Wednesday, 14th May 2025

ಸಬ್ ಇನ್ಸ್‌ಪೆಕ್ಟರ್‌’ನನ್ನೇ ಕೊಂದ ಸಹೋದ್ಯೋಗಿ !

ಹೈದರಾಬಾದ್: ಛತ್ತೀಸ್‌ಗಢದ ಗಡಿಗೆ ಹೊಂದಿಕೊಂಡಿರುವ ತೆಲಂಗಾಣದ ಮುಲಗು ಜಿಲ್ಲೆಯ ವೆಂಕಟಾಪುರ ಎಂಬಲ್ಲಿ ಸಿಆರ್‌ಪಿಎಫ್‌ ಸಬ್ ಇನ್ಸ್‌ಪೆಕ್ಟರ್‌ ಒಬ್ಬರನ್ನು ಸಹೋದ್ಯೋಗಿಯೇ ಕರ್ತವ್ಯ ಹಂಚಿಕೆ ವಿಚಾರವಾಗಿ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.

ಉಮೇಶ್ ಚಂದ್ರ (45) ಮೃತ ಸಬ್ ಇನ್ಸ್‌ಪೆಕ್ಟರ್‌. ಸಿಆರ್‌ಪಿಎಫ್‌ ಹೆಡ್‌ಕಾನ್‌ಸ್ಟೆಬಲ್ ಸ್ಟಿಫನ್ ಎಂಬವರು ಕರ್ತವ್ಯ ಹಂಚಿಕೆ ವಿಷಯವಾಗಿ ಉಮೇಶ್ ಚಂದ್ರ ಅವರ ಜೊತೆ ಜಗಳವಾಡಿ ಸ್ವಯಂಚಾಲಿತ ಬಂದೂಕಿನಿಂದ ಉಮೇಶ್‌ ಚಂದ್ರ ಅವರ ಹೊಟ್ಟೆ ಹಾಗೂ ತಲೆಗೆ ಗುಂಡಿಕ್ಕಿದ್ದಾರೆ. ಇದರಿಂದ ಉಮೇಶ್ ಚಂದ್ರ ಅವರು ಸ್ಥಳದಲ್ಲೇ ಅಸುನೀಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಟಿಫನ್ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದ. ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಅವರ ಪರಿಸ್ಥಿತಿ ಗಂಭೀರ ವಾಗಿದೆ. ಘಟನೆ ಕುರಿತು ತನಿಖೆ ಕೈಗೆತ್ತಿಕೊಳ್ಳ ಲಾಗಿದೆ ಎಂದು ಮುಲಗು ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಉಮೇಶ್‌ ಚಂದ್ರ ಬಿಹಾರದವರಾಗಿದ್ದು, ಸ್ಟಿಫನ್ ತಮಿಳುನಾಡು ಮೂಲದವರಾಗಿದ್ದರು. ಸಿಆರ್‌ಪಿಎಫ್‌ನ 39 ನೇ ಬೆಟಾಲಿಯನ್‌ನಲ್ಲಿ ಈ ಇಬ್ಬರೂ ಕಾರ್ಯನಿರ್ವಹಿಸುತ್ತಿದ್ದರು.