Sunday, 11th May 2025

ಅಮಿತ್ ಶಾ ಭದ್ರತಾ ಲೋಪ: ಅಧಿಕಾರಿಯಂತೆ ನಟಿಸಿದವನ ಬಂಧನ

ಮುಂಬೈ: ಮುಂಬೈಗೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭದ್ರತೆ ಯಲ್ಲಿ ಗೃಹ ಸಚಿವಾಲಯದ ಅಧಿಕಾರಿ ಯಂತೆ ನಟಿಸಿದ ವ್ಯಕ್ತಿಯೊಬ್ಬ ಶಾ ಅವರ ಹತ್ತಿರ ಬಂದು ನಿರ್ಬಂಧಿತ ಪ್ರದೇಶಗಳಲ್ಲಿ ಮುಕ್ತವಾಗಿ ಸುತ್ತಾಡಿದ ನಂತರ ಸಿಕ್ಕಿಬಿದ್ದಿದ್ದಾನೆ.

ಬಂಧಿತ ವ್ಯಕ್ತಿಯನ್ನು ಆಂಧ್ರ ಪ್ರದೇಶದ ಸಂಸದರೊಬ್ಬರ ಆಪ್ತ ಕಾರ್ಯದರ್ಶಿ ಹೇಮಂತ್ ಪವಾರ್ ಎಂದು ಹೇಳಲಾಗುತ್ತಿದೆ.

ಭದ್ರತಾ ವ್ಯವಸ್ಥೆಗಳನ್ನು ನೋಡಿಕೊಳ್ಳುವ ಅಧಿಕಾರಿಯಂತೆ ಪೋಸ್ ನೀಡಿದ್ದರು. ಅಮಿತ್ ಶಾ ಭಾಗವಹಿಸಿದ ಎರಡು ಕಾರ್ಯಕ್ರಮಗಳಲ್ಲಿದ್ದರು ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹಾಗೂ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಮನೆಗಳ ಹೊರಗೂ ಕೂಡ ಕಾಣಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅನುಮಾನಗೊಂಡ ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಪವಾರ್ ಅವರನ್ನು ಪ್ರಶ್ನಿಸಿದ್ದಾರೆ. ಬಳಿಕ ಗೃಹ ಸಚಿವರ ಭದ್ರತಾ ತಂಡದ ಪಟ್ಟಿಯಲ್ಲಿ ಅವರ ಹೆಸರಿಲ್ಲ ಎಂಬುದು ಪೊಲೀಸರಿಗೂ ತಿಳಿದಿದೆ. ಕೂಡಲೇ ಪವಾರ್ ಅವರನ್ನು ಬಂಧಿಸಲಾಗಿದೆ. ಸದ್ಯ ಅವರನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.