರಕುವು ದನ್ನು ಖಚಿತಪಡಿಸಿಕೊಳ್ಳುವವರೆಗೂ ನಿಗಾ ವಹಿಸುತ್ತಾರೆ ಎಂದು ಹೇಳಿದರು. ಸಹಾಯವಾಣಿಗೆ ಬಂದ ಒಟ್ಟು ಕರೆಗಳಲ್ಲಿ, 60,000 ಕರೆಗಳೊಂದಿಗೆ ಪರಿಣಾಮಕಾರಿಯಾಗಿ ವ್ಯವಹರಿಸಲಾಗಿದೆ.

ಟೋಲ್ ಫ್ರೀ ಸಂಖ್ಯೆ 181 ಕ್ಕೆ ಡಯಲ್ ಮಾಡುವ ಮೂಲಕ ಪ್ರಮುಖ ಆಸ್ಪತ್ರೆಗಳು, ಪೊಲೀಸ್ ಠಾಣೆಗಳು ಮತ್ತು ಆಯಂಬುಲೆನ್ಸ್ ಸೇವೆ ಕೂಡ ತಕ್ಷಣವೇ ಲಭ್ಯವಿರುತ್ತದೆ ಎಂದು ಸಿಎಂ ಹೇಳಿದರು.

Leave a Reply

Your email address will not be published. Required fields are marked *