Monday, 12th May 2025

Sukhbir Badal : ಪಂಜಾಬ್ ಮಾಜಿ ಡಿಸಿಎಂಗೆ ಶೌಚಾಲಯ ಸ್ವಚ್ಛಗೊಳಿಸುವ, ಚಪ್ಪಲಿ ಪಾಲಿಶ್‌ ಮಾಡುವ ಶಿಕ್ಷೆ! ಕಾರಣ ಏನು ಗೊತ್ತೆ?

Sukhbir Badal

ಅಮೃತ್‌ಸರ: ಪಂಜಾಬ್‌ನ ಮಾಜಿ ಉಪಮುಖ್ಯಮಂತ್ರಿ (Punjab ex DCM) ಹಾಗೂ ಶಿರೋಮಣಿ ಅಕಾಲಿದಳ(SAD)ದ ಮಾಜಿ ಅಧ್ಯಕ್ಷ ಸುಖಬೀರ್‌ ಬಾದಲ್ (Sukhbir Badal) ಅವರು ಶೌಚಾಲಯ ಸ್ವಚ್ಛಗೊಳಿಸುವ ಶಿಕ್ಷೆಗೆ ಗುರಿಯಾಗಿದ್ದಾರೆ. ಸಿಖ್ಖರ ಸರ್ವೋಚ್ಚ ಧಾರ್ಮಿಕ ಸಂಸ್ಥೆಯಾದ ಅಕಾಲ್ ತಖ್ತ್(Akal Takht) ಈ ಆದೇಶ ಹೊರಡಿಸಿದ್ದು, ಸುಖಬೀರ್‌ ಸಿಂಗ್‌ ಬಾದಲ್‌ ಹಾಗೂ ಅವರ ಇತರ ಸಹ ಮಂತ್ರಿಗಳಿಗೆ ದರ್ಬಾರ್ ಸಾಹಿಬ್‌ನ ಶೌಚಗೃಹ ಮತ್ತು ಅಡುಗೆ ಮನೆ ಸ್ವಚ್ಛಗೊಳಿಸುವ ಶಿಕ್ಷೆ ವಿಧಿಸಿದೆ.

2007 ರಿಂದ 2017ರವರೆಗೆ ಎಸ್‌ಎಡಿ -ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಸಿಖ್ ಮಂತ್ರಿಗಳು ಹಾಗೂ ಪಕ್ಷ ಮಾಡಿದ ತಪ್ಪುಗಳಿಗಾಗಿ ಸುಖಬೀರ್ ಬಾದಲ್ ಅವರು ತಪ್ಪಿತಸ್ಥರು ಎಂದು ಆಗಸ್ಟ್ 30 ರಂದು ಅಕಾಲ್ ತಖ್ತ್ ಘೋಷಿಸಿತ್ತು. ಸಿಖ್ಖರ ಪವಿತ್ರ ಗ್ರಂಥ ಗುರು ಗ್ರಂಥ ಸಾಹಿಬ್‌’ಗೆ ಅಗೌರವ ತೋರಿಸಿದ್ದ ಗುರ್‌ಮೀತ್‌ ರಾಮ ರಹೀಂ 2015ರಲ್ಲಿ ಬಾದಲ್‌ ಡಿಸಿಎಂ ಆಗಿದ್ದಾಗ ಕ್ಷಮಾದಾನ ನೀಡಿದ್ದರು. ಹೀಗಾಗಿ ಬಾದಲ್‌ರನ್ನು ಧರ್ಮದ್ರೋಹಿ ಎಂದು ತಖ್ ಘೋಷಿಸಿತ್ತು.

ಬಳಿಕ ಸುಖಬೀರ್ ಬಾದಲ್ ಅವರು ತಮ್ಮ ತಪ್ಪುಗಳನ್ನು ಒಪ್ಪಿಕೊಂಡು ಅಕಾಲ್ ತಖ್ತ್‌ಗೆ ಬೇಷರತ್ ಕ್ಷಮೆಯಾಚಿಸಿದ ನಂತರ ಶಿಕ್ಷೆ ಪ್ರಕಟಿಸಲಾಗಿದೆ. ಜತೇದಾರ್ ಗ್ಯಾನಿ ರಘಬೀರ್ ಸಿಂಗ್ ನೇತೃತ್ವದ ಐವರು ಪ್ರಧಾನ ಅರ್ಚಕರು ಸೋಮವಾರ ಶಿಕ್ಷೆ ಪ್ರಕಟಿಸಿದ್ದಾರೆ.

ಇದರನ್ವಯ ಡಿ.3ರಂದು ಮಧ್ಯಾಹ್ನ 12 ಗಂಟೆಗೆ 1 ತಾಸು ಬಾದಲ್ ಮತ್ತು ಸಂಪುಟದ ಮಾಜಿ ಸಚಿವರು ಸೇವಕರ ಉಡುಪು ಧರಿಸಿ ಅಮೃತಸರದ ಸ್ವರ್ಣಮಂದಿರದ ಶೌಚಾಲಯ ಶುಚಿಗೊಳಿಬೇಕು. ಮಂದಿರಕ್ಕೆ ಆಗಮಿಸುವ ಭಕ್ತರ ಚಪ್ಪಲಿ ಪಾಲಿಶ್ ಮಾಡಬೇಕು. ಲಂಗರ್ (ಭೋಜನ ಶಾಲೆ)ಯಲ್ಲಿ ಊಟ ಬಡಿಸಿ ಪಾತ್ರೆ ತೊಳೆಯಬೇಕು ಮತ್ತು ಇನ್ನೂ 3 ಗುರುದ್ವಾರಗಳಲ್ಲಿ ಸೇವೆ ಮಾಡಬೇಕು ಎಂದು ಆದೇಶಿಸಿದೆ.

ಪಕ್ಷದ ಅಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ

ಅಕಾಲ್ ತಖ್ತ್ ತನ್ನ ಆದೇಶದ ಪ್ರಕಾರ ಈಗಾಗಲೇ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಗೆ ಬಾದಲ್ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯನ್ನು ಅಂಗೀಕರಿಸಿ ಅಧ್ಯಕ್ಷ ಹುದ್ದೆಗೆ 6 ತಿಂಗಳಲ್ಲಿ ಚುನಾವಣೆ ನಡೆಸಬೇಕು ಎಂದು ಶಿರೋಮಣಿ ಅಕಾಲಿ ದಳಕ್ಕೆ ಸೂಚಿಸಿದೆ. ಇದರ ಜೊತೆಗೆ ಬಾದಲ್ ತಂದೆ ಮಾಜಿ ಸಿಎಂ ಪ್ರಕಾಶ್ ಸಿಂಗ್‌ ಬಾದಲ್ ಅವರಿಗೆ ನೀಡಿದ್ದ ‘ಫಖ್-ಎ-ಕ್ವಾಮ್’ (ಧರ್ಮದ ಹೆಮ್ಮೆ) ಎಂಬ ಧಾರ್ಮಿಕ ಬಿರುದಾವಳಿಯನ್ನೂ ಹಿಂಪಡೆದಿದೆ ಸಿಖ್ ನ್ಯಾಯ ಮಂಡಳಿ ಹಿಂಪಡೆದಿದೆ.

ಕಾಲಿನ ಮೂಳೆ ಮುರಿತಕ್ಕೊಳಗಾಗಿ ಗಾಲಿಕುರ್ಚಿಯಲ್ಲಿ ಓಡಾಡುತ್ತಿರುವ ಸುಖಬೀರ್ ಬಾದಲ್, ಕೋರ್ ಕಮಿಟಿ ಸದಸ್ಯರು ಹಾಗೂ 2015 ರಲ್ಲಿ ಕ್ಯಾಬಿನೆಟ್ ಸದಸ್ಯರಾಗಿದ್ದ ಅಕಾಲಿದಳದ ನಾಯಕರು ಮಂಗಳವಾರ (ಡಿ.3) ಮಧ್ಯಾಹ್ನ 12 ರಿಂದ 1 ಗಂಟೆ ವರೆಗೆ ಅಮೃತಸರದ ಗೋಲ್ಡನ್ ಟೆಂಪಲ್‌ನಲ್ಲಿ ಶೌಚಾಲಯ ಸ್ವಚ್ಛ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಅಕಾಲ್ ತಖ್ತ್‌ನಿಂದ ಧಾರ್ಮಿಕ ದುಷ್ಕೃತ್ಯದ ಅಪರಾಧಿ ಎಂದು ಘೋಷಿಸಲ್ಪಟ್ಟ ನಂತರ ಶಿರೋಮಣಿ ಅಕಾಲಿದಳ(ಎಸ್‌ಎಡಿ) ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನ.16ರಂದು ರಾಜೀನಾಮೆ ಸಲ್ಲಿಸಿದ್ದರು.

ಈ ಸುದ್ದಿಯನ್ನೂ ಓದಿ : Punjab Shootout: ಪಂಜಾಬ್‌ನಲ್ಲಿ ಭೀಕರ ಘಟನೆ- ಆಪ್‌ ರೈತ ಮೋರ್ಚಾ ಅಧ್ಯಕ್ಷನನ್ನು ಗುಂಡಿಕ್ಕಿ ಹತ್ಯೆ