ನವದೆಹಲಿ: ಭಾರತಿಯ ಜನತಾ ಪಕ್ಷವು (Bharatiya Janata Party) ಕಾಂಗ್ರೆಸ್ (Congress) ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದೆ (BJP-Congress Talk Fight). ಕಾಶ್ಮೀರ (Kashmir) ಒಂದು ಸ್ವತಂತ್ರ ದೇಶದ ಆಲೋಚನೆಗೆ ಬೆಂಬಲಿಸುವ ಜಾರ್ಜ್ ಸೊರೋಸ್ ಫೌಂಡೇಶನ್ (George Soros Foundation) ಹಣಕಾಸು ನೆರವನ್ನು ಒದಗಿಸುತ್ತಿರುವ ಸಂಘಟನೆಯೊಂದರ ಜೊತೆ ಸೋನಿಯಾ ಗಾಂಧಿ ಸಂಪರ್ಕವನ್ನು ಹೊಂದಿದ್ದಾರೆ ಎಂಬ ಗಂಭೀರವಾದ ಆರೋಪ ಕೇಳಿ ಬಂದಿದೆ.
ಈ ಕುರಿತಾಗಿರುವಂತೆ ಸರಣಿ ‘ಎಕ್ಸ್’ (X) ಪೋಸ್ಟ್ ಗಳನ್ನು ಮಾಡಿರುವ ಕೇಂದ್ರದ ಆಡಳಿತಾರೂಢ ಪಕ್ಷವು, ಈ ಭಾಗೀದಾರಿಕೆಯು ಭಾರತದ ಆಂತರಿಕ ವ್ಯವಹಾರಗಳಲ್ಲಿ ವಿದೇಶಿ ಶಕ್ತಿಗಳ ಕೈವಾಡಕ್ಕೆ ಸಿಕ್ಕ ಪುರಾವೆಯಾಗಿದೆ ಎಂದು ಹೇಳಿದೆ. ಭಾರತವನ್ನು ಅಸ್ಥಿರಗೊಳಿಸುವ ಶಕ್ತಿಗಳಿಗೆ ಬೆಂಬಲ ನಿಡುತ್ತಿದೆ ಎಂಬ ಬಿಜೆಪಿಯ ಆರೊಪಗಳನ್ನು ಅಮೆರಿಕಾ (USA) ಅಲ್ಲಗಳೆದಿರುವ ಹೊರತಾಗಿಯೂ, ಬಿಜೆಪಿ ಸಂಸದ ನಿಶಿಕಾಂತ್ ದುಬೆ (Nishikant Dubey), ಈ ವಿಚಾರಕ್ಕೆ ಸಂಬಂಧಿಸಿದಂತೆ ತಾನು ಲೋಕಸಭೆಯಲ್ಲಿ ಪ್ರತಿಪಕ್ಷಗಳ ನಾಯಕನಾಗಿರುವ ರಾಹುಲ್ ಗಾಂಧಿಯವರಿಗೆ (Rahul Gandhi) 10 ಪ್ರಶ್ನೆಗಳನ್ನು ಕೇಳುವುದಾಗಿ ಹೇಳಿದ್ದಾರೆ.
ಆರ್ಗನೈಸ್ಡ್ ಕ್ರೈಂ ಆಂಡ್ ಕರಪ್ಷನ್ ರಿಪೋರ್ಟಿಂಗ್ ಪ್ರಾಜೆಕ್ಟ್ (OCCRP) ಎಂಬ ಮಾಧ್ಯಮ ವೆಬ್ ಸೈಟ್ ಹಾಗೂ ಹಂಗೇರಿಯನ್ ಅಮೆರಿಕನ್ ಉದ್ಯಮಿಯೊಬ್ಬರು ಇಲ್ಲಿನ ಪ್ರತಿಪಕ್ಷದೊಂದಿಗೆ ಸೇರಿಕೊಂಡು ಭಾರತದ ಆರ್ಥಿಕತೆ ಮತ್ತು ಮೋದಿ ಸರಕಾರದ ಇಮೇಜ್ ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೊಪವನ್ನೂ ಸಹ ದುಬೆ ಇದೇ ಸಂದರ್ಭದಲ್ಲಿ ಮಾಡಿದ್ದಾರೆ.
ಸೋನಿಯಾ ಗಾಂಧಿ ಸಹ-ಅಧ್ಯಕ್ಷೆಯಾಗಿರುವ ಫೋರಂ ಆಫ್ ಡೆಮೊಕ್ರಾಟಿಕ್ ಲೀಡರ್ಸ್ ಇನ್ ಏಷ್ಯಾ ಪೆಸಿಫಿಕ್ (FDL-AP) ಫೌಂಡೇಶನ್, ಜಾರ್ಜ್ ಸಾರಸ್ ಫೌಂಡೇಶನ್ ಹಣಕಾಸು ನೆರವನ್ನು ನೀಡುತ್ತಿರುವ ಒಂದು ಸಂಸ್ಥೆಯೊಂದಿಗೆ ಸಂಬಂಧವನ್ನು ಹೊಂದಿದೆ ಎಂದು ಬಿಜೆಪಿಯ ಆರೊಪವಾಗಿದೆ.
‘ಗಮನಿಸಬೇಕಾದ ವಿಚಾರವೆಂದರೆ, ಈ ಎಫ್.ಡಿ.ಎಲ್.-ಎಪ ಫೌಂಡೇಶನ್ ಕಾಶ್ಮೀರ ವಿಚಾರದಲ್ಲಿ ತಮ್ಮ ಅಭಿಪ್ರಾಯವನ್ನು ಈಗಾಗಲೇ ವ್ಯಕ್ತಪಡಿಸಿದ್ದು, ಕಾಶ್ಮೀರ ಒಂದು ಸ್ವತಂತ್ರ ರಾಷ್ಟ್ರವಾಗಬೇಕು ಎಂಬುದನ್ನು ಈ ಅಭಿಪ್ರಾಯವು ಬೆಂಬಲಿಸುತ್ತದೆ’ ಎಂದು ಬಿಜೆಪಿ ಪಕ್ಷದ ಹೇಳಿಕೆಯನ್ನುದ್ದರಿಸಿ ಪಿಟಿಐ ವರದಿ ಮಾಡಿದೆ.
‘ಕಾಶ್ಮೀರ ಒಂದು ಪ್ರತ್ಯೇಕ ಸ್ವತಂತ್ರ ರಾಷ್ಟ್ರವಾಗಬೇಕು ಎಂಬ ಚಿಂತನೆಯನ್ನು ಬೆಂಬಲಿಸುತ್ತಿರುವ ಸಂಸ್ಥೆಯೊಂದರ ಜೊತೆ ಸೋನಿಯಾ ಗಾಂಧಿ ಸಂಬಂಧವನ್ನು ಹೊಂದಿದ್ದಾರೆ ಎಂಬುದು, ಭಾರತದ ಆಂತರಿಕ ವಿಚಾರದಲ್ಲಿ ವಿದೇಶಿ ಶಕ್ತಿಗಳು ಕೈಯಾಡಿಸುತ್ತಿವೆ ಮತ್ತು ಇಂತಹ ಸಂಬಂಧಗಳು ರಾಜಕೀಯ ಪರಿಣಾಮವನ್ನು ಬೀರುತ್ತದೆ” ಎಂದು ಬಿಜೆಪಿ ಪಕ್ಷದ ಗಂಭೀರ ಆರೋಪವಾಗಿದೆ.
ಇದನ್ನೂ ಓದಿ: Syria Unrest: ಮಧ್ಯ ಪ್ರಾಚ್ಯದಲ್ಲಿ ರಾಜಕೀಯ ಲೆಕ್ಕಾಚಾರ ಬದಲಿಸಲಿದೆಯೇ ಸಿರಿಯಾದ ಬಷರ್ ಅಲ್-ಅಸ್ಸಾದ್ ಆಡಳಿತ ಪತನ?
ಇಷ್ಟು ಮಾತ್ರವಲ್ಲದೇ, ರಾಜೀವ ಗಾಂಧಿ ಫೌಂಡೇಶನ್ ನಲ್ಲಿ ಸೋನಿಯಾ ಗಾಂಧಿ ಅವರ ಅಧ್ಯಕ್ಷತೆಯು ಜಾರ್ಜ್ ಸಾರಸ್ ಫೌಂಡೇಶನ್ ಜೊತೆಗಿನ ಭಾಗೀದಾರಿಕೆ ಮೂಲಕ ಹೊರಬಂದಿದ್ದು, “ಇದು ಭಾರತೀಯ ಸಂಸ್ಥೆಗಳಿಗೆ ವಿದೇಶಿ ಹಣಕಾಸು ನೆರವಿನ ಸ್ಪಷ್ಟ ತೋರಿಕೆಯಾಗಿದೆ’ ಎಂದೂ ಕೇಸರಿ ಪಕ್ಷದ ವಾದವಾಗಿದೆ.
‘ಅದಾನಿ ಬಗ್ಗೆ ರಾಹುಲ್ ಗಾಂಧಿ ನಡೆಸಿದ್ದ ಪತ್ರಿಕಾಗೋಷ್ಠಿಯನ್ನು ಜಾರ್ಜ್ ಸಾರಸ್ ಹಣಕಾಸು ನೆರವು ನೀಡುತ್ತಿರುವ ಒಸಿಸಿಆರ್.ಪಿ. ನೇರ ಪ್ರಸಾರ ಮಾಡಿತ್ತು. ಇಲ್ಲಿ ರಾಹುಲ್ ಗಾಂಧಿ ಅವರು ಅದಾನಿಯನ್ನು ಟಿಕೆಯ ಒಂದು ಮೂಲವಾಗಿ ಬಳಸಿಕೊಂಡಿದ್ದರು. ಇದು ವಿದೇಶಿ ಶಕ್ತಿಗಳೊಂದಿಗೆ ಇವರ ನೇರ ಭಾಗೀದಾರಿಕೆ ಮತ್ತು ಆ ಮೂಲಕ ಭಾರತದ ಆರ್ಥಿಕತೆಯನ್ನು ಹಳಿ ತಪ್ಪಿಸುವ ಷಡ್ಯಂತ್ರದ ಭಾಗವಾಗಿ ಇದು ಕಾಣಿಸುತ್ತಿದೆ. ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಸಾರ್ವಜನಿಕವಾಗಿಯೇ ಜಾರ್ಜ್ ಸಾರಸ್ ಅನ್ನು ‘ಹಳೆಯ ಗೆಳೆಯ’ ಎಂದು ಕೊಂಡಾಡಿದ್ದಾರೆ. ಇದೆಲ್ಲವೂ ಸರಿಯಾದ ಕ್ರಮಗಳಲ್ಲಿ’ ಎಂದು ಬಿಜೆಪಿ ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧ ಹರಿಹಾಯ್ದಿದೆ.
ಭಾರತದ ಇಮೇಜನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹಾಳುಮಾಡಲು ಒಸಿಸಿಆರ್.ಪಿ ಮತ್ತು ರಾಹುಲ್ ಗಾಂಧಿ ಜೊತೆ ಅಮೆರಿಕಾದ ‘ಡೀಪ್ ಸ್ಟೇಟ್’ ಭಾಗೀದಾರಿಕೆ ಮಾಡಿಕೊಂಡಿದೆ ಎಂದು ಬಿಜೆಪಿ ಗಂಬೀರವಾದ ಆರೋಪವನ್ನು ಮಾಡಿದ ಬಳಿಕ ಇದೀಗ ಸೋನಿಯಾ ಗಾಂಧಿ ಬಗ್ಗೆ ಬಿಜೆಪಿ ಪಕ್ಷ ಈ ಹೊಸ ಆರೋಪವನ್ನು ಮಾಡಿದೆ.