Wednesday, 14th May 2025

ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ ತಮಿಳುನಾಡಿನ ರಾಜ್ಯಪಾಲ

ಚೆನ್ನೈ: ವಿವಾದಾತ್ಮಕ ಹೇಳಿಕೆ ನೀಡಿದ್ದ ಆಡಳಿತಾರೂಢ ಡಿಎಂಕೆ ಪಕ್ಷದ ನಾಯಕ ಶಿವಾಜಿ ಕೃಷ್ಣಮೂರ್ತಿ ವಿರುದ್ಧ ತಮಿಳುನಾಡಿನ ರಾಜ್ಯಪಾಲ ಆರ್.ಎನ್.ರವಿ ಅವರು ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

‘ವಿಧಾನಸಭೆಯ ಭಾಷಣದಲ್ಲಿ ರಾಜ್ಯಪಾಲರು ಅಂಬೇಡ್ಕರ್‌ ಹೆಸರು ಹೇಳಲು ನಿರಾಕರಿಸಿದರೆ ಅವರ ವಿರುದ್ಧ ತಿರುಗಿ ಬೀಳಲು ನನಗೆ ಹಕ್ಕು ಇಲ್ಲವೇ? ತಮಿಳುನಾಡು ಸರ್ಕಾರ ನೀಡಿದ ಭಾಷಣವನ್ನು ನೀವು ಓದದಿದ್ದರೆ ಕಾಶ್ಮೀರಕ್ಕೆ ಹೋಗಿ. ನಾವು ಅಲ್ಲಿಗೆ ಉಗ್ರರನ್ನು ಕಳಿಸುತ್ತೇವೆ, ಅವರು ನಿಮ್ಮ ಮೇಲೆ ಗುಂಡು ಹಾರಿಸುತ್ತಾರೆ’ ಎಂದು ಶಿವಾಜಿ ಭಾಷಣದಲ್ಲಿ ಹೇಳಿದ್ದರು.

ಶಿವಾಜಿ ಕೃಷ್ಣಮೂರ್ತಿ ಹೇಳಿಕೆ ವೈಯಕ್ತಿಕವಾದದ್ದು, ಅದಕ್ಕೂ ಪಕ್ಷಕ್ಕೆ ಯಾವುದೇ ಸಂಬಂಧ ಇಲ್ಲ. ನಮ್ಮ ಪಕ್ಷ ರಾಜ್ಯಪಾಲರನ್ನು ಗೌರವಿಸುತ್ತದೆ ಎಂದು ಡಿಎಂಕೆ ಹೇಳಿದೆ.

ಶಿವಾಜಿ ಕೃಷ್ಣಮೂರ್ತಿ ಕಾನೂನು ಬಾಹಿರವಾಗಿ ನಡೆದುಕೊಂಡಿರುವುದರಿಂದ ಅವರನ್ನು ಡಿಎಂಕೆ ತಾತ್ಕಾಲಿಕವಾಗಿ ಅಮಾನತು ಮಾಡಿದೆ.

ರಾಜ್ಯಪಾಲರನ್ನು ಗುರಿಯಾಗಿಸಿ ಡಿಎಂಕೆ ಪಕ್ಷದ ಸದಸ್ಯ ಶಿವಾಜಿ ಕೃಷ್ಣಮೂರ್ತಿ ಅವರು ಆಕ್ಷೇಪಾರ್ಹ ಮತ್ತು ಬೆದರಿಕೆಯೊಡ್ಡುವಂಥ ಭಾಷಣ ಮಾಡಿದ್ದರ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯದ ರಾಜಭವನ ಮತ್ತು ಬಿಜೆಪಿ ಪೊಲೀಸರಿಗೆ ಪ್ರತ್ಯೇಕ ದೂರು ನೀಡಿವೆ.