Tuesday, 13th May 2025

ಕೃಷಿ ಕಾಯ್ದೆ ವಾಪಸ್ ಹೇಳಿಕೆ: ತೋಮರ್ ಯೂಟರ್ನ್

Narendra Singh Tomar

ನವದೆಹಲಿ: ಕೃಷಿ ಕಾಯ್ದೆ ವಾಪಸ್ ತರುವ ಕುರಿತು ತಾವು ಹೇಳಿಕೆ ನೀಡಿಯೇ ಇಲ್ಲ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಯೂಟರ್ನ್ ಹೇಳಿಕೆ ನೀಡಿದ್ದಾರೆ.

ಈ ಹೇಳಿಕೆ ದೇಶಾದ್ಯಂತ ರೈತಾಪಿ ವಲಯದಲ್ಲಿ ವ್ಯಾಪಕ ವಿರೋಧಕ್ಕೂ ಕಾರಣವಾಗಿತ್ತು. ಇದರ ಬೆನ್ನಲ್ಲೇ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ತಮ್ಮ ಹೇಳಿಕೆಗೆ ಉಲ್ಟಾ ಹೊಡೆದಿದ್ದಾರೆ. ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದ್ದು, ತಾವು ಆ ರೀತಿ ಹೇಳಿಕೆಯನ್ನೇ ನೀಡಿಲ್ಲ. ಇವೆಲ್ಲಾ ಕೇವಲ ಅಪಪ್ರಚಾರ ಎಂದು ಹೇಳಿದ್ದಾರೆ.

ಮಹಾರಾಷ್ಟ್ರದ ನಾಗ್ಪುರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ತೋಮರ್, ಮತ್ತೆ ತಿದ್ದುಪಡಿ ಗಳೊಂದಿಗೆ ಕೃಷಿ ಕಾಯ್ದೆಯನ್ನು ತರುತ್ತೇವೆ ಎಂದು ಹೇಳಿದ್ದರು.

ದೇಶಕ್ಕೆ ಸ್ವತಂತ್ರ್ಯ ಬಂದ 70 ವರ್ಷಗಳ ಬಳಿಕ ಕೃಷಿ ವಿಭಾಗದ ಸರ್ವತೋಮುಖ ಅಭಿವೃದ್ದಿಗಾಗಿ ಕೇಂದ್ರ ಸರ್ಕಾರ ಕ್ರಾಂತಿಕಾರಿ ಕಾನೂನು ತರಲು ಮುಂದಾಗಿತ್ತು. ಇದು ಕೆಲ ಪಟ್ಟಭದ್ರ ಹಿತಾಸಕ್ತಿಗಳಿಗೆ ಹಿಡಿಸಲಿಲ್ಲ. ಹೀಗಾಗಿ ಕಾಯ್ದೆಗಳ ಕುರಿತು ಅಪಪ್ರಚಾರ ಮಾಡಿ ಅವುಗಳ ವಿರುದ್ಧ ಪ್ರತಿಭಟಿಸು ವಂತೆ ಮಾಡಿದರು. ಆದರೆ ಅವರಿಗೆ ನೆನಪಿರಲಿ.. ಸರ್ಕಾರ ಇದರಿಂದ ನಿರಾಶೆಗೊಂಡಿಲ್ಲ. ನಾವು ಒಂದು ಹೆಜ್ಜೆ ಹಿಂದಕ್ಕೆ ಹೋಗಿರಬಹುದು. ಆದರೆ ಅದಕ್ಕಿಂತ ವೇಗದಲ್ಲಿ ಮತ್ತೆ ಮುನ್ನುಗ್ಗುತ್ತೇವೆ. ನಾವು ಖಂಡಿತಾ ಮತ್ತೆ ಮುಂದುವರಿಯುತ್ತೇವೆ ಏಕೆಂದರೆ ರೈತರು ದೇಶದ ಬೆನ್ನೆಲುಬು ಎಂದು ಹೇಳಿದ್ದರು.