Thursday, 15th May 2025

Submarine: ನೌಕಾಪಡೆಯ ಜಲಾಂತರ್ಗಾಮಿಗೆ ಮೀನುಗಾರಿಕಾ ದೋಣಿ ಡಿಕ್ಕಿ; ಇಬ್ಬರು ದಾರುಣ ಸಾವು

ಮುಂಬೈ: ಗೋವಾ (Goa) ಕರಾವಳಿಯಲ್ಲಿ ಭಾರತೀಯ ನೌಕಾಪಡೆಯ ಜಲಾಂತರ್ಗಾಮಿ(Submarine) ಐಎನ್‌ಎಸ್ ಕಾರಂಜ್ (INS Karanj) ಮತ್ತು ಮೀನುಗಾರಿಕಾ ದೋಣಿ ನಡುವೆ ಡಿಕ್ಕಿ ಸಂಭವಿಸಿದ್ದು, ಪರಿಣಾಮ ಇಬ್ಬರು ಮೀನುಗಾರರು ದಾರುಣವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಜಲಾಂತರ್ಗಾಮಿ ನೌಕೆಗೆ ಕೋಟ್ಯಂತರ ಮೌಲ್ಯದ ಹಾನಿ ಸಂಭವಿಸಿದೆ ಎನ್ನಲಾಗಿದೆ.

ಮುಂಬೈ ಪೊಲೀಸರ ಪ್ರಕಾರ, 13 ಸಿಬ್ಬಂದಿ ಮೀನುಗಾರಿಕಾ ದೋಣಿಯಲ್ಲಿದ್ದಾಗ ಡಿಕ್ಕಿ ಸಂಭವಿಸಿದ್ದು, 11 ಮಂದಿಯನ್ನು ರಕ್ಷಿಸಲಾಗಿದೆ. ಇಬ್ಬರು ಮೀನುಗಾರರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಘಟನೆಯ ನಂತರ ಮುಂಬೈನ ಯೆಲ್ಲೋ ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಮೀನುಗಾರರ ಮೃತ ದೇಹಗಳನ್ನು ಜೆಜೆ ಆಸ್ಪತ್ರೆಗೆ ಕಳುಹಿಸಲಾಗಿದೆ.

ಐಎನ್‌ಎಸ್ ಕಾರಂಜ್ ಪೆರಿಸ್ಕೋಪ್ ಆಳದಲ್ಲಿ ಕಾರ್ಯನಿರ್ವಹಿಸುತ್ತಿತ್ತು ಎಂದು ಹೇಳಲಾಗಿದೆ. ನವೆಂಬರ್ 21ರ ಸಂಜೆ ಸುಮಾರು 7:15 ಕ್ಕೆ ಗೋವಾ ಕರಾವಳಿಯ ಆಗ್ನೇಯಕ್ಕೆ 6 ಗಂಟೆಗಳ ವೇಗದಲ್ಲಿ ಚಲಿಸಿದೆ. ನೌಕಾಪಡೆಯ ಅಧಿಕಾರಿಗಳು ಮೀನುಗಾರಿಕೆ ದೋಣಿಯನ್ನು ಸುಮಾರು 2-3 ಕಿಲೋಮೀಟರ್ ದೂರದಲ್ಲಿರುವಾಗಲೇ ಎಫ್‌ವಿ ಮಾರ್ಥೋಮಾ ಎಂದು ಗುರುತಿಸಿದ್ದಾರೆ. ದೋಣಿಯು ಸ್ವಯಂಚಾಲಿತ ಗುರುತಿನ ವ್ಯವಸ್ಥೆ (AIS) ಮೂಲಕ ಚಲಿಸುವುದರಿಂದ ಅದರ ವೇಗ, ಸ್ಥಳ ಮತ್ತು ದಿಕ್ಕನ್ನು ಪತ್ತೆಹಚ್ಚಲು ಕಷ್ಟವಾಗಿದೆ.

ನೌಕಾಪಡೆಯ ಕಾರ್ಯನಿರ್ವಾಹಕ ಅಧಿಕಾರಿ ಕಮಲ್ ಪ್ರೀತ್ ಸಿಂಗ್ ಪ್ರಕಾರ, ಸೋನಾರ್ ಸಿಸ್ಟಮ್ ಮೀನುಗಾರಿಕೆ ದೋಣಿಯನ್ನು ಪತ್ತೆ ಮಾಡಿದೆ. ಡಿಕ್ಕಿಯಿಂದ ತಪ್ಪಿಸಿಕೊಳ್ಳಲು ಜಲಾಂತರ್ಗಾಮಿ ನೌಕೆಯ ವೇಗ ಮತ್ತು ದಿಕ್ಕನ್ನು ಬದಲಾಯಿಸಲು ಪ್ರಯತ್ನಿಸಿದರೂ, ಮೀನುಗಾರಿಕಾ ದೋಣಿಯು ಅನಿರೀಕ್ಷಿತವಾಗಿ ತನ್ನ ವೇಗವನ್ನು ಹೆಚ್ಚಿಸಿ ಜಲಾಂತರ್ಗಾಮಿ ನೌಕೆಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಮೀನುಗಾರಿಕಾ ದೋಣಿ ಮಗುಚಿ ಬಿದ್ದಿದೆ. ಜಲಾಂತರ್ಗಾಮಿ ನೌಕೆಯಲ್ಲಿದ್ದ ಕಮಾಂಡರ್ ಅರುಣಾಭ್ ಅವರು ತಕ್ಷಣವೇ ಸ್ಯಾಟಲೈಟ್ ಸಂವಹನದ ಮೂಲಕ ನೌಕಾ ಪ್ರಧಾನ ಕಚೇರಿಗೆ ಎಚ್ಚರಿಕೆ ನೀಡಿದ್ದಾರೆ. ಕೂಡಲೇ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು, ಐದು ಮೀನುಗಾರರನ್ನು ಜಲಾಂತರ್ಗಾಮಿ ಸಿಬ್ಬಂದಿ ರಕ್ಷಿಸಿದ್ದಾರೆ. ಇತರ ಆರು ಮಂದಿ ಸಮೀಪದಲ್ಲೇ ಇದ್ದ ಮೀನುಗಾರಿಕಾ ದೋಣಿಯ ಕಡೆಗೆ ಈಜಿದ್ದಾರೆ. ನಂತರ ಅವರನ್ನು ರಕ್ಷಣಾ ಕಾರ್ಯದಲ್ಲಿ ಸಹಾಯ ಮಾಡುತ್ತಿದ್ದ ನೌಕಾಪಡೆಯ ಹಡಗಿಗೆ ವರ್ಗಾಯಿಸಲಾಗಿದೆ. ಈ ನಡುವೆ ಇಬ್ಬರು ಮೀನುಗಾರರು ನಾಪತ್ತೆಯಾಗಿರುವುದು ತಿಳಿದು ಬಂದಿತ್ತು. ಶೋಧ ಕಾರ್ಯಾಚರಣೆಯ ವೇಳೆ ಅವರ ಮೃತದೇಹಗಳು ಪತ್ತೆಯಾಗಿವೆ.

ಡಿಕ್ಕಿಯಿಂದಾಗಿ INS ಕಾರಂಜ್‌ಗೆ ತೀವ್ರ ಹಾನಿಯಾಗಿರುವುದು ತಿಳಿದು ಬಂದಿದೆ. ರಡಾರ್, ಸಂವಹನ ವ್ಯವಸ್ಥೆಗಳು ಮತ್ತು ಪೆರಿಸ್ಕೋಪ್‌ನಂತಹ ನಿರ್ಣಾಯಕ ಘಟಕಗಳು ಹಾನಿಗೊಂಡಿವೆ. ದುರಸ್ತಿ ವೆಚ್ಚ 10 ಕೋಟಿ ರುಪಾಯಿ ಎಂದು ಅಂದಾಜಿಸಲಾಗಿದೆ. ಮೀನುಗಾರಿಕಾ ಬೋಟ್‌ನ ಕ್ಯಾಪ್ಟನ್, ತಾಂಡೇಲ್ ಅವರ ನಿರ್ಲಕ್ಷ್ಯತನದಿಂದ ಸಬ್‌ಮೆರಿನ್ ನೌಕೆಯ ನೀರಿನ ಮೇಲಿರುವ ಗೋಚರ ಭಾಗಗಳನ್ನು ಗುರುತಿಸಲು ಸಾಧ್ಯವಾಗಿಲ್ಲ. ಅವರು ಅಜಾಗರೂಕತೆಯಿಂದ ದೋಣಿಯ ವೇಗವನ್ನು ಹೆಚ್ಚಿಸಿದ್ದು ಡಿಕ್ಕಿಗೆ ಕಾರಣವಾಗಿದೆ ಎಂದು ಎಫ್‌ಐಆರ್‌ ನಲ್ಲಿ ದಾಖಲಾಗಿದೆ. ಬೋಟ್‌ ಕ್ಯಾಪ್ಟನ್‌ ನ ನಿರ್ಲಕ್ಷ್ಯತೆ ಭಾರೀ ಹಾನಿಯನ್ನುಂಟು ಮಾಡಿದ್ದು ಮಾತ್ರವಲ್ಲದೆ, ಇಬ್ಬರ ಸಾವಿಗೆ ಕಾರಣವಾಗಿದೆ. ಉಳಿದ ಸಿಬ್ಬಂದಿಗಳಿಗೂ ಗಂಭೀರ ಗಾಯಗಳಾಗಿರುವುದು ತಿಳಿದು ಬಂದಿದೆ. BNS (ಭಾರತೀಯ ನ್ಯಾಯ ಸಂಹಿತೆ) ಕಾಯಿದೆಯ ಸೆಕ್ಷನ್ 106(1), 125, 282, 324(3), ಮತ್ತು 324(5) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಯೆಲ್ಲೋ ಗೇಟ್ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: Illegal Fishing: ಅಕ್ರಮವಾಗಿ ಮರಿ ಮೀನುಗಳ ಬೇಟೆ; ಸಾರ್ಡಿನ್‌ ಮೀನು ಸಂತತಿಗೆ ಸಂಚಕಾರ!