Tuesday, 13th May 2025

ಪೊಲೀಸರು ವಶಪಡಿಸಿಕೊಂಡ 350 ವಾಹನ ಬೆಂಕಿಗೆ ಆಹುತಿ

ನವದೆಹಲಿ: ನೈಋತ್ಯ ದೆಹಲಿಯಲ್ಲಿ ಸಾಗರ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ವಶಪಡಿಸಿಕೊಂಡ ಸ್ಥಳದಲ್ಲಿ ಬೈಕ್‌ಗಳು ಮತ್ತು ಕಾರುಗಳು ಸೇರಿದಂತೆ 350 ಕ್ಕೂ ಹೆಚ್ಚು ವಾಹನಗಳು ಬೆಂಕಿಗೆ ಆಹುತಿಯಾಗಿವೆ.

ಸಾಗರ್‌ಪುರ ಪೊಲೀಸ್ ಠಾಣೆಯಲ್ಲಿ ವಶಪಡಿಸಿಕೊಂಡ ವಾಹನ ಮತ್ತು ಸರಕುಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ನೈಋತ್ಯ ಉಪ ಪೊಲೀಸ್ ಆಯುಕ್ತ ಗೌರವ್ ಶರ್ಮಾ ತಿಳಿಸಿದ್ದಾರೆ.

ನಿಲ್ಲಿಸಿದ್ದ ವಾಹನಗಳು ಬೆಂಕಿಗಾಹುತಿಯಾಗುತ್ತಿರುವುದನ್ನು ಗಮನಿಸಿದ ಕರ್ತವ್ಯನಿರತ ಅಧಿಕಾರಿ ಕೂಡಲೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದರು. ಹಲವು ಗಂಟೆಗಳ ಪ್ರಯತ್ನದ ಬಳಿಕ ಬೆಂಕಿ ನಂದಿಸಲಾಯಿತು. ಆದರೆ ಆ ವೇಳೆಗಾಗಲೇ 250 ದ್ವಿಚಕ್ರ ವಾಹನಗಳು ಹಾಗೂ 100 ಕಾರುಗಳು ಸುಟ್ಟು ಕರಕಲಾಗಿದ್ದವು ಎಂದು ಡಿಸಿಪಿ ಹೇಳಿದರು.

ಭಾನುವಾರ ಸುಟ್ಟು ಕರಕಲಾದ ಬಹುತೇಕ ವಾಹನಗಳು ಆಕಸ್ಮಿಕ ಆಸ್ತಿಗಳಾಗಿವೆ. ಫೋರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿ (ಎಫ್‌ಎಸ್‌ಎಲ್) ತಂಡವು ಸ್ಥಳಕ್ಕೆ ತೆರಳಿ ಇದಕ್ಕೆ ಕಾರಣವೇನು ಎಂಬುದನ್ನು ತಿಳಿಸಲು ಎಲ್ಲಾ ಮಾದರಿಗಳನ್ನು ಸಂಗ್ರಹಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.