ಮುಂಬೈ: ಕಳೆದ ಶುಕ್ರವಾರ ಪ್ರಕಟವಾದ ಎರಡನೇ ತ್ರೈಮಾಸಿಕ ಜಿಡಿಪಿ ಕುರಿತ ಅಂಕಿ ಅಂಶಗಳು ದುರ್ಬಲವಾಗಿದ್ದರಿಂದ ಷೇರು ಸೂಚ್ಯಂಕಗಳು ಭಾರಿ ಕುಸಿಯುವ ನಿರೀಕ್ಷೆ ಇದ್ದರೂ, ಇದಕ್ಕೆ ವ್ಯತಿರಿಕ್ತವಾಗಿ ಸೆನ್ಸೆಕ್ಸ್ ಮತ್ತು ನಿಫ್ಟಿ (Sensex) ಸೋಮವಾರ ಬೆಳಗ್ಗಿನ ವಹಿವಾಟಿನಲ್ಲಿ (Nifty) ತುಸು ಚೇತರಿಸಿತ್ತು(Stock Market). ಆಟೊಮೊಬೈಲ್, ರಿಯಾಲ್ಟಿ, ಔಷಧ ಕ್ಷೇತ್ರದ ಷೇರುಗಳು ಗಣನೀಯ ಏರಿಕೆ ದಾಖಲಿಸಿರುವುದು ಇದಕ್ಕೆ ಕಾರಣ.
ಕಳೆದ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಭಾರತದ ಜಿಡಿಪಿ 5.4%ಕ್ಕೆ ಇಳಿದಿತ್ತು. ಹೀಗಾಗಿ ಜಿಡಿಪಿ ಇಳಿಕೆಗೆ ಷೇರುಪೇಟೆ ತೀರಾ ಆತಂಕಪಟ್ಟಿಲ್ಲ ಎಂಬುದು ಸಾಬೀತಾದಂತಾಗಿದೆ.
ಬೆಳಗ್ಗೆ 11 ಗಂಟೆಯ ವೇಳೆಗೆ ಬಿಎಸ್‌ಇ ಸೆನ್ಸೆಕ್ಸ್ 79,780 ಅಂಕಗಳ ಮಟ್ಟದಲ್ಲಿತ್ತು. ನಿಫ್ಟಿ 24,142 ಅಂಕಗಳ ಮಟ್ಟದಲ್ಲಿತ್ತು. ಆರಂಭಿಕ ನಷ್ಟವನ್ನು ಭರಿಸಿತ್ತು. ಸೆನ್ಸೆಕ್ಸ್ 22 ಮತ್ತು ನಿಫ್ಟಿ 15 ಅಂಕಗಳ ಏರಿಕೆ ದಾಖಲಿಸಿತ್ತು.
ಮಾರುಕಟ್ಟೆ ವಹಿವಾಟು ಆರಂಭವಾದಾಗ ಮಾರುತಿ ಸುಜುಕಿ, ಸನ್ ಫಾರ್ಮಾ, ಮಹೀಂದ್ರಾ & ಮಹೀಂದ್ರಾ, ಅದಾನಿ ಪೋರ್ಟ್ಸ್, ಅಲ್ಟ್ರಾ ಟೆಕ್ ಸಿಮೆಂಟ್, ಟೆಕ್ ಮಹೀಂದ್ರಾ ಷೇರುಗಳು ಏರಿಕೆ ದಾಖಲಿಸಿತು. ಎನ್‌ಟಿಪಿಸಿ, ಟಿಸಿಎಸ್, ಇಂಡಸ್ ಇಂಡ್ ಬ್ಯಾಂಕ್, ಲಾರ್ಸನ್ & ಟೂಬ್ರೊ ಮತ್ತು ಇನ್ಫೋಸಿಸ್ ಷೇರುಗಳು ಇಳಿಕೆ ದಾಖಲಿಸಿತು.
ನಿಫ್ಟಿ 50 ಸೂಚ್ಯಂಕದಲ್ಲಿ 50ಕ್ಕೆ 16 ಷೇರುಗಳು ಲಾಭ ಗಳಿಸಿತು. ಎಫ್‌ಎಂಸಿಜಿ ಷೇರುಗಳೂ ಹಸಿರಾಗಿತ್ತು. ಹೆಲ್ತ್ ಕೇರ್, ಫಾರ್ಮಾ, ಆಟೊ ಸೂಚ್ಯಂಕಗಳು ಚೇತರಿಸಿದವು. ತೈಲ ವಲಯದ ಷೇರುಗಳು ಮಾತ್ರ ಭಾರಿ ನಷ್ಟಕ್ಕೀಡಾಯಿತು. ನಿಫ್ಟಿ ಮಿಡ್ ಕ್ಯಾಪ್, ನಿಫ್ಟಿ ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ಚೇತರಿಸಿವೆ.
ಏಷ್ಯಾ ಪೆಸಿಫಿಕ್ ವಲಯದಲ್ಲಿ ಮಾರುಕಟ್ಟೆಯಲ್ಲಿ ಮಿಶ್ರ ಫಲಿತಾಂಶ ವ್ಯಕ್ತವಾಯಿತು. ಚೀನಾದಲ್ಲಿ ನವೆಂಬರ್‌ನಲ್ಲಿ ಆಟೊಮೊಬೈಲ್ ವಲಯ ಪ್ರಗತಿ ದಾಖಲಿಸಿತ್ತು. ಶಾಂಘೈನಲ್ಲಿ ಷೇರು ಸೂಚ್ಯಂಕ ಚೇತರಿಸಿತ್ತು. ಅಮೆರಿಕ, ಜಪಾನ್, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾದಲ್ಲಿ ತುಸು ಚೇತರಿಸಿತ್ತು.
ರಾಜೇಶ್ ಪವರ್ ಸರ್ವೀಸ್ ಐಪಿಒ ಧಮಾಕ, ಹೂಡಿಕೆದಾರಿಗೆ ಲಾಭ: ರಾಜೇಶ್ ಪವರ್ ಸರ್ವೀಸ್ ಕಂಪನಿಯ ಐಪಿಒದಲ್ಲಿ ಹೂಡಿಕೆ ಮಾಡಿದವರಿಗೆ ಭರ್ಜರಿ ಲಾಭವಾಗಿದೆ. ಐಪಿಒದಲ್ಲಿ ಈ ಕಂಪನಿಯ ಷೇರು ದರ 335 ರೂ.ನಷ್ಟಿತ್ತು. ಸೋಮವಾರ ಕಂಪನಿಯ ಷೇರು ಬಿಎಸ್‌ಇ ಎಸ್‌ಎಂಇ ಪ್ಲಾಟ್ ಫಾರ್ಮ್‌ನಲ್ಲಿ ಲಿಸ್ಟ್ ಆಗಿದ್ದು, ದರ 636 ರೂ.ಗೆ ಏರಿಕೆಯಾಗಿದೆ. ಅಂದರೆ 90% ಏರಿಕೆಯಾಗಿದೆ.
ಅದಾನಿ ಗ್ರೀನ್ ಎನರ್ಜಿ ಷೇರಿನ ದರದಲ್ಲಿ 9% ಏರಿಕೆಯಾಗಿದ್ದು, (855 ರೂ.) ನವೆಂಬರ್ 21ರ ಬಳಿಕ ಉಂಟಾಗಿದ್ದ ನಷ್ಟವನ್ನು ಸಂಪೂರ್ಣವಾಗಿ ಭರಿಸಿದೆ. ಅದಾನಿ ಪವರ್ ಕೂಡ ಚೇತರಿಸಿದ್ದು 566 ರೂ. ದರದಲ್ಲಿತ್ತು.
ರೂಪಾಯಿ ಕುಸಿತ: ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಸೋಮವಾರ ದಾಖಲೆಯ ಕುಸಿತಕ್ಕೀಡಾಯಿತು. ಡಾಲರ್ ಎದುರು 84.60 ರೂ.ಗೆ ರೂಪಾಯಿ ಮೌಲ್ಯ ಇಳಿಯಿತು. ಇದು ಇದುವರೆಗಿನ ಸಾರ್ವಕಾಲಿಕ ಕುಸಿತವಾಗಿದೆ. ಆರ್‌ಬಿಐ ಈ ಕುಸಿತವನ್ನು ತಡೆಯಲು ಮಧ್ಯಪ್ರವೇಶಿಸುವ ನಿರೀಕ್ಷೆ ಇದೆ.
ಈ ಸುದ್ದಿಯನ್ನೂ ಓದಿ: Stock Market: ಟ್ರಂಪ್ ಜಯಭೇರಿ ಬೆನ್ನಲ್ಲೇ ಷೇರುಪೇಟೆಯಲ್ಲಿ ಸಂಚಲನ; ಸೆನ್ಸೆಕ್ಸ್‌ನಲ್ಲಿ 1,000 ಪಾಯಿಂಟ್ಸ್ ಜಂಪ್