Sunday, 11th May 2025

Tirupati Stampede: ಕಾಲ್ತುಳಿತಕ್ಕೆ 6 ಮಂದಿ ಭಕ್ತರು ಸಾವು, ಹಲವರಿಗೆ ಗಾಯ!

Six people died and several others were injured In Stampede At Andhra's Tirupati

ತಿರುಪತಿ: ಆಂಧ್ರ ಪ್ರದೇಶದ ತಿರುಪತಿ ದೇವಸ್ಥಾನದಲ್ಲಿ (Tirupati Stampede) ಕಾಲ್ತುಳಿತಕ್ಕೆ ಸಿಲುಕಿ ಒಟ್ಟು 6 ಮಂದಿ ಸಾವಿಗೀಡಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಬುಧವಾರ ರಾತ್ರಿ ತಿರುಮಲದ ವೆಂಕಟೇಶ್ವರನ ವೈಕುಂಠ ದ್ವಾರ ದರ್ಶನಕ್ಕಾಗಿ ಟೋಕನ್‌ಗಳ ವಿತರಣೆಗಾಗಿ ಕಾಯುತ್ತಿದ್ದ ಭಕ್ತಾದಿಗಳ ನಡುವೆ ನೂಕುನುಗ್ಗಲು ಉಂಟಾಗಿ ಈ ದುರ್ಘಟನೆ ಸಂಭವಿಸಿದೆ.

ಜನವರಿ 10ರಿಂದ ಆರಂಭವಾಗುವ 10 ದಿನಗಳ ವೈಕುಂಠ ದ್ವಾರ ದರ್ಶನಕ್ಕೆ ದೇಶ ವಿದೇಶಗಳಿಂದ ನೂರಾರು ಭಕ್ತರು ಆಗಮಿಸಿದ್ದರು. ಮೃತಪಟ್ಟವರಲ್ಲಿ ಒಬ್ಬರನ್ನು ಮಲ್ಲಿಕಾ ಎಂದು ಗುರುತಿಸಲಾಗಿದ್ದು, ಇವರು ತಮಿಳುನಾಡು ಮೂಲದವರು ಎಂದು ಹೇಳಲಾಗುತ್ತಿದೆ. ಇದರ ನಡುವೆ ಗಾಯಗೊಂಡವರನ್ನು ಚಿಕಿತ್ಸೆಗಾಗಿ ರುಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ವೈಕುಂಠ ದ್ವಾರ ದರ್ಶನ ಟೋಕನ್‌ಗಳ ಹಂಚಿಕೆ ಗುರುವಾರ ಬೆಳಗ್ಗೆ ಆರಂಭವಾಗಲಿದೆ. ಆದರೆ, ಬುಧವಾರ ಸಂಜೆಯಿಂದಲೇ ಕೇಂದ್ರಗಳಲ್ಲಿ ಭಕ್ತರ ದಂಡೇ ಇತ್ತು. ಟೋಕನ್ ವಿತರಣೆಗೆ ಎಂಟು ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಎಂಟು ಕೇಂದ್ರಗಳಲ್ಲಿ 90 ಕೌಂಟರ್‌ಗಳನ್ನು ಒದಗಿಸಲಾಗಿದೆ. ಆದರೆ, ವೈಕುಂಠ ದ್ವಾರ ದರ್ಶನ ಟೋಕನ್‌ಗಾಗಿ ಶ್ರೀನಿವಾಸಂ, ವಿಷ್ಣು ನಿವಾಸ ಮತ್ತು ಸತ್ಯನಾರಾಯಣಪುರಂ ಬೈರಾಗಿಪಟ್ಟೇಡ ರಾಮನಾಯ್ಡು ಶಾಲೆಯ ಕೇಂದ್ರಗಳಿಗೆ ಭಕ್ತರ ದಂಡೇ ಹರಿದು ಬಂತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರಿಂದ ಭಕ್ತಾದಿಗಳ ನಡುವೆ ನೂಕುನುಗ್ಗಲು ಉಂಟಾಯಿತು.

ಆ್ಯಂಬುಲೆನ್ಸ್ ಚಾಲಕರ ನಿರ್ಲಕ್ಷ್ಯ

ಆ್ಯಂಬುಲೆನ್ಸ್ ಚಾಲಕರ ನಿರ್ಲಕ್ಷ್ಯವೇ ಭಕ್ರ ಸಾವಿಗೆ ಕಾರಣ ಎಂದು ವರದಿಗಳು ಹೇಳುತ್ತಿವೆ. ಭಕ್ತರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಟಿಟಿಡಿ ಟೋಕನ್ ನೀಡುವ ಕೇಂದ್ರಗಳಲ್ಲಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿತ್ತು. ಆದರೆ, ಕಾಲ್ತುಳಿತದ ಸಂದರ್ಭದಲ್ಲಿ ಆಂಬ್ಯುಲೆನ್ಸ್ ಚಾಲಕರು ಲಭ್ಯವಿರಲಿಲ್ಲ ಎಂದು ವರದಿಯಾಗಿದೆ. ಗಾಯಾಳುಗಳನ್ನು ಸಕಾಲದಲ್ಲಿ ಆಸ್ಪತ್ರೆಗೆ ಸಾಗಿಸಲು ಸಾಧ್ಯವಾಗದ ಕಾರಣ ನಾಲ್ವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇದೇ ವಿಚಾರವಾಗಿ ಭಕ್ತರೂ ಆರೋಪ ಮಾಡುತ್ತಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಅರ್ಧ ಗಂಟೆಗೂ ಹೆಚ್ಚು ಕಾಲ ಕಾಯಬೇಕಾಯಿತು ಎಂಬ ಆರೋಪಗಳಿವೆ. ಘಟನೆ ನಡೆದ ಸ್ಥಳದಲ್ಲಿ ಡಿಎಸ್‌ಪಿ ವಿರುದ್ಧವೂ ಭಕ್ತರು ಪ್ರತಿಭಟನೆ ನಡೆಸಿದ್ದಾರೆ.

ಆಘಾತ ವ್ಯಕ್ತಪಡಿಸಿದ ಸಿಎಂ ಚಂದ್ರಬಾಬು ನಾಯ್ಡು

ಈ ದುರ್ಘಟನೆ ತಿಳಿಯುತ್ತಿದ್ದ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆಘಾತ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿ, ಎಸ್ಪಿ, ಟಿಟಿಡಿ ಅಧಿಕಾರಿಗಳೊಂದಿಗೆ ಮಾತನಾಡಿ ವಿವರ ಪಡೆದುಕೊಂಡಿದ್ದಾರೆ ಹಾಗೂ ಘಟನೆ ನಡೆದ ಸ್ಥಳದಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

“ವೈಕುಂಠ ದ್ವಾರ ದರ್ಶನದ ಟಿಕೆಟ್ ವಿತರಣೆಯ ಹಿನ್ನೆಲೆಯಲ್ಲಿ ತಿರುಪತಿಯ ವಿವಿಧ ಭಾಗಗಳಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಭಕ್ತರು ಸಾವನ್ನಪ್ಪಿರುವುದು ನನಗೆ ಅತೀವ ದುಃಖ ತಂದಿದೆ. ಇಂತಹ ಅಹಿತಕರ ಘಟನೆಗಳನ್ನು ತಡೆಯಲು ಟಿಟಿಡಿ ಹೆಚ್ಚು ಸುರಕ್ಷಿತ ಕ್ರಮಗಳನ್ನು ಜರುಗಿಸಬೇಕು. ಮೃತ ಭಕ್ತಾದಿಗಳ ಕುಟುಂಬದ ಪರವಾಗಿ ಸರ್ಕಾರ ನಿಂತಿದೆ,” ಎಂದು ಚಂದ್ರ ಬಾಬು ನಾಯ್ಡು ತಿಳಿಸಿದ್ದಾರೆ.

Leave a Reply

Your email address will not be published. Required fields are marked *