Sunday, 11th May 2025

Stock Market: ಸ್ಟಾಕ್‌ ಮಾರ್ಕೆಟ್‌ನಲ್ಲಿ 3,000 ಕೋಟಿ ರೂ. ಗಳಿಸಿದ ಚಾರ್ಟರ್ಡ್‌ ಅಕೌಂಟೆಂಟ್!

Stock Market

ಮುಂಬಯಿ: ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದಿದ್ದ ಪ್ರತಿಭಾವಂತ ಚಾರ್ಟರ್ಡ್‌ ಅಕೌಂಟೆಂಟ್‌ರೊಬ್ಬರು ಸ್ಟಾಕ್‌ ಮಾರ್ಕೆಟ್‌ (Stock Market)ನಲ್ಲಿ ತೊಡಗಿಸಿಕೊಂಡು 3,000 ಕೋಟಿ ರೂ.ಗೂ ಹೆಚ್ಚು ಸಂಪತ್ತನ್ನು ಗಳಿಸಿದ ಯಶೋಗಾಥೆಯಿದು. ಅವರ ಹೂಡಿಕೆಯ ತಂತ್ರಗಾರಿಕೆ ಏನು? ಅವರೇನು ಮಾಡುತ್ತಾರೆ? ತಿಳಿದುಕೊಳ್ಳೋಣ.

ಸುನಿಲ್‌ ಸಿಂಘಾನಿಯಾ (Sunil Singhania) ಅವರು ಅಬಾಕಸ್‌ ಅಸೆಟ್‌ ಮ್ಯಾನೇಜರ್‌ ಎಂಬ ಪೋರ್ಟ್‌ಫೋಲಿಯೊ ಮ್ಯಾನೇಜ್‌ಮೆಂಟ್‌ ಸೇವೆಯನ್ನು ಒದಗಿಸುವ ಸಂಸ್ಥೆಯ ಸ್ಥಾಪಕರಾಗಿದ್ದಾರೆ. ಸುಮಾರು 36,700 ಕೋಟಿ ರೂ. ಮೌಲ್ಯದ ಅಸೆಟ್‌ ಅನ್ನು ಈ ಸಂಸ್ಥೆ ನಿರ್ವಹಿಸುತ್ತಿದೆ. ಅಬಾಕಸ್‌ ಸಂಸ್ಥೆಯ ಆಕರ್ಷಕ ಟ್ಯಾಗ್‌ಲೈನ್‌ ಹೀಗೆ ಅರ್ಥಪೂರ್ಣವಾಗಿದೆ -ಬಿಲೀವ್‌ ಇನ್‌ ಬೇಸಿಕ್ಸ್‌. ಗ್ರಾಹಕರಿಗೆ ಈಕ್ವಿಟಿ ಹೂಡಿಕೆಯ ನಿರ್ವಹಣೆಗೆ ಸಂಬಂಧಿಸಿದ ಸಮಗ್ರ ಸೇವೆಯನ್ನು ಈ ಸಂಸ್ಥೆ ಒದಗಿಸುತ್ತದೆ.

ಸುನಿಲ್‌ ಸಿಂಘಾನಿಯಾ ಅವರು ದೀರ್ಘಾವಧಿಯ ಹೂಡಿಕೆ ಮತ್ತು ವಾಸ್ತವವನ್ನು ಅಧರಿಸಿದ ಆದಾಯದ ನಿರೀಕ್ಷೆಗಳ ಬಗ್ಗೆ ಹೆಚ್ಚು ನಂಬಿಕೆಯನ್ನು ಹೊಂದಿದ್ದಾರೆ. ಹಣಕಾಸು, ಔಷಧ, ಮೂಲಸೌಕರ್ಯ, ಕ್ಯಾಪೆಕ್ಸ್‌ ಸಂಬಂಧಿತ ವಲಯಗಳಲ್ಲಿ ಹೂಡಿಕೆ ಹೆಚ್ಚು ಲಾಭದಾಯಕ ಎಂಬುದು ಅವರ ಅನುಭವದ ಮಾತು. ನವೀಕರಿಸಬಹುದಾದ ಇಂಧನ ವಲಯದ ಬಗ್ಗೆ ಅವರಿಗೆ ವಿಶ್ವಾಸ ಇದೆ. ಹೀಗಿದ್ದರೂ Overvalued theme based sectors ಬಗ್ಗೆ ಎಚ್ಚರ ವಹಿಸಬೇಕು ಎಂಬ ಸಲಹೆ ನೀಡುತ್ತಾರೆ.

ಮುಂಬಯಿ ಮೂಲದ ಸುನಿಲ್‌ ಸಿಂಘಾನಿಯಾ ಅವರು ಮಧ್ಯಮ ವರ್ಗದ ಮಾರ್ವಾಡಿ ಕುಟುಂಬವೊಂದರಲ್ಲಿ ಜನಿಸಿದರು. ತಂದೆ ಬಿರ್ಲಾ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಮುಂಬಯಿನ ಕಾನ್ವೆಂಟ್‌ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದರು. ಬಾಂಬೆ ವಿಶ್ವವಿದ್ಯಾಲಯದಿಂದ ವಾಣಿಜ್ಯ ವಿಷಯದಲ್ಲಿ ಪದವಿ ಗಳಿಸಿದರು. ಬಳಿಕ ಚಾರ್ಟರ್ಡ್‌ ಅಕೌಂಟೆಂಟ್‌ ಆಗಲು ನಿರ್ಧರಿಸಿದರು.

ದಿಲ್ಲಿಯಲ್ಲಿ ಇನ್‌ಸ್ಟಿಟ್ಯೂಟ್‌ ಆಫ್‌ ಚಾರ್ಟರ್ಡ್‌ ಅಕೌಂಟೆಂ೧ಟ್ಸ್‌ ಆಫ್‌ ಇಂಡಿಯಾದಿಂದ ಚಾರ್ಟರ್ಡ್‌ ಅಕೌಂಟೆಂಟ್‌ ಪದವಿ ಗಳಿಸಿದರು. 1988ರಲ್ಲಿ ಅಖಿಲ ಭಾರತ ಮಟ್ಟದಲ್ಲಿ ರ್‍ಯಾಂಕ್‌ ಗಳಿಸಿದ್ದ ಚಾರ್ಟರ್ಡ್‌ ಅಕೌಂಟೆಂಟ್‌ ಆಗಿದ್ದರು. ಸ್ಟಾಕ್‌ ಬ್ರೋಕರ್‌ಗಳ ಸಂಘಟನೆಯಾದ ದಿ ಅಸೋಸಿಯೇಶನ್‌ ಆಫ್‌ ಎನ್‌ಎಸ್‌ಇ ಮೆಂಬರ್ಸ್‌ ಆಫ್‌ ಇಂಡಿಯಾದಲ್ಲಿ ಸಕ್ರಿಯರಾಗಿದ್ದರು. ಈ ವೇಳೆಗೆ ಷೇರು ಮಾರುಕಟ್ಟೆಯಲ್ಲಿ ಅವರಿಗೆ ಆಸಕ್ತಿ ಉಂಟಾಗಿತ್ತು. ಇದು ಅವರ ಬದುಕಿನ ದಿಕ್ಕನ್ನೇ ಬದಲಿಸಿತು. ಚಾರ್ಟರ್ಡ್‌ ಅಕೌಂಟೆಂಟ್‌ ಆಗಿದ್ದರಿಂದ ಕಂಪನಿಗಳ ಒಳಹೊರಗುಗಳ ಬಗ್ಗೆ ಅವರಿಗೆ ತಿಳುವಳಿಕೆ ಉಂಟಾಯಿತು. ಬಳಿಕ ಎನ್‌ಎಸ್‌ಇನಲ್ಲಿ ಸ್ಟಾಕ್ ಬ್ರೋಕರ್‌ ಆದರು. ಷೇರು ಮಾರುಕಟ್ಟೆ ಬಗ್ಗೆ ಆಳವಾದ ಸಂಶೋಧನೆಗೂ ತೊಡಗಿದರು.‌ ಬಳಿಕ ಅವರು ಹಿಂತಿರುಗಿ ನೋಡಿದ್ದೇ ಇಲ್ಲ.

ಭಾರತೀಯ ಷೇರು ಮಾರುಕಟ್ಟೆಯಲ್ಲಿ 20ಕ್ಕೂ ಹೆಚ್ಚು ವರ್ಷಗಳಿಂದ ಸಕ್ರಿಯರಾಗಿದ್ದಾರೆ. ತಮ್ಮ ಅಬಾಕಸ್‌ ಅಸೆಟ್‌ ಮ್ಯಾನೇಜರ್‌ ಕಂಪನಿಯನ್ನು ಸ್ಥಾಪಿಸುವುದಕ್ಕಿಂತ ಮೊದಲು ರಿಲಯನ್ಸ್‌ ಕ್ಯಾಪಿಟಲ್‌ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ಅಲ್ಲಿ ಫಂಡ್‌ಗಳನ್ನು ಚೆನ್ನಾಗಿ ನಿರ್ವಹಿಸುತ್ತಿದ್ದರು. ಸ್ಮಾರ್ಟ್‌ ಇನ್ವೆಸ್ಟ್‌ಮೆಂಟ್‌ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. ಇದಕ್ಕಾಗಿ ರಿಲಯನ್ಸ್‌ ಕ್ಯಾಪಿಟಲ್‌ನಲ್ಲಿ ಈಕ್ವಿಟಿ ವಿಭಾಗಕ್ಕೆ ಗ್ಲೋಬಲ್‌ ಹೆಡ್‌ ಆಗಿದ್ದರು. ಅವರ ನೇತೃತ್ವದಲ್ಲಿ ರಿಲಯನ್ಸ್‌ ಗ್ರೋತ್‌ ಫಂಡ್‌ 100 ಪಟ್ಟು ಬೆಳೆದಿತ್ತು. ಸುನಿಲ್‌ ಸಿಂಘಾನಿಯಾ ಅವರ ನಿವ್ವಳ ಸಂಪತ್ತು 3,000 ಕೋಟಿ ರೂ.ಗೂ ಹೆಚ್ಚು. 2018ರಲ್ಲಿ ಅಬಾಕಸ್‌ ಸಂಸ್ಥೆಯನ್ನು ಸ್ಥಾಪಿಸಿದರು. ಅವರ ಹೂಡಿಕೆಯ ಕಾರ್ಯತಂತ್ರ ಏನೆಂದರೆ, ವೈವಿಧ್ಯಮಯ ಪೋರ್ಟ್‌ ಫೋಲಿಯೊ, ಬೃಹತ್‌ ಮತ್ತು ಬೆಳವಣಿಗೆಯ ಸಾಧ್ಯತೆ ಇರುವ ಸಣ್ಣ ಕಂಪನಿಗಳಲ್ಲಿ ಹೂಡಿಕೆ.

ಷೇರು ಮಾರುಕಟ್ಟೆ ಎಂದರೆ ಏರಿಳಿತಗಳು ಇರುತ್ತವೆ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಮಾರುಕಟ್ಟೆ ಯಾವಾಗ ನಿಶ್ಚಲವಾಗಿದೆ ಹೇಳಿ? ಈಕ್ವಿಟಿ ಮಾರುಕಟ್ಟೆಯಲ್ಲಿ ಏರಿಕೆ ಮತ್ತು ಇಳಿಕೆ ಅವಿಭಾಜ್ಯ ಅಂಶ. ನಾವು ಈಕ್ವಿಟಿ ಮಾರುಕಟ್ಟೆ ಎಂದರೆ ಕಾರ್ಡಿಯೊಗ್ರಾಮ್‌ ಎಂದು ಹಾಸ್ಯ ಚಟಾಕಿ ಹಾರಿಸುವುದಿದೆ. ಈ ಏರಿಕೆ ಮತ್ತು ಇಳಿಕೆ ಇರುವವರೆಗೆ ಮಾರುಕಟ್ಟೆ ಜೀವಂತವಾಗಿರುತ್ತದೆ. ನಾವೆಲ್ಲರೂ ವಹಿವಾಟು ನಡೆಸುತ್ತಿರುತ್ತೇವೆ. ಭವಿಷ್ಯದಲ್ಲಿ ಈ ಅನಿಶ್ಚಿತತೆ ಇರುವುದಿಲ್ಲ ಎಂದು ನಂಬಲು ಯಾವ ಕಾರಣಗಳೂ ಇಲ್ಲ. ಹೀಗಿದ್ದರೂ, ಷೇರು ಮಾರುಕಟ್ಟೆಯಲ್ಲಿ ಏರಿಳಿತದ ತೀವ್ರತೆಯನ್ನು ಘಟನಾವಳಿಗಳು ಆಧರಿಸಿರುತ್ತವೆ.

ನಾನೊಬ್ಬ ಸಾಂಪ್ರದಾಯಿಕ ಹೂಡಿಕೆದಾರ. ಈಕ್ವಿಟಿ ಮಾರುಕಟ್ಟೆಗಳು ಜಾಗತಿಕವಾಗಿ 300 ವರ್ಷಗಳ ಇತಿಹಾಸವನ್ನು ಒಳಗೊಂಡಿವೆ. ಭಾರತದಲ್ಲಿ 150 ವರ್ಷಗಳ ಚರಿತ್ರೆಯನ್ನು ಹೊಂದಿದೆ. ಕೊನೆಯದಾಗಿ ನಾವು ಕಂಪನಿಗಳಲ್ಲಿ ಹೂಡಿಕೆ ಮಾಡುತ್ತೇವೆ. ಹೀಗಾಗಿ, ಕಂಪನಿಯ ಲಾಭವನ್ನು ಆಧರಿಸಿ ಷೇರು ಹೂಡಿಕೆಯಿಂದ ಆದಾಯ ಸಿಗುತ್ತದೆ. ಭಾರತದ ಕಾರ್ಪೊರೇಟ್‌ ವಲಯದಲ್ಲಿ ಕಂಪನಿಗಳ ಲಾಭ ಏರಿಕೆಯಾಗುವುದರಲ್ಲಿ ಸಂದೇಹವಿಲ್ಲ. ಏಕೆಂದರೆ ದೇಶದ ಆರ್ಥಿಕತೆ ವಾರ್ಷಿಕ 6-7% ರಷ್ಟು ಬೆಳವಣಿಗೆಯಾಗುತ್ತಿದೆ.

ಹೂಡಿಕೆಯ ಕಾರ್ಯತಂತ್ರದ ಬಗ್ಗೆ ಸುನಿಲ್‌ ಸಿಂಘಾನಿಯಾ ಹೀಗೆನ್ನುತ್ತಾರೆ “ಹೂಡಿಕೆದಾರರಾಗಿ ನಾವು ಸದಾ ಒಳ್ಳೆಯ ಅವಕಾಶಗಳಿಗೆ ಕಾಯುತ್ತಿರುತ್ತೇವೆ. ಅದು ಸಣ್ಣದಾಗಿರಬಹುದು ಅಥವಾ ಮಧ್ಯಮ ಇಲ್ಲವೇ ದೊಡ್ಡದಾಗಿರಬಹುದು. ಉತ್ತಮ ಅವಕಾಶಗಳನ್ನು ಕಂಡುಕೊಳ್ಳುವುದು ಮುಖ್ಯ. ಇದು ಅಷ್ಟು ಸುಲಭವೂ ಅಲ್ಲ, ಏಕೆಂದರೆ ನಾವೀಗ ದುಬಾರಿ ಷೇರುಗಳ ಕಾಲಘಟ್ಟದಲ್ಲಿ ಇದ್ದೇವೆ. ಆದರೂ ನೀವು ವರ್ಷಕ್ಕೆ 5-6 ಒಳ್ಳೆಯ ಷೇರುಗಳನ್ನು ಆಯ್ಕೆ ಮಾಡಿಕೊಂಡು ದೀರ್ಘಾವಧಿಗೆ ತಾಳ್ಮೆಯಿಂದ ಕಾದುಕೊಂಡರೆ ಉತ್ತಮ ಆದಾಯವನ್ನೂ ಗಳಿಸಬಹುದು. 2020ರಲ್ಲಿ ನಾವು ಎರಡು ವರ್ಷದಲ್ಲಿ ಡಬಲ್‌ ಆಗಬಲ್ಲ ಷೇರುಗಳನ್ನು ಹುಡುಕುತ್ತಾ ಅಂಥವುಗಳಲ್ಲಿ ಹೂಡಿಕೆ ಮಾಡುವ ರಿಸ್ಕ್‌ ತೆಗೆದುಕೊಳ್ಳುತ್ತಿದ್ದೆವು. 2021ರಲ್ಲಿ ನಾವು 3 ವರ್ಷಗಳಲ್ಲಿ ಡಬಲ್‌ ಆಗಬಹುದಾದ ಷೇರುಗಳನ್ನು ಹುಡುಕಿ ಹೂಡಿಕೆ ಮಾಡುತ್ತಿದ್ದೆವು. ಕಳೆದ ವರ್ಷ ನಾವು ನಾಲ್ಕು ವರ್ಷಗಳಲ್ಲಿ ಇಮ್ಮಡಿಯಾಗಬಲ್ಲ ಷೇರುಗಳಲ್ಲಿ ಹೂಡಿಕೆ ಮಾಡಿದೆವು. ಈಗ ನಾವು ಐದು ವರ್ಷಗಳಲ್ಲಿ ಡಬಲ್‌ ಆಗಬಲ್ಲ ಷೇರುಗಳಲ್ಲಿ ಕೂಡ ಖುಷಿಯಿಂದ ಹೂಡಿಕೆ ಮಾಡಬಲ್ಲೆವು. ನೀವು ವಾಸ್ತವತಾವಾದಿಯಾಗಿ ಆದಾಯವನ್ನು ನಿರೀಕ್ಷಿಸುತ್ತಾ ವ್ಯವಸ್ಥಿತವಾಗಿ ಹೂಡಿಕೆ ಮಾಡುತ್ತಾ ಹೋದರೆ, ಯಾವುದೇ ಗೊಂದಲ, ಗೋಜಲುಗಳಿಗೆ ಅವಕಾಶ ಇರುವುದಿಲ್ಲ. ಷೇರು ಮಾರುಕಟ್ಟೆಯಲ್ಲಿ ಹೇರಳ ಅವಕಾಶಗಳು ಇವೆ. ಆದರೆ ನಿಮ್ಮ ನಿರೀಕ್ಷೆಗಳು ವಾಸ್ತವಕ್ಕೆ ಹತ್ತಿರವಾಗಿ ಇರಬೇಕು. ನೀವು 13%, 14%, 15%, 16% ಆದಾಯವನ್ನು ನಿರೀಕ್ಷಿಸುತ್ತಿದ್ದರೆ ಕೆಲವು ಲಾರ್ಜ್‌ ಕ್ಯಾಪ್‌ ಕಂಪನಿಗಳ ಷೇರುಗಳನ್ನು ಖರೀದಿಸಿದರೂ ಸಾಕಾಗಬಹುದು. ನೀವು ಡೀಸೆಂಟ್‌ ರಿಟರ್ನ್‌ ಅನ್ನು ನಿರೀಕ್ಷಿಸುತ್ತಿದ್ದರೆ ಮತ್ತು ದೀರ್ಘಾವಧಿಗೆ ಹೂಡಿಕೆಯನ್ನು ಇಟ್ಟುಕೊಳ್ಳಲು ಸಿದ್ಧವಿದ್ದರೆ, ಯಾವುದೇ ಸಂದರ್ಭದಲ್ಲೂ ಹೂಡಿಕೆ ಮಾಡಬಹುದು. ಸದ್ಯದ ಮಾರುಕಟ್ಟೆಯ ಪರಿಸ್ಥಿತಿಯನ್ನು ಗಮನಿಸಿದರೆ 10-15% ಅಗ್ಗದ ದರದಲ್ಲಿ ಷೇರುಗಳನ್ನು ಖರೀದಿಸಲು ಅವಕಾಶ ಸೃಷ್ಟಿಯಾಗಿದೆʼʼ ಎನ್ನುತ್ತಾರೆ ಸುನಿಲ್‌ ಸಿಂಘಾನಿಯಾ.

ಸಿಂಘಾನಿಯಾ ಅವರ ಇನ್ವೆಸ್ಟ್‌ಮೆಂಟ್‌ ಫಿಲಾಸಫಿಯಲ್ಲಿ MEETS ಎಂಬ ಚೌಕಟ್ಟು ಇದೆ. ಅದನ್ನು ಸ್ವಲ್ಪ ವಿವರವಾಗಿ ನೋಡೋಣ. ನಾನಾ ಕಂಪನಿಗಳಲ್ಲಿ ಷೇರು ಹೂಡಿಕೆ ಮಾಡುವವರಿಗೆ ಇದು ಉಪಯುಕ್ತವಾಗಬಹುದು.

ಮ್ಯಾನೇಜ್‌ಮೆಂಟ್ (Management): ಕಂಪನಿಯ ಸಾಮರ್ಥ್ಯ ಮತ್ತು ಟ್ರ್ಯಾಕ್‌ ರೆಕಾರ್ಡ್‌ ಉತ್ತಮವಾಗಿರಬೇಕು. ಬಂಡವಾಳವನ್ನು ಹೇಗೆ ಹಂಚಿಕೆ ಮಾಡಿದ್ದಾರೆ ಎಂಬುದನ್ನು ಗಮನಿಸಬೇಕು.
ಆದಾಯ ಗಳಿಕೆ (Earnings): ಕಂಪನಿಯ ತ್ರೈಮಾಸಿಕ, ಅರ್ಧ ವಾರ್ಷಿಕ ಮತ್ತು ವಾರ್ಷಿಕ ಆದಾಯಗಳನ್ನು ಗಮನಿಸಬೇಕು. ನಾಲ್ಕು ವರ್ಷಕ್ಕೊಮ್ಮೆ ಕಂಪನಿಯ ಲಾಭ ಡಬಲ್‌ ಆಗಿದೆಯೇ ಎಂಬುದನ್ನು ನೋಡಬೇಕು.
ಘಟನಾವಳಿಗಳು (Events): ಷೇರಿನ ಚಲನವಲನಗಳ ಮೇಲೆ ಘಟನಾವಳಿಗಳು ಪ್ರಭಾವ ಬೀರುತ್ತವೆ. ಮಾರುಕಟ್ಟೆಯ ಟ್ರೆಂಡ್‌, ಹೊಸ ಥೀಮ್‌ಗಳು ಪ್ರಭಾವ ಬೀರಬಹುದು.
ಸಕಾಲಿಕ (Timings): ಒಳ್ಳೆಯ ಕಂಪನಿ ಷೇರುಗಳಲ್ಲಿನ ಹೂಡಿಕೆಯು, ಷೇರಿನ ದರ ಸರಿಯಾಗಿರದಿದ್ದರೆ, ಉತ್ತಮ ಹೂಡಿಕೆಯಾಗುವುದಿಲ್ಲ. ಉತ್ತಮ ಕಂಪನಿಯ ಷೇರುಗಳು ದುಬಾರಿಯಾಗಿದ್ದರೆ, ಅಂಥ ಹೂಡಿಕೆ ಲಾಭದಾಯಕವಾಗದು. ಷೇರಿನ ದರ ಡಿಸ್ಕೌಂಟ್‌ನಲ್ಲಿ ಸಿಗಬೇಕು. ಒಳ್ಳೆಯ ಷೇರು ಅಗ್ಗವಾದಾಗ ಖರೀದಿಸಿದರೆ ಲಾಭ ಹೆಚ್ಚು. ಆದ್ದರಿಂದ ಟೈಮಿಂಗ್‌ ಮುಖ್ಯ.
ಸ್ವರೂಪ (Structure): ಷೇರುಗಳಲ್ಲಿ ಹೂಡಿಕೆಯ ಅವಕಾಶ, ಡಿಸ್ಕೌಂಟ್‌, ಕಂಪನಿಯ ಲಾಭದಲ್ಲಿ ಬೆಳವಣಿಗೆ ನಿರ್ಣಾಯಕವಾಗುತ್ತದೆ.

ಥೀಮ್‌ ಆಧಾರಿತ ಹೂಡಿಕೆ ಸೂಕ್ತವೇ? ಎಂಬ ಪ್ರಶ್ನೆಗೆ ಸುನಿಲ್‌ ಸಿಂಘಾನಿಯಾ ಹೀಗೆನ್ನುತ್ತಾರೆ, “ಮಾರುಕಟ್ಟೆಯಲ್ಲಿ ಹಲವಾರು ಥೀಮ್‌ ಅಧಾರಿತ ಸೆಕ್ಟರ್‌ಗಳು ಇವೆ. ರೈಲ್ವೆ, ರಕ್ಷಣೆ, ರಿನೆವಬಲ್‌ ಎನರ್ಜಿ ಇತ್ಯಾದಿ ವಲಯಗಳು ಗಮನ ಸೆಳೆಯುತ್ತವೆ. ಇವೆಲ್ಲವೂ ಒಳ್ಳೆಯ ವಲಯಗಳೇ ಆಗಿದ್ದರೂ, ಉತ್ತಮ ಕಂಪನಿಯ ಷೇರುಗಳನ್ನು ಅಗ್ಗದ ದರದಲ್ಲಿ ಪಡೆಯುವುದು ಮುಖ್ಯʼʼ.

ʼʼಭಾರತ 1947ರಲ್ಲಿ ಸ್ವಾತಂತ್ರ್ಯ ಗಳಿಸಿತು. ನಮ್ಮ ದೇಶ 2010ರಲ್ಲಿ 1 ಟ್ರಿಲಿಯನ್‌ ಡಾಲರ್‌ ಅಥವಾ 1 ಲಕ್ಷ ಕೋಟಿ ಡಾಲರ್ ಗಾತ್ರದ ಆರ್ಥಿಕತೆಯಾಯಿತು. ಅಂದರೆ ಮೊದಲ ಟ್ರಿಲಿಯನ್‌ ಡಾಲರ್‌ಗೆ ಮುಟ್ಟಲು 63 ವರ್ಷ ಬೇಕಾಯಿತು. ಆದರೆ 2017ರಲ್ಲಿ ಎರಡನೇ ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯಾಗಿ ಹೊರಹೊಮ್ಮಿತು. ಅಂದರೆ ಕೇವಲ 7 ವರ್ಷಗಳಲ್ಲಿ ಎರಡನೇ ಟ್ರಿಲಿಯನ್‌ ಸಾಧ್ಯವಾಯಿತು. 2020ರಲ್ಲಿ ಮೂರು ಟ್ರಿಲಿಯನ್‌ ಡಾಲರ್‌ ಇಕಾನಮಿಯಾಗಿದೆ. ಅಂದರೆ ಕೇವಲ ಮೂರೇ ವರ್ಷದಲ್ಲಿ ಇದು ಸಾಧ್ಯವಾಗಿದೆ. 2032ರ ವೇಳೆಗೆ ಭಾರತ 10 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯಾಗುವ ನಿರೀಕ್ಷೆ ಇದೆ. ಭಾರತ ಸರಾಸರಿ 6-7% ರ ದರದಲ್ಲಿ ಪ್ರಗತಿ ಸಾಧಿಸುವುದು ನಿಶ್ಚಿತ. ಇದು ಷೇರುಗಳಲ್ಲಿ ಹೂಡಿಕೆಗೆ ಮತ್ತು ಸಂಪತ್ತಿನ ಗಳಿಕೆಗೆ ದೊಡ್ಡ ಅವಕಾಶ ಸೃಷ್ಟಿಸಿದೆʼʼ ಎನ್ನುತ್ತಾರೆ ಸಿಂಘಾನಿಯಾ.

ತಾಳ್ಮೆ ಬೇಕು

ʼʼಷೇರು ಮಾರುಕಟ್ಟೆಯಲ್ಲಿ ಪ್ರತಿ ದಿನವೂ ಕಲಿಯುವ ನೂರಾರು ವಿಷಯಗಳಿರುತ್ತವೆ. ಕೆಲವರಿಗೆ 20 -30 ವರ್ಷ ಅನುಭವ ಇರಬಹುದು. ಕೆಲವರು ಹೊಸಬರಿರಬಹುದು. ಆದರೆ ಎಲ್ಲರೂ ಇಲ್ಲಿ ನಿರಂತರವಾಗಿ ಕಲಿಯಬೇಕಾದ ವಿಷಯಗಳಿರುತ್ತವೆ. ಯಶಸ್ಸಿಗೆ ಇದು ಮುಖ್ಯ. ಭಾರತದಲ್ಲಿ 10 ಕೋಟಿಗೂ ಹೆಚ್ಚು ಡಿಮ್ಯಾಟ್‌ ಖಾತೆಗಳನ್ನು ತೆರೆಯಲಾಗಿದೆ. ಕಳೆದ ಕೆಲ ವರ್ಷಗಳಿಂದ ಭಾರತೀಯರಲ್ಲಿ ಷೇರು ಹೂಡಿಕೆಯ ಬಗ್ಗೆ ಜಾಗೃತಿ ಉಂಟಾಗುತ್ತಿದೆ. ದೇಶದ ಆರ್ಥಿಕ ಬೆಳವಣಿಗೆಯ ಲಾಭವನ್ನು ಪಡೆಯಲು ಜನ ಉತ್ಸುಕರಾಗಿದ್ದಾರೆ. ಇದುವರೆಗೆ ವಿದೇಶಿ ಹೂಡಿಕೆದಾರರು ಮಾತ್ರ ಇದರ ಲಾಭ ಪಡೆಯುತ್ತಿದ್ದರು. ಈಗ ಉಂಟಾಗಿರುವ ಬದಲಾವಣೆ ಸ್ವಾಗತಾರ್ಹ. ಹೀಗಿದ್ದರೂ ಭಾರತೀಯ ರಿಟೇಲ್‌ ಹೂಡಿಕೆದಾರರು ಕ್ರಮಿಸಬೇಕಿರುವ ಹಾದಿ ಸುದೀರ್ಘವಾಗಿದೆ. ಷೇರು ಮಾರುಕಟ್ಟೆಯಲ್ಲಿ ದಿನ ಬೆಳಗಾಗುವುದರೊಳಗೆ ದುಡ್ಡು ಮಾಡಬೇಕು ಎಂಬ ಆತುರದಿಂದ ಅನೇಕ ಮಂದಿ ಹಣ ಕಳೆದುಕೊಳ್ಳುತ್ತಾರೆ. ಇದು ಸರಿಯಾದ ಮಾರ್ಗವಲ್ಲ. ದೀರ್ಘಕಾಲೀನ ಹೂಡಿಕೆಯ ಬದ್ಧತೆ ಮತ್ತು ತಾಳ್ಮೆ ಬೇಕುʼʼ ಎಂದು ಸುನಿಲ್‌ ಸಿಂಘಾನಿಯಾ ವಿವರಿಸುತ್ತಾರೆ.

ಈ ಸುದ್ದಿಯನ್ನೂ ಓದಿ: Stock Market: ಸೆನ್ಸೆಕ್ಸ್‌ 50ಕ್ಕೆ ಜಿಯೊ, ಜೊಮ್ಯಾಟೊ ಸೇರ್ಪಡೆ