Monday, 12th May 2025

ಶಾ ಪಶ್ಚಿಮ ಬಂಗಾಳ ಪ್ರವಾಸ, ಗಂಗೂಲಿ ಭೇಟಿ ಶೀಘ್ರ

ಕೋಲ್ಕತ್ತ: ಕೇಂದ್ರ ಗೃಹ ಸಚಿವ, ಬಿಜೆಪಿ ನಾಯಕ ಅಮಿತ್‌ ಶಾ ಅವರು ಪಶ್ಚಿಮ ಬಂಗಾಳಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ.

ದೆಹಲಿಗೆ ಹಿಂದಿರುಗುವ ಮೊದಲು ಬಿಸಿಸಿಐ ಅಧ್ಯಕ್ಷ, ಭಾರತೀಯ ಕ್ರಿಕೆಟ್‌ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ ಅವರನ್ನು ಭೇಟಿಯಾಗ ಲಿದ್ದಾರೆ.

ಶುಕ್ರವಾರ ಸಂಜೆ ವಿಕ್ಟೋರಿಯಾ ಸ್ಮಾರಕದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ದಲ್ಲಿ ಸಚಿವರು ಪಾಲ್ಗೊಳ್ಳಲಿದ್ದಾರೆ. ಅಲ್ಲಿಂದ ಬೆಹಾಲಾ ದಲ್ಲಿರುವ ಗಂಗೂಲಿ ಅವರ ನಿವಾಸಕ್ಕೆ ತೆರಳಿ ಅಲ್ಲಿ ಭೋಜನ ಸ್ವೀಕರಿಸುವ ಸಾಧ್ಯತೆಗಳಿವೆ. ಜೊತೆಗೆ ರಾಜ್ಯಸಭೆಯ ಬಿಜೆಪಿ ಸದಸ್ಯ ಸ್ವಪನ್ ದಾಸ್‌ಗುಪ್ತಾ ಮತ್ತು ಪಶ್ಚಿಮ ಬಂಗಾಳ ವಿಧಾನಸಭೆಯ ವಿಪಕ್ಷದ ನಾಯಕ ಸುವೇಂದು ಅಧಿಕಾರಿ ಇರಲಿದ್ದಾರೆ ಎಂದು ಬಿಜೆಪಿ ನಾಯಕರೊಬ್ಬರು ಮಾಹಿತಿ ನೀಡಿದ್ದಾರೆ.

ಗಂಗೂಲಿ ಅವರ ಪತ್ನಿ,  ಒಡಿಸ್ಸಿ ನೃತ್ಯಗಾರ್ತಿ ಡೋನಾ ಗಂಗೂಲಿ ಶುಕ್ರವಾರ ವಿಕ್ಟೋರಿಯಾ ಸ್ಮಾರಕದಲ್ಲಿ ಪ್ರದರ್ಶನ ನೀಡಲಿದ್ದಾರೆ.

ರಾಜ್ಯಕ್ಕೆ ಭೇಟಿ ಕೊಟ್ಟಾಗಲೆಲ್ಲಾ ಶಾ ಅವರು ಒಂದಿಬ್ಬರು ಖ್ಯಾತನಾಮರನ್ನು ಭೇಟಿಯಾಗಿಯೇ ದೆಹಲಿಗೆ ಹಿಂದಿರುಗುತ್ತಾರೆ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದರು. ಅಮಿತ್‌ ಶಾ ಅವರ ಪುತ್ರ ಜಯ್ ಶಾ ಪ್ರಸ್ತುತ ಬಿಸಿಸಿಐ ಕಾರ್ಯದರ್ಶಿಯಾಗಿದ್ದಾರೆ.

2021ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೂ ಮುನ್ನ ಗಂಗೂಲಿ ಬಿಜೆಪಿ ಸೇರಬಹುದು ಎಂಬ ವದಂತಿ ಹಬ್ಬಿತ್ತು. 2021ರ ವಿಧಾನಸಭೆ ಚುನಾವಣೆಗೂ ಮುನ್ನ ಶಾ ಕೋಲ್ಕತ್ತಾದಲ್ಲಿದ್ದಾಗ ಗಂಗೂಲಿ ಅವರನ್ನು ಭೇಟಿಯಾಗುವ ಇಚ್ಛೆ ವ್ಯಕ್ತಪಡಿಸಿದ್ದರು.