Wednesday, 14th May 2025

Shani Shingnapur: ಈ ಹಳ್ಳಿಯಲ್ಲಿ ಕಳ್ಳತನದ ಭಯವಿಲ್ಲ; ಮನೆ, ಕಚೇರಿ, ದೇವಾಲಯಕ್ಕೆ ಬಾಗಿಲುಗಳೇ ಇಲ್ಲ

Shani Shingnapur

ಹಳ್ಳಿಯೊಂದರಲ್ಲಿ (village) ಹಲವಾರು ಮನೆಗಳಿದ್ದರೂ ಯಾವ ಮನೆಗಳಿಗೂ ಬಾಗಿಲು ಇಲ್ಲ. ಯಾಕೆಂದರೆ ಇಲ್ಲಿ ವಾಸಿಸುವವರಿಗೆ ಕಳ್ಳತನದ (theft) ಭಯವೇ ಇಲ್ಲ. ಸರಿಸುಮಾರು 400 ವರ್ಷಗಳಿಂದ ಇಲ್ಲಿ ಯಾವುದೇ ರೀತಿಯ ಕಳ್ಳತನ ಪ್ರಕರಣಗಳು ನಡೆದಿಲ್ಲ. ಈ ಹಳ್ಳಿ ಇರುವುದು ನಮ್ಮ ದೇಶದಲ್ಲೇ.

ಮಹಾರಾಷ್ಟ್ರದ (Maharashtra) ಅಹಮದ್‌ನಗರ (Ahmednagar) ಜಿಲ್ಲೆಯಲ್ಲಿರುವ ಶನಿ ಶಿಂಗಣಾಪುರ (Shani Shingnapur) ಎಂಬ ಹಳ್ಳಿಯ ಮನೆಗಳಿಗೆ ಬಾಗಿಲುಗಳೇ ಇಲ್ಲ. ಯಾಕೆಂದರೆ ಇದುವರೆಗೆ ಈ ಹಳ್ಳಿಯಲ್ಲಿ ಕಳ್ಳತನ ಪ್ರಕರಣಗಳು ನಡೆದಿಲ್ಲ.

ಹಳ್ಳಿಯ ಜನಪದದಲ್ಲಿ ಬರುವ ಕಥೆಯ ಪ್ರಕಾರ, ಸುಮಾರು 400 ವರ್ಷಗಳ ಹಿಂದೆ ಪನಸನಾಳದ ನದಿಯ ದಡದಲ್ಲಿ ಭಾರೀ ಕಪ್ಪು ಬಂಡೆಯೊಂದು ಉರುಳಿ ಬಂದಿತ್ತು. ಅದನ್ನು ಕೆತ್ತಲು ಗ್ರಾಮಸ್ಥರು ಮುಂದಾದರು. ಆದರೆ ಕುರುಬನೊಬ್ಬ ಬಂಡೆಯಿಂದ ರಕ್ತ ಬರುವುದನ್ನು ನೋಡಿದ. ಆ ದಿನ ರಾತ್ರಿ ಶನಿ ದೇವರು ಅವನ ಕನಸಿನಲ್ಲಿ ಬಂದು ಇದು ನನ್ನ ಕಲ್ಲು. ಪ್ರತಿ ಮನೆಯ ಭದ್ರತೆಯನ್ನು ನೋಡಿಕೊಳ್ಳುವುದಾಗಿ ಭರವಸೆ ನೀಡಿ ಹಳ್ಳಿಯನ್ನು ಕಾವಲು ಕಾಯಲು ತೆರೆದ ಜಾಗದಲ್ಲಿ ಈ ಕಲ್ಲನ್ನು ಇರಿಸಲು ಕೇಳಿಕೊಂಡ ಎನ್ನಲಾಗಿದೆ.

ಆ ಬಳಿಕ ಶನಿ ದೇವರ ಕಲ್ಲನ್ನು ಬಯಲು ಆಲಯದಲ್ಲಿ ಇಡಲಾಗಿದೆ. ಹೀಗಾಗಿ ಇಲ್ಲಿರುವ ಮನೆಗಳಿಗೂ ಬಾಗಿಲುಗಳನ್ನು ಇಡುತ್ತಿಲ್ಲ. ಇದು ಸಂಪ್ರದಾಯವಾಗಿ ಬೆಳೆದು ಬಂದಿದೆ. ಹಳ್ಳಿಗೆ ಬರುವ ಸಂದರ್ಶಕರು ಶನಿ ದೇವರ ಕಲ್ಲು ಇಟ್ಟಿರುವ ಪ್ರದೇಶಕ್ಕೆ ಬಂದು ದೇವರ ದರ್ಶನ ಪಡೆದು ಹೋಗುತ್ತಾರೆ. ಪ್ರತಿ ವರ್ಷ ಸುಮಾರು 40,000 ಭಕ್ತರು ಶನಿ ದೇವರ ಆಲಯಕ್ಕೆ ಭೇಟಿ ನೀಡುತ್ತಾರೆ.

ಇಲ್ಲಿ ವಾಸಿಸುವ ಜನರ ಯಾವುದೇ ಮನೆಗಳಿಗೂ ಬಾಗಿಲು ಇಲ್ಲ. ದೇವರ ಆಲಯಕ್ಕೂ ಬಾಗಿಲನ್ನು ನಿರ್ಮಿಸಿಲ್ಲ. ಜನರು ಆತಂಕದಿಂದ ಮುಕ್ತರಾಗಿಯಿದ್ದರೆ. ಯಾವುದೇ ಕಳ್ಳತನದ ಪ್ರಕರಣಗಳೂ ನಡೆದಿಲ್ಲ. ಹೀಗಾಗಿ ಶನಿ ಶಿಂಗ್ನಾಪುರ ದೇಶಾದ್ಯಂತ ಇರುವ ಭಕ್ತರನ್ನು ತನ್ನತ್ತ ಸೆಳೆಯುತ್ತದೆ. ಭಕ್ತರ ಕೊಡುಗೆಯಿಂದಾಗಿ ದೇವಾಲಯವೂ ಸಾಕಷ್ಟು ಅಭಿವೃದ್ದಿ ಹೊಂದಿದೆ.

Shani Shingnapur

ಮನೆಗಳು ಮಾತ್ರವಲ್ಲ ಗ್ರಾಮದಲ್ಲಿರುವ ಅಂಗಡಿಗಳು, ಅಂಚೆ ಕಚೇರಿಗಳಿಗೂ ಬಾಗಿಲುಗಳಿಲ್ಲ. 2011ರಲ್ಲಿ ಇಲ್ಲಿ ಸ್ಥಾಪನೆಯಾದ ಯುಸಿಒ ಬ್ಯಾಂಕ್ ಗೆ ಕೂಡ ಬೀಗವಿಲ್ಲ. ಇಲ್ಲಿಯ ಜನರ ಭಾವನೆಗಳನ್ನು ಗೌರವಿಸುವಾಗ ತನ್ನ ಸುರಕ್ಷತೆಯನ್ನು ಕಾಪಾಡಿಕೊಳ್ಳುವ ಸಲುವಾಗಿ ಬ್ಯಾಂಕ್ ಗಾಜಿನ ಪ್ರವೇಶದ್ವಾರವನ್ನು ಇರಿಸಿದೆ. ರಿಮೋಟ್ ನಿಯಂತ್ರಿತ ವಿದ್ಯುತ್ಕಾಂತೀಯ ಲಾಕ್ ಅನ್ನು ಹೊಂದಿದೆ.

ಈ ಗ್ರಾಮದಲ್ಲಿ ಇದುವರೆಗೆ ಯಾವುದೇ ಅಪರಾಧ ಪ್ರಕರಣಗಳೂ ನಡೆದಿಲ್ಲವಾದರೂ ಬಾಗಿಲಿಲ್ಲದ ಪೊಲೀಸ್ ಠಾಣೆಯನ್ನು ತೆರೆಯಲಾಗಿದೆ.

Rooftop Solar Units :ಸೌರ ಶಕ್ತಿ ಉತ್ಪಾದನೆಯಲ್ಲಿ ಹೊಸ ಮೈಲುಗಲ್ಲು; ಉಚಿತ ವಿದ್ಯುತ್ ಯೋಜನೆಯಡಿ 400,000 ಸೌರ ಘಟಕಗಳ ಸ್ಥಾಪನೆ

ತಲುಪುವುದು ಹೇಗೆ ?

ಶನಿ ಶಿಂಗ್ನಾಪುರಕ್ಕೆ ಭೇಟಿ ನೀಡುವ ಇಚ್ಛೆ ಇದ್ದರೆ ರಸ್ತೆ, ವಿಮಾನ ಅಥವಾ ರೈಲು ಮೂಲಕ ಅಲ್ಲಿಗೆ ತಲುಪಬಹುದು. ಔರಂಗಾಬಾದ್-ಅಹಮದ್‌ನಗರ ರಸ್ತೆಯ ಮೂಲಕ ಸುಲಭವಾಗಿ ಹಳ್ಳಿಯನ್ನು ತಲುಪಬಹುದು. ಶನಿ ಶಿಂಗ್ನಾಪುರಕ್ಕೆ ಹತ್ತಿರದ ರೈಲು ನಿಲ್ದಾಣಗಳು ರಾಹುರಿ 32 ಕಿಲೋ ಮೀಟರ್ ದೂರದಲ್ಲಿದ್ದು, ಅಹಮದ್ ನಗರ 35 ಕಿಲೋ ಮೀಟರ್ ದೂರದಲ್ಲಿದೆ. ಹತ್ತಿರದಲ್ಲಿರುವ ವಿಮಾನ ನಿಲ್ದಾಣವೆಂದರೆ ಔರಂಗಾಬಾದ್ ವಿಮಾನ ನಿಲ್ದಾಣ. ಸುಮಾರು 90 ಕಿಲೋ ಮೀಟರ್ ದೂರದಲ್ಲಿದೆ.