ಡಮಾಸ್ಕಸ್: ಸಿರಿಯಾದಲ್ಲಿ (Siriya Conflict) ಪರಿಸ್ಥಿತಿ ದಿನೇ ದಿನೇ ಬಿಗಡಾಯಿಸುತ್ತಿದ್ದು, ಬಂಡುಕೋರರ ಆಡಳಿತ ಆರಂಭವಾಗುತ್ತಿದ್ದಂತೆ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ (Bashar al-Assad) ದೇಶದಿಂದ ಪಲಾಯನ ಮಾಡಿದ್ದಾರೆ. ಮಂಗಳವಾರ ಭಾರತದ ವಿದೇಶಾಂಗ ಇಲಾಖೆ ಸಿರಿಯಾದಲ್ಲಿ ಸಿಲುಕಿದ್ದ ಭಾರತೀಯರನ್ನು ರಕ್ಷಣೆ ಮಾಡುವುದಾಗಿ ತಿಳಿಸಿತ್ತು. ಅದರಂತೆ ಭಾರತೀಯ ಪ್ರಜೆಗಳನ್ನು ಸುರಕ್ಷಿತವಾಗಿ ಲೆಬನಾನ್‌ಗೆ ಸ್ಥಳಾಂತರಿಸಲಾಗಿದೆ. ಇದೀಗ 75 ಜನರ ಮೊದಲ ಗುಂಪು ಸುರಕ್ಷಿತವಾಗಿ ಭಾರತಕ್ಕೆ ತಲುಪಿದ್ದಾರೆ. ಬಂಡುಕೋರರ ವಶವಾದ ಸಿರಿಯಾದಲ್ಲಿನ ಪರಿಸ್ಥಿತಿಯ ಬಗ್ಗೆ ಅವರು ಮಾತನಾಡಿದ್ದಾರೆ.
ಈ ಬಗ್ಗೆ ಸಿರಿಯಾದಿಂದ ಭಾರತಕ್ಕೆ ಬಂದ ಗಾಜಿಯಾಬಾದ್‌ನ ರವಿಭೂಷಣ್ ಎನ್ನುವವರು ಪ್ರತಿಕ್ರಿಯೆ ನೀಡಿದ್ದು, ಸಿರಿಯಾದಲ್ಲಿ ಭೀಕರತೆಯನ್ನು ಬಿಚ್ಚಿಟ್ಟಿದ್ದಾರೆ. ʼʼಸಿರಿಯಾ ಸಂಪೂರ್ಣವಾಗಿ ಬಂಡುಕೋರರ ವಶವಾಗಿದ್ದು, ಜನರು ಮನೆಯಿಂದ ಹೊರ ಬರಲು ಭಯಭೀತರಾಗಿದ್ದಾರೆ. ಕಂಡ ಕಂಡಲ್ಲಿ ಬಾಂಬ್‌ಗಳನ್ನು ಸ್ಫೋಟಿಸಲಾಗುತ್ತಿದೆ. ರಸ್ತೆಯಲ್ಲಿ ಗುಂಡುಗಳನ್ನು ಹಾರಿಸಲಾಗುತ್ತಿದೆ. ಅವರು ವಿಮಾನ ನಿಲ್ದಾಣವನ್ನೂ ಸಂಪೂರ್ಣವಾಗಿ ವಶಪಡಿಸಿಕೊಂಡಿದ್ದಾರೆ. ಹೋಟೆಲ್, ಬ್ಯಾಂಕ್ , ವಾಹನಗಳು ಸೇರಿದಂತೆ ಎಲ್ಲ ಕಡೆ ದಾಳಿ ಮಾಡಿ ಹಾನಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಸಿರಿಯಾ ಪರಿಸ್ಥಿತಿ ಇನ್ನೂ ಭೀಕರವಾಗಲಿದೆʼʼ ಎಂದು ವಿವರಿಸಿದ್ದಾರೆ.
ಭಾರತ ಸರ್ಕಾರಕ್ಕೆ ಧನ್ಯವಾದ ತಿಳಿಸಿದ ಅವರು ʼʼನಮ್ಮದು ಸಿರಿಯಾದಿಂದ ರಕ್ಷಿಸಿದ ಮೊದಲ ತಂಡವಾಗಿದೆ. ಭಾರತ ಸರ್ಕಾರ ಈಗಾಗಲೇ ಅಲ್ಲಿ ಸಿಲುಕಿದ್ದ ನಮ್ಮ ನಾಗರಿಕರ ರಕ್ಷಣೆಗಾಗಿ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಯಾರಾದರೂ ಆಹಾರ ಇಲ್ಲದೆ ಅಥವಾ ಯಾವುದಾದರೂ ಸಮಸ್ಯೆಯನ್ನು ಎದುರಿಸಿದರೆ ಅವರ ರಕ್ಷಣೆಗೆ ಸರ್ಕಾರ ಬದ್ದವಾಗಿದೆ. ನಾವು ನಮ್ಮ ಸರ್ಕಾರಕ್ಕೆ ಆಭಾರಿಯಾಗಿದ್ದೇವೆʼʼ ಎಂದು ಹೇಳಿದ್ದಾರೆ.
#WATCH | Delhi: Ravi Bhushan, an Indian national evacuated from war-torn Syria, shares his experience
— ANI (@ANI) December 12, 2024
He says, "I had some business meetings there, so I went there for a week. After two days, there was sudden unrest. In the markets, on the streets, locals were roaming around… pic.twitter.com/sG7OcX4pxx
ನಂತರ ಡಮಾಸ್ಕಸ್‌ನ ಪರಿಸ್ಥಿತಿ ಬಗ್ಗೆ ತಿಳಿಸಿದ ಅವರು, ʼʼಬೇರೆ ದೇಶಗಳ ಜನರು ಹೇಗೆ ನರಳುತ್ತಿದ್ದಾರೆಂದು ನಾವು ನೋಡಿದ್ದೇವೆ. ಸಣ್ಣ ಮಕ್ಕಳು ಮತ್ತು ಮಹಿಳೆಯರು 4-5 ಡಿಗ್ರಿ ತಾಪಮಾನದಲ್ಲಿ 10-12 ಗಂಟೆಗಳ ಕಾಲ ಹೊರಗೆ ಕುಳಿತುಕೊಂಡಿದ್ದಾರೆ. ಇದು ನಿಜವಾಗಿಯೂ ಭಯಾನಕವಾಗಿದೆ. ಆದರೆ ಭಾರತ ಸರ್ಕಾರದಿಂದಾಗಿ, ನಾವು ಅಂತಹ ಯಾವುದೇ ಸಮಸ್ಯೆಯನ್ನು ಎದುರಿಸಲಿಲ್ಲʼʼ ಎಂದು ಹೇಳಿದ್ದಾರೆ.
ಸದ್ಯ ಸಿರಿಯಾದಲ್ಲಿ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದ್ದು, ಹಯಾತ್ ತಹ್ರೀರ್ ಅಲ್-ಶಾಮ್ ಗುಂಪಿನ ನೇತೃತ್ವದ ಬಂಡಾಯ ಪಡೆಗಳು 12 ದಿನಗಳ ಆಕ್ರಮಣದ ನಂತರ ರಾಜಧಾನಿ ಡಮಾಸ್ಕಸ್ ಅನ್ನು ಭಾನುವಾರ ವಶಪಡಿಸಿಕೊಂಡಿವೆ. ಬಂಡುಕೋರರು ಡಮಾಸ್ಕಸ್‌ಗೆ ವಶ ಮಾಡಿಕೊಂಡ ನಂತರ ಅಧ್ಯಕ್ಷ ಅಸ್ಸಾದ್ ರಷ್ಯಾಗೆ ಪಲಾಯನ ಮಾಡಿದ್ದಾರೆ. ಇತ್ತ ಬಂಡುಕೋರರು ಅಧ್ಯಕ್ಷರ ಮನೆ ಮೇಲೆ ದಾಳಿ ನಡೆಸಿ ಹಾನಿ ನಡೆಸಿದ್ದಾರೆ.
ಟರ್ಕಿ ಬೆಂಬಲಿತ ಪಡೆಗಳ ಪ್ರಾಬಲ್ಯಕ್ಕೆ ಬೆದರಿರುವ ಸಿರಿಯಾ ಪ್ರಧಾನಿ ಮೊಹಮ್ಮದ್ ಘಾಜಿ ಅಲ್ ಜಲಾಲಿ ಅವರು ಅಧಿಕಾರ ಹಸ್ತಾಂತರಕ್ಕೆ ಸರ್ಕಾರ ಸಿದ್ಧವಿದೆ ಎಂದು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ : Syria Crisis: ಸಿರಿಯಾ ರಾಜಧಾನಿ ಡಮಾಸ್ಕಸ್ ಬಂಡುಕೋರರ ವಶಕ್ಕೆ; ಅಧ್ಯಕ್ಷ ಬಷರ್ ಅಲ್-ಅಸ್ಸಾದ್ ಪಲಾಯನ