Monday, 12th May 2025

ಮಧ್ಯಪ್ರದೇಶದ ಉದ್ಯಮಿ ಶಂಕರ್ ರೈ, ಸಹೋದರರಿಗೆ ಐಟಿ ಶಾಕ್: 8 ಕೋಟಿ ರೂ. ವಶ

ದಾಮೋಹ್: ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಉದ್ಯಮಿ ಶಂಕರ್ ರೈ ಮತ್ತು ಅವರ ಸಹೋದರರ ನಿವಾಸಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿ ಗಳು ದಾಳಿ ನಡೆಸಿದ್ದು, 8 ಕೋಟಿ ರೂಪಾಯಿ ನಗದು ಮತ್ತು ಮೂರು ಕಿಲೋಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.

ಗುರುವಾರ ಆರಂಭವಾದ ಐಟಿ ದಾಳಿ, ಇನ್ನೂ ಮುಂದುವರಿದಿವೆ ಎಂದು ಆದಾಯ ತೆರಿಗೆ(ತನಿಖೆ) ಜಬಲ್‌ಪುರ ವೃತ್ತದ ಜಂಟಿ ಆಯುಕ್ತ ತಿಳಿಸಿದ್ದಾರೆ.

ಶೋಧದ ವೇಳೆ 8 ಕೋಟಿ ರೂಪಾಯಿ ನಗದು ಪತ್ತೆಯಾಗಿದೆ. ನೀರಿನ ಪಾತ್ರೆಯಲ್ಲಿ ಬಚ್ಚಿಟ್ಟಿದ್ದ 1 ಕೋಟಿ ರೂಪಾಯಿ ಸಹ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೂರು ಕೆಜಿ ತೂಕದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ರಾಯ್ ಸಹೋದರರು ಮದ್ಯದಂಗಡಿಗಳ ಗುತ್ತಿಗೆ ಪಡೆದು ನಡೆಸುತ್ತಿದ್ದರು ಮತ್ತು ತಮ್ಮ ಸಿಬ್ಬಂದಿಯ ಹೆಸರಿನಲ್ಲಿ ಐಷಾರಾಮಿ ಬಸ್‌ಗಳನ್ನು ಓಡಿಸುತ್ತಿದ್ದರು ಎಂಬುದು ದಾಳಿ ವೇಳೆ ತಿಳಿದು ಬಂದಿದೆ.

ಇಂದೋರ್, ಭೋಪಾಲ್, ಜಬಲ್ಪುರ್ ಮತ್ತು ಗ್ವಾಲಿಯರ್‌ನ ಐಟಿ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಸೇರಿದಂತೆ ಸುಮಾರು 200 ಸಿಬ್ಬಂದಿಗಳು ಏಕಕಾ ಲಕ್ಕೆ ಉದ್ಯಮಿ ಮತ್ತು ಅವರ ಸಹೋದರರಾದ ಕಮಲ್ ರೈ, ರಾಜು ರೈ ಹಾಗೂ ಸಂಜಯ್ ರೈ ಅವರ ವಿವಿಧ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.