Saturday, 10th May 2025

Stock Market: ಸ್ಟಾಕ್‌, ಚಿನ್ನದಲ್ಲಿ ಹೂಡಿಕೆ; ಯಾವುದರಲ್ಲಿ ಹೆಚ್ಚು ಲಾಭ?

Stock Market Gold

ಮುಂಬೈ: ಷೇರುಗಳಲ್ಲಿ ಹೂಡಿದ್ರೆ ಹೆಚ್ಚು ಲಾಭವೇ? ಚಿನ್ನದಲ್ಲಿ ಹೆಚ್ಚು ಲಾಭ ಸಿಗುತ್ತಾ ಎಂಬ ಪ್ರಶ್ನೆ ನಿಮ್ಮಲ್ಲಿ ಇರಬಹುದು. ಇದಕ್ಕೆ ಉತ್ತರವನ್ನು ಕಂಡುಕೊಳ್ಳುವ ಪ್ರಯತ್ನ ಇಲ್ಲಿದೆ (Stock Market).

1 ವರ್ಷ, 3 ವರ್ಷ, 5 ವರ್ಷ, 10 ವರ್ಷ ಮತ್ತು 20 ವರ್ಷಗಳ ಲೆಕ್ಕಾಚಾರದಲ್ಲಿ ಹೋಲಿಸಿದರೆ ಷೇರು ಮತ್ತು ಚಿನ್ನ ಎರಡೂ ಹೂಡಿಕೆದಾರರಿಗೆ ಉತ್ತಮ ಲಾಭವನ್ನು ಕೊಟ್ಟಿವೆ. ಈಗ ಚಿನ್ನದ ದರ ಪ್ರತಿ 10 ಗ್ರಾಂಗೆ 79,000 ರೂ.ಗಳಲ್ಲಿದ್ದರೆ, ಸೆನ್ಸೆಕ್ಸ್‌ 80,600 ಅಂಕಗಳ ಮಟ್ಟದಲ್ಲಿದೆ. 1964ರಲ್ಲಿ ಪ್ರತಿ 10 ಗ್ರಾಂ ಚಿನ್ನದ ದರ 63 ರೂ. ಇತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ವರ್ಷಾಂತ್ಯ ಸಮೀಪಿಸುತ್ತಿರುವ ಸಂದರ್ಭದಲ್ಲಿ 2024ರಲ್ಲಿ ಯಾವುದರಲ್ಲಿ ಮಾಡಿದ ಹೂಡಿಕೆ ಹೆಚ್ಚು ಲಾಭ ಕೊಟ್ಟಿದೆ ಎಂಬುದನ್ನು ಅವಲೋಕಿಸುವುದು ಒಂದು ವಾಡಿಕೆ. ಇದರಿಂದ ಸ್ಟಾಕ್‌ ಅಥವಾ ಚಿನ್ನದ ಪೈಕಿ ಯಾವುದು ಬೆಸ್ಟ್ ಎಂದು ನಿರ್ಧರಿಸಲು ಅನುಕೂಲವಾಗುತ್ತದೆ. ಮನಿ ಕಂಟ್ರೋಲ್‌ ವರದಿಯ ಪ್ರಕಾರ ನೀವು ಈ ವರ್ಷ ಜನವರಿಯಲ್ಲಿ 1 ಲಕ್ಷ ರೂ.ಗಳನ್ನು ಷೇರು, ಚಿನ್ನದಲ್ಲಿ ಹೂಡಿಕೆ ಮಾಡಿರುತ್ತಿದ್ದರೆ, ಡಿಸೆಂಬರ್‌ ವೇಳೆಗೆ ಎಷ್ಟಾಗಿರುತ್ತಿತ್ತು ಎಂಬುದನ್ನು ತಿಳಿಸಿದೆ. ಈ ವರದಿಯ ಪ್ರಕಾರ ಷೇರಿನಲ್ಲಿ ಹೆಚ್ಚು ರಿಟರ್ನ್‌ ಸಿಕ್ಕಿದ್ದರೆ, ಎರಡನೇ ಸ್ಥಾನದಲ್ಲಿ ಬಂಗಾರ ಇದೆ.

ಕಳೆದ ಹತ್ತು ವರ್ಷಗಳಲ್ಲಿ ಐದು ಸಲ ಸ್ಟಾಕ್‌ ಮಾರ್ಕೆಟ್‌ ಅತಿ ಹೆಚ್ಚು ಲಾಭವನ್ನು ಹೂಡಿಕೆದಾರರಿಗೆ ನೀಡಿದ್ದರೆ, ಬಂಗಾರ ಕೂಡ ನಾಲ್ಕು ವರ್ಷಗಳಲ್ಲಿ ಷೇರುಗಳನ್ನು ಹಿಂದಿಕ್ಕಿದೆ ಎಂದು ಅಂಕಿ ಅಂಶಗಳು ತಿಳಿಸಿವೆ. ನೀವು ನಿಫ್ಟಿ 500 ಇಂಡೆಕ್ಸ್‌ನಲ್ಲಿ 2024ರ ಜನವರಿಯಲ್ಲಿ 1 ಲಕ್ಷ ರೂ. ಹೂಡಿಕೆ ಮಾಡಿರುತ್ತಿದ್ದರೆ, ಈಗ ಅದರ ಮೌಲ್ಯ 1 ಲಕ್ಷದ 21 ಸಾವಿರದ 300 ರೂಪಾಯಿಗೆ ಬೆಳೆದಿರುತ್ತಿತ್ತು. ನೀವು ಒಂದು ವೇಳೆ ಚಿನ್ನದಲ್ಲಿ 1 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿರುತ್ತಿದ್ದರೆ, ಅದು ಈಗ 1 ಲಕ್ಷದ 20 ಸಾವಿರ 700 ರೂಪಾಯಿಗೆ ಬೆಳೆದಿರುತ್ತಿತ್ತು.
ಈ ಸಮೀಕ್ಷೆಯಲ್ಲಿ ಈಕ್ವಿಟಿಗಳಿಗೆ ನಿಫ್ಟಿ 500 ಟೋಟಲ್‌ ರಿಟರ್ನ್‌ ಇಂಡೆಕ್ಸ್‌ ಅನ್ನು ಪರಿಗಣಿಸಲಾಗಿದೆ. ಚಿನ್ನದ ಮೇಲಿನ ಹೂಡಿಕೆಯ ರಿಟರ್ನ್‌ ಅನ್ನು ಅಂದಾಜಿಸಲು ನಿಪ್ಪೋನ್‌ ಇಂಡಿಯಾ ಇಟಿಎಫ್‌ ಗೋಲ್ಡ್‌ ಬೀಸ್‌ ಅನ್ನು ಪರಿಗಣಿಸಲಾಗಿದೆ.

ಕಳೆದ 20 ವರ್ಷಗಳಲ್ಲಿ ಬಂಗಾರದ ದರದಲ್ಲಿ 1,150% ಏರಿಕೆಯಾಗಿದ್ದು, ಹೂಡಿಕೆದಾರರಿಗೆ ಅಷ್ಟು ರಿಟರ್ನ್‌ ಸಿಕ್ಕಿದೆ. ಕಳೆದ 10 ವರ್ಷದಲ್ಲಿ 161% ಲಾಭ ಸಿಕ್ಕಿದೆ. ಕಳೆದ 20 ವರ್ಷಗಲ್ಲಿ ಸೆನ್ಸೆಕ್ಸ್‌ 1,200% ರಿಟರ್ನ್‌ ಕೊಟ್ಟಿದೆ. ಕಳೆದ 10 ವರ್ಷಗಳಲ್ಲಿ 233% ಲಾಭ ನೀಡಿದೆ.

ಚಿನ್ನ, ಬೆಳ್ಳಿ, ಪ್ಲಾಟಿನಂ ಮುಂತಾದ ಅಮೂಲ್ಯ ಲೋಹಗಳು ಪ್ರಕೃತಿಯಲ್ಲಿ ಸೀಮಿತವಾಗಿ ಸಿಗುತ್ತವೆ. ಆದ್ದರಿಂದ ಇವುಗಳ ಬೆಲೆ ಮತ್ತು ಬೇಡಿಕೆ ಎರಡೂ ಹೆಚ್ಚು. ಆದ್ದರಿಂದ ಇವುಗಳ ಆರ್ಥಿಕ ಮೌಲ್ಯವೂ ಗಣನೀಯವಾಗಿದೆ. ಹೂಡಿಕೆಯ ದೃಷ್ಟಿಯಿಂದ ನೋಡಿದರೆ ಚಿನ್ನ ಮತ್ತು ಬೆಳ್ಳಿ ಅಮೂಲ್ಯವಾಗಿವೆ. ಇದರ ಪ್ರಯೋಜನಗಳ ಬಗ್ಗೆ ತಿಳಿಯೋಣ.

ಜಾಗತಿಕ ಮಟ್ಟದಲ್ಲಿ ಅರ್ಥ ವ್ಯವಸ್ಥೆ ಅಸ್ಥಿರವಾದಾಗ, ಷೇರು ಮಾರುಕಟ್ಟೆಗಳು ಏರುಪೇರಾದಾಗ, ಇತರ ಅಸೆಟ್‌ಗಳ ಮೇಲೆ ವಿಶ್ವಾಸ ನಷ್ಟವಾದಾಗ ಹೂಡಿಕೆದಾರರು ಚಿನ್ನ ಮತ್ತು ಬೆಳ್ಳಿಯ ಕಡೆಗೆ ನೋಡುತ್ತಾರೆ. ಏಕೆಂದರೆ ಅಂಥ ಸಂದರ್ಭಗಳಲ್ಲಿ ಬಂಗಾರದ ದರ ಹೆಚ್ಚುತ್ತದೆ. ವಿಪತ್ತಿನ ಸಂದರ್ಭ ಹೂಡಿಕೆಯ ಸುರಕ್ಷಿತ ತಾಣವಾಗಿ ಚಿನ್ನಕ್ಕೆ ಬೆಲೆ ಯಾವತ್ತಿಗೂ ಇದ್ದೇ ಇರುತ್ತದೆ. ನೀವು ಕರೆನ್ಸಿಗಳಲ್ಲಿಯೂ ಸಂಪತ್ತನ್ನು ಹೊಂದಬಹುದು. ಆದರೆ ಹಣದುಬ್ಬರ ಹೆಚ್ಚಿದಾಗ ಕರೆನ್ಸಿಗಳ ಮೌಲ್ಯ ಕಡಿಮೆಯಾಗುತ್ತದೆ. ಹೀಗಾಗಿ ಹಣದುಬ್ಬರದ ಎದುರು ಬಂಗಾರ ಸದೃಢವಾಗಿರುತ್ತದೆ ಹಾಗೂ ಮೌಲ್ಯವನ್ನು ಕಳೆದುಕೊಳ್ಳುವುದಿಲ್ಲ. ಅಮೆರಿಕ ಸೇರಿದಂತೆ ಹಲವು ಪ್ರಮುಖ ರಾಷ್ಟ್ರಗಳು ಕೋವಿಡ್‌ ಬಿಕ್ಕಟ್ಟಿನ ಬಳಿಕ ಆರ್ಥಿಕತೆಯ ಚೇತರಿಕೆ ಸಲುವಾಗಿ ನೋಟುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮುದ್ರಿಸಿದ್ದವು. ಬಳಿಕ ಹಣದುಬ್ಬರವೂ ಗಗನಕ್ಕೇರಿತ್ತು. ಅಂಥ ಸಂದರ್ಭದಲ್ಲಿ ಸಂಪತ್ತನ್ನು ಸಂರಕ್ಷಿಸಲು ಚಿನ್ನದಲ್ಲಿನ ಹೂಡಿಕೆ ಸಹಾಯಕವಾಗುತ್ತದೆ.

ಬಂಗಾರದಲ್ಲಿ ಹೂಡಿಕೆ ಮಾಡುವುದರಿಂದ ನಿಮ್ಮ ಹೂಡಿಕೆಯು ವೈವಿಧ್ಯಮಯವಾಗುತ್ತದೆ. ಇದರಿಂದ ರಿಸ್ಕ್‌ ಕೂಡ ಕಡಿಮೆಯಾಗುತ್ತದೆ. ಬಂಗಾರವನ್ನು ಮಾರಾಟ ಮಾಡಿ ಹಣ ಗಳಿಸುವುದು ಸುಲಭ. ಯಾವುದೇ ಜ್ಯುವೆಲ್ಲರಿ ಶಾಪ್‌ಗಳಲ್ಲಿ ಚಿನ್ನವನ್ನು ಕೊಟ್ಟು ದುಡ್ಡು ಪಡೆಯಬಹುದು. ಒಳ್ಳೆಯ ಸಮಯವೇ ಆಗಿರಲಿ, ವಿಪತ್ತಿನ ಸಮಯವೇ ಆಗಿರಲಿ, ಚಿನ್ನದ ಮೇಲಿನ ಹೂಡಿಕೆ ಬೆಸ್ಟ್.‌ ಬಂಗಾರವನ್ನು ಅಡವಿಟ್ಟು ಸುಲಭವಾಗಿ ಸಾಲವನ್ನೂ ಗಳಿಸಬಹುದು. ಚಿನ್ನದ ಆಭರಣ, ನಾಣ್ಯ ಅಥವಾ ಗಟ್ಟಿಗಳನ್ನು ಖರೀದಿಸುವುದು ಜನಪ್ರಿಯ ಮತ್ತು ಸಾಂಪ್ರದಾಯಿಕ ಹೂಡಿಕೆಯ ವಿಧಾನವಾಗಿದೆ. ಆದರೆ ಭೌತಿಕ ಬಂಗಾರ ಬೇಡ ಎಂದಿದ್ದರೆ ಗೋಲ್ಡ್‌ ಇಟಿಎಫ್‌, ಸಾವರಿನ್‌ ಗೋಲ್ಡ್‌ ಬಾಂಡ್‌, ಡಿಜಿಟಲ್‌ ಗೋಲ್ಡ್‌, ಗೋಲ್ಡ್‌ ಮೈನಿಂಗ್‌ ಕಂಪನಿಗಳ ಷೇರುಗಳಲ್ಲಿಯೂ ಹೂಡಿಕೆ ಮಾಡಬಹುದು.ಸಂಶೋಧನೆ ಮತ್ತು ಅಧ್ಯಯನಗಳ ಪ್ರಕಾರ, ದೀರ್ಘಕಾಲೀನವಾಗಿ ಷೇರುಗಳಲ್ಲಿನ ಹೂಡಿಕೆಯು ಇತರ ಮಾದರಿಗಳ ಹೂಡಿಕೆಗಿಂತ ಹೆಚ್ಚಿನ ಲಾಭವನ್ನು ಕೊಟ್ಟಿದೆ.

ನೀವು ಬಂಗಾರದಲ್ಲಿಯೇ ಹೂಡಿಕೆ ಮಾಡಬಹುದು ಅಥವಾ ಷೇರುಗಳಲ್ಲಿಯೇ ಹೂಡಿಕೆ ಮಾಡಬಹುದು. ಇದೆಲ್ಲವೂ ನಿಮ್ಮ ಮಾರುಕಟ್ಟೆಯ ರಿಸ್ಕ್‌ ಅನ್ನು ತೆಗೆದುಕೊಳ್ಳುವ ನಿಮ್ಮ ಸಾಮರ್ಥ್ಯ, ಹೂಡಿಕೆಯ ಸುರಕ್ಷತೆ ಮತ್ತು ಸಂದರ್ಭವನ್ನು ಅವಲಂಬಿಸಿದೆ. ಹೆಚ್ಚು ಲಾಭದ ಗುರಿ ಇದ್ದರೆ ಷೇರುಗಳಲ್ಲಿ ಹೂಡಿಕೆ ಮಾಡಬಹುದು. ಆದರೆ ಸುರಕ್ಷಿತ ಹೂಡಿಕೆಯನ್ನು ಬಯಸುವುದಿದ್ದರೆ, ಷೇರಿಗಿಂತ ಬಂಗಾರ ಹೆಚ್ಚು ಸುರಕ್ಷಿತ.

ಹೂಡಿಕೆಯ ದೃಷ್ಟಿಯಿಂದ ಜ್ಯುವೆಲ್ಲರಿಗಿಂತ ಗೋಲ್ಡ್‌ ಇಟಿಎಫ್‌, ಸಾವರಿನ್‌ ಗೋಲ್ಡ್ ಬಾಂಡ್‌ಗಳು ಸೂಕ್ತ. ಏಕೆಂದರೆ ಆಭರಣಗಳಲ್ಲಿ ಮೇಕಿಂಗ್‌ ಚಾರ್ಜ್‌ ಕೊಡಬೇಕಾಗುತ್ತದೆ. ಸ್ಟಾಕ್ಸ್‌ ಮತ್ತು ಬಂಗಾರದ ಹೂಡಿಕೆಯ ಉದ್ದೇಶಗಳು ಬೇರೆ ಬೇರೆಯಾಗಿರುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಬಂಗಾರವು ಆರ್ಥಿಕ ಅನಿಶ್ಚಿತತೆಯ ಸಂದರ್ಭ ಸಂಪತ್ತಿನ ರಕ್ಷಣೆಗೆ ಒಳ್ಳೆಯದು. ಆದರೆ ಹಣದುಬ್ಬರದ ಎದುರು ದೀರ್ಘಕಾಲೀನವಾಗಿ ಷೇರುಗಳು ಹೆಚ್ಚು ಲಾಭವನ್ನು ಕೊಡುತ್ತವೆ.

ಈ ಸುದ್ದಿಯನ್ನೂ ಓದಿ: Stock Market: ಕಡಿಮೆ ದರದಲ್ಲಿ 8 ಟಾಟಾ ಸ್ಟಾಕ್ಸ್!‌ ಕುಬೇರರಾಗಲು ಸುವರ್ಣಾವಕಾಶ