Sunday, 11th May 2025

Tollywood: ತೆಲಂಗಾಣ ಸಿಎಂ ಜತೆ ತೆಲುಗು ಚಿತ್ರರಂಗದ ಪ್ರಮುಖರ ಸಭೆ- ನಟರ ಜವಾಬ್ದಾರಿ ಬಗ್ಗೆ ಎಚ್ಚರಿಸಿದ ರೇವಂತ್‌ ರೆಡ್ಡಿ

Tollywood

ಹೈದರಾಬಾದ್‌: ಸಂಧ್ಯಾ ಥಿಯೇಟರ್‌ನಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಅಲ್ಲು ಅರ್ಜುನ್ (Allu Arjun) ಬಂಧನದ ವಿವಾದದ ನಡುವೆ ನಿರ್ಮಾಪಕ ಮತ್ತು ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್ ಸೇರಿದಂತೆ ತೆಲುಗು ಚಿತ್ರರಂಗದ ಪ್ರಮುಖರು (Tollywood) ಗುರುವಾರ ತೆಲಂಗಾಣ ಮುಖ್ಯಮಂತ್ರಿ (Telangana CM) ರೇವಂತ್ ರೆಡ್ಡಿ (Revanth Reddy) ಅವರೊಂದಿಗೆ ನಿರ್ಣಾಯಕ ಸಭೆ ನಡೆಸಿದರು. 

ಸಭೆಯಲ್ಲಿ ಕಾಲ್ತುಳಿತ ಪ್ರಕರಣದ ಬಗ್ಗೆ ಮಾತನಾಡಿದ ಸಿಎಂ ಅಭಿಮಾನಿಗಳನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ಸೆಲೆಬ್ರಿಟಿಗಳು ಹೊಂದಿರಬೇಕು ಮತ್ತು ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ಚಲನಚಿತ್ರ ನಿರ್ಮಾಪಕರು ಮತ್ತು ನಟರಿಗೆ ತಿಳಿಸಿದ್ದಾರೆ ಎಂಬ ಮಾಹಿತಿಯನ್ನು ಮೂಲಗಳು ತಿಳಿಸಿವೆ.

ನಿರ್ಮಾಪಕರಾದ ಅಲ್ಲು ಅರವಿಂದ್, ಸುರೇಶ್ ದಗ್ಗುಬಾಟಿ, ಸುನಿಲ್ ನಾರಂಗ್, ಸುಪ್ರಿಯಾ, ನಾಗ ವಂಶಿ ಮತ್ತು ಪುಷ್ಪ 2 ನಿರ್ಮಾಪಕರಾದ ನವೀನ್ ಯೆರ್ನೇನಿ ಮತ್ತು ರವಿಶಂಕರ್ ಹಾಗೂ ನಟರಾದ ವೆಂಕಟೇಶ್ ದಗ್ಗುಬಾಟಿ, ನಾಗಾರ್ಜುನ ಅಕ್ಕಿನೇನಿ ಹಾಗೂ ನಿತಿನ್, ವರುಣ್ ತೇಜ್, ಸಿದ್ದು ಜೊನ್ನಲಗಡ್ಡ, ಕಿರಣ್ ಅಬ್ಬಾವರಂ ಮತ್ತು ಶಿವ ಬಾಲಾಜಿ ಭಾಗವಹಿಸಿದ್ದರು. ನಿರ್ದೇಶಕರಾದ ತ್ರಿವಿಕ್ರಮ್ ಶ್ರೀನಿವಾಸ್, ಹರೀಶ್ ಶಂಕರ್, ಅನಿಲ್ ರವಿಪುಡಿ ಮತ್ತು ಬಾಬಿ ಉಪಸ್ಥಿತರಿದ್ದರು ಎಂದು ತಿಳಿದು ಬಂದಿದೆ.

ಪುಷ್ಪ-2 ನಟ ಅಲ್ಲು ಅರ್ಜುನ್ ಮತ್ತು ಮೈತ್ರಿ ಮೂವಿ ಮೇಕರ್ಸ್ ವಿರುದ್ಧ ಹೈದರಾಬಾದ್ ಪೊಲೀಸರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ ನಂತರ ರಾಜ್ಯ ಸರ್ಕಾರವು ಬೆನಿಫಿಟ್ ಶೋಗಳಿಗೆ ಅನುಮತಿ ನೀಡುವುದಿಲ್ಲ ಮತ್ತು ಟಿಕೆಟ್ ದರವನ್ನು ಹೆಚ್ಚಿಸುವುದಿಲ್ಲ ಎಂದು ಘೋಷಿಸಿದ ಹಿನ್ನೆಲೆಯಲ್ಲಿ ಸಭೆ ನಡೆದಿದೆ.

ಡಿ. 5 ರಂದು ಪುಷ್ಪಾ 2 ಪ್ರೀಮಿಯರ್‌ ಶೋ ವೇಳೆ ಸಂಧ್ಯಾ ಥಿಯೇಟರ್‌ ಬಳಿ ನಡೆದ ಕಾಲ್ತುಳಿತದಲ್ಲಿ (Hyderabad stampede) ಮಹಿಳೆಯೊಬ್ಬರು ಮೃತಪಟ್ಟಿದ್ದು, ಆಕೆಯ ಪುತ್ರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು (Hyderabad Police) ತೆಲಗು ನಟ ಅಲ್ಲು ಅರ್ಜುನ್‌ ಅವರನ್ನು ಬಂಧಿಸಿದ್ದರು. ಕೆಳಹಂತದ ನ್ಯಾಯಾಲಯ ನಟನಿಗೆ 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿತ್ತು. ನಂತರ ಹೈಕೋರ್ಟ್‌ ಮಧ್ಯಂತರ ಜಾಮೀನು ನೀಡಿದೆ.

ಈ ಸುದ್ದಿಯನ್ನೂ ಓದಿ : Allu Arjun: ಜೈಲಿನಿಂದ ಹೊರಬಂದ ನಟ ಅಲ್ಲು ಅರ್ಜುನ್‌