ಪಾಟ್ನಾ: ಬಿಹಾರದ ಜಮುಯಿ ಜಿಲ್ಲೆಯಲ್ಲಿ ನಡೆದ ವಿಚಿತ್ರ ಪ್ರಕರಣದಲ್ಲಿ, ಶಿಕ್ಷಕಿಯೊಬ್ಬರು ಅಪಾಯಿಂಟ್‍ಮೆಂಟ್ ಲೆಟರ್ ಸ್ವೀಕರಿಸಿದ ಒಂದು ದಿನದ ನಂತರ ನಿವೃತ್ತರಾಗಿದ್ದಾರೆ (Teacher Retired). ಜಮುಯಿ ಜಿಲ್ಲೆಯ ಖೈರಾ ಬ್ಲಾಕ್ ಪ್ರದೇಶದ ಗುತ್ತಿಗೆ ಶಿಕ್ಷಕಿಯಾಗಿ ನೇಮಕಗೊಂಡಿದ್ದ ಅನಿತಾ ಕುಮಾರಿ ಅವರೇ ಈ ಅಪರೂಪದ ಪ್ರಕರಣಕ್ಕೆ ಸಾಕ್ಷಿಯಾದವರು.
ಶೋಭಾಖಾನ್‍ನ ಪ್ಲಸ್ ಟು ಹೈಸ್ಕೂಲ್‌ಗೆ ವಿಶೇಷ ಶಿಕ್ಷಕಿಯಾಗಿ ಅನಿತಾ ಕುಮಾರಿ ಅವರನ್ನು 2024ರ ಡಿಸೆಂಬರ್ 30ರಂದು ನೇಮಿಸಲಾಯಿತು. ಈ ಬಗ್ಗೆ ಅಪಾಯಿಟ್‍ಮೆಂಟ್ ಲೆಟರ್ ಅನ್ನೂ ನೀಡಲಾಗಿದೆ. ಆ ಲೆಟರ್‌ನ ಪ್ರಕಾರ, ಅವರು 2025ರ ಜನವರಿ 1 ಮತ್ತು 7 ನಡುವೆ ತಮ್ಮ ಕೆಲಸವನ್ನು ನಿರ್ವಹಿಸಲಿದ್ದಾರೆ ಎನ್ನಲಾಗಿತ್ತು. ಆದರೆ ದುರಾದೃಷ್ಟವಶಾತ್ ಅವರು 2024ರ ಡಿಸೆಂಬರ್ 31ರಂದು ತಮ್ಮ 60ನೇ ವಯಸ್ಸನ್ನು ತಲುಪಿದ ಕಾರಣ ನಿವೃತ್ತರಾದರು.
ಅನಿತಾ ಕುಮಾರಿ 2006ರಲ್ಲಿ ಅದೇ ಶಾಲೆಯಲ್ಲಿ ಪಂಚಾಯತ್ ಶಿಕ್ಷಕಿಯಾಗಿ ತಮ್ಮ ಬೋಧನಾ ವೃತ್ತಿಜೀವನವನ್ನು ಪ್ರಾರಂಭಿಸಿದರು. 2014ರಲ್ಲಿ ಟಿಇಟಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಪ್ರೌಢಶಾಲಾ ಶಿಕ್ಷಕಿಯಾದರು. 2024ರ ಮಾರ್ಚ್‌ನಲ್ಲಿ ಅವರು ಕಾಂಪಿಟೆನ್ಸಿ ಒನ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಇದರಿಂದ ಅವರು ವಿಶೇಷ ಶಿಕ್ಷಕಿಯಾಗಿ ನೇಮಕಗೊಳ್ಳಲು ಅರ್ಹತೆ ಪಡೆದರು. ಅದರಂತೆ ಅವರು ಅಪಾಯಿಟ್‍ಮೆಂಟ್ ಲೆಟರ್ ಅನ್ನು ಪಡೆದರು. ಆದರೆ ಅವರ ನಿವೃತ್ತಿಯಿಂದಾಗಿ ಅವರ ಹೊಸ ಕೆಲಸವನ್ನು ವಹಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಪರಿಸ್ಥಿತಿಯ ಬಗ್ಗೆ ತಿಳಿಸಿದ ಅನಿತಾ ಕುಮಾರಿ, ತನ್ನ ಅರ್ಹತೆಗಳು ಮತ್ತು ಸಾಮರ್ಥ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೂ ಡಿಸೆಂಬರ್ 31ರಂದು ನಿವೃತ್ತಿಯಾಗಿದ್ದರಿಂದ ವಿಶೇಷ ಶಿಕ್ಷಕಿಯಾಗಿ ಸೇವೆ ಸಲ್ಲಿಸಲು ಅನರ್ಹರಾಗಿರುವುದಾಗಿ ಬೇಸರದಿಂದ ಹೇಳಿದ್ದಾರೆ. ನಿವೃತ್ತಿಯ ನಂತರ ಅವರಿಗೆ ವಿದಾಯ ಹೇಳಲು ಶಾಲೆಯು ಬೀಳ್ಕೊಡುಗೆ ಸಮಾರಂಭವನ್ನು ನಡೆಸಿದೆ.
ಈ ಸುದ್ದಿಯನ್ನೂ ಓದಿ:ಹೊಸವರ್ಷದಂದು ಮರಾಠಿ, ಭೋಜ್‌ಪುರಿ ಹಾಡಿಗಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ; ಒಬ್ಬ ಸಾವು
ಸರ್ಕಾರದ ನಿಯಮಗಳ ಪ್ರಕಾರ 60 ವರ್ಷ ತುಂಬಿದ ನಂತರ ನಿವೃತ್ತಿ ಕಡ್ಡಾಯ ಎಂದು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ. ನಿಯಮಗಳನ್ನು ಅನುಸರಿಸಿ ಅನಿತಾ ಕುಮಾರಿ ಅವರನ್ನು ವಿಶೇಷ ಶಿಕ್ಷಕಿಯಾಗಿ ನೇಮಿಸಲಾಗಿದ್ದರೂ, ಅವರು ಔಪಚಾರಿಕವಾಗಿ ಕೆಲಸಕ್ಕೆ ಸೇರುವ ಮೊದಲು ಅವರ ನಿವೃತ್ತಿ ದಿನಾಂಕ ಸಮೀಪಿಸಿತ್ತು. ಇದರಿಂದಾಗಿ ಅವರು ಅನರ್ಹರಾದರು ಎನ್ನಲಾಗಿದೆ.