Wednesday, 14th May 2025

400 ಟಾಟಾ ಸಿಎನ್‌ಜಿ ಬಸ್‌ಗಳ ಸಂಚಾರ ನಿರ್ಬಂಧ

ಮುಂಬೈ: ಮುಂಬೈನಲ್ಲಿ ತಿಂಗಳ ಅಂತರದಲ್ಲೇ ಮೂರು ಟಾಟಾ ಸಿಎನ್‌ಜಿ ಬಸ್‌ಗಳು ಬೆಂಕಿಗೆ ಆಹುತಿಯಾಗಿರುವುದನ್ನು ಮುಂಬೈ ‘ವಿದ್ಯುತ್‌ ಪೂರೈಕೆ ಮತ್ತು ಸಾರಿಗೆ ಇಲಾಖೆ (ಬೆಸ್ಟ್‌)’ ಗಂಭೀರವಾಗಿ ಪರಿಗಣಿಸಿದೆ. ಅದರಂತೆ 400 ಟಾಟಾ ಸಿಎನ್‌ಜಿ ಬಸ್‌ಗಳ ಸಂಚಾರ ವನ್ನು ನಿರ್ಬಂಧಿಸಿದೆ.

ಮುಂಬೈನ ಅಂದೇರಿಯ ರೈಲ್ವೆ ನಿಲ್ದಾಣದ ಸಮೀಪ ಬುಧವಾರ ಟಾಟಾ ಸಿಎನ್‌ಜಿ ಬಸ್‌ ವೊಂದು ಸಂಪೂರ್ಣ ಸುಟ್ಟು ಕರಕ  ಲಾಗಿತ್ತು. ಘಟನೆಯಲ್ಲಿ ಯಾರೊಬ್ಬರಿಗೂ ಹಾನಿ ಯುಂಟಾಗಿರಲಿಲ್ಲ. ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದಕ್ಕೂ ಹಿಂದೆ ಎರಡು ಬಸ್‌ಗಳು ಇದೇ ರೀತಿ ಸಂಪೂರ್ಣ ಸುಟ್ಟು ಹೋಗಿದ್ದವು. ಒಂದೇ ತಿಂಗಳ ಅಂತರದಲ್ಲಿ ಒಂದೇ ಮಾದರಿಯ ಮೂರು ಬಸ್‌ಗೆ ಬೆಂಕಿ ಬಿದ್ದಿರುವ ಹಿನ್ನೆಲೆಯಲ್ಲಿ ‘ಬೆಸ್ಟ್‌’ ಸಂಚಾರ ನಿರ್ಬಂಧದ ನಿರ್ಧಾರಕ್ಕೆ ಬಂದಿದೆ.

ಎಂ/ಎಸ್‌ ಮಾತೇಶ್ವರಿ ಲಿಮಿಟೆಡ್‌ ಈ ಬಸ್‌ಗಳ ನಿರ್ವಹಣೆಯ ಹೊಣೆ ಹೊತ್ತಿದೆ.

ಭವಿಷ್ಯದಲ್ಲಿ ಇಂಥ ಘಟನೆ ಮರುಕಳಿಸದಂತೆ ಮಾಡಲು, ಸುರಕ್ಷತೆಯನ್ನು ಮೂಲ ತಯಾರಕರು (ಟಾಟಾ) ಮತ್ತು ನಿರ್ವಾಹ ಕರು (ಎಂ/ಎಸ್‌ ಮಾತೇಶ್ವರಿ ಲಿಮಿಟೆಡ್‌) ಖಚಿತಪಡಿಸಿಕೊಳ್ಳುವವರೆಗೂ ಎಲ್ಲಾ 400 ಬಸ್‌ಗಳ ಸಂಚಾರ ನಿರ್ಬಂಧಿಸಲು ‘ಬೆಸ್ಟ್‌’ ಆದೇಶಿಸಿದೆ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಲೋಕೇಶ್ ಚಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.