Monday, 12th May 2025

ನಾಲ್ವರು ಸಂಸದರ ಅಮಾನತು ವಾಪಸ್‌

OmBirla

ನವದೆಹಲಿ: ನಾಲ್ವರು ಕಾಂಗ್ರೆಸ್ ಸಂಸದರ ಅಮಾನತು ಹಿಂಪಡೆಯಲಾಗಿದ್ದು, ಈ ಕುರಿತು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಅಧಿಕೃತ ಘೋಷಣೆ ಮಾಡಿದ್ದಾರೆ.

ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದರಾದ ಮಣಿಕಂ ಟ್ಯಾಗೋರ್, ರಮ್ಯಾ ಹರಿದಾಸ್, ಜ್ಯೋತಿಮಣಿ ಮತ್ತು ಟಿಎನ್ ಪ್ರತಾಪ ಅವರನ್ನು ಜು.26ರಂದು ಸದನದ ಕಲಾಪಗಳಿಂದ ಅಮಾನತುಗೊಳಿಸಲಾಗಿತ್ತು.

ಸದನದಲ್ಲಿ ಪ್ಲೆಕಾರ್ಡ್ ಹಿಡಿದು ಘೋಷಣೆ ಕೂಗಿದ್ದಕ್ಕೆ ಸ್ಪೀಕರ್ ಓಂ ಬಿರ್ಲಾ ಅವರು ಸಂಸದರನ್ನು ಅಮಾನತುಗೊಳಿಸಿದ್ದರು. ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಕಾಂಗ್ರೆಸ್ ಸಂಸದರ ಅಮಾನತು ಕ್ರಮವನ್ನು ಸೋಮವಾರ ಹಿಂಪಡೆದಿದ್ದಾರೆ. ಸಂಸತ್ತಿನ ಉಭಯ ಸದನಗಳನ್ನು ಮಧ್ಯಾಹ್ನದವರೆಗೆ ಮುಂದೂಡಲಾಗಿತ್ತು. ಪ್ರಕ್ರಿಯೆಗಳು ಪುನರಾ ರಂಭಗೊಂಡಿದ್ದು, ಬೆಲೆ ಏರಿಕೆ ಕುರಿತು ಚರ್ಚೆ ನಡೆಯುತ್ತಿದೆ.

ಲೋಕಸಭೆಯಲ್ಲಿ ಸಂಸದರ ಅಮಾನತು ತೆಗೆದುಹಾಕುವ ಪ್ರಸ್ತಾವನೆ ಅಂಗೀಕಾರ ಗೊಂಡ ನಂತರ ಸೋಮವಾರ ಕೆಳಮನೆಯಲ್ಲಿ ಗದ್ದಲ ಕೊನೆಗೊಂಡಿದ್ದು, ಬೆಲೆ ಏರಿಕೆ ಕುರಿತು ಸದನದಲ್ಲಿ ಕಾವೇರಿದ ಚರ್ಚೆ ಆರಂಭವಾಗಿದೆ. ಚರ್ಚೆ ಆರಂಭಿಸಿದ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಅವರು ಎಂಟು ವರ್ಷಗಳ ಆರ್ಥಿಕ ದುರುಪಯೋಗದ ಪರಿಣಾಮ ಇದಾಗಿದೆ. ಸರ್ಕಾರ ತನ್ನ ಬೊಕ್ಕಸ ತುಂಬಿಸುತ್ತಲೇ ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದರು.

ಕೋವಿಡ್ -19 ನಿಂದ ಬಳಲುತ್ತಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮರಳಿದ ನಂತರ ಸಂಸತ್ತಿನಲ್ಲಿ ಬೆಲೆ ಏರಿಕೆ ಕುರಿತು ಚರ್ಚೆ ನಡೆಸಲಾಗುವುದು ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಕಳೆದ ವಾರ ಭರವಸೆ ನೀಡಿದ್ದರು.

ಕಳೆದ ವಾರದ ಕೊನೆಯಲ್ಲಿ ಗುಜರಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮ ಸೇರಿದಂತೆ ಅಧಿಕೃತ ಕಾರ್ಯ ಕ್ರಮಗಳಲ್ಲಿ ಭಾಗವಹಿಸಿದ್ದ ಸೀತಾರಾಮನ್ ಈಗ ಕೋವಿಡ್‌ ಸೋಂಕಿನಿಂದ ಗುಣಮುಖರಾಗಿದ್ದಾರೆ.