Saturday, 10th May 2025

SBI Report: ಭಾರತದ ಗ್ರಾಮೀಣ ಬಡತನ ಪ್ರಮಾಣದಲ್ಲಿ ಭಾರೀ ಇಳಿಕೆ; ಎಸ್‌ಬಿಐ ವರದಿಯಲ್ಲೇನಿದೆ?

ನವದೆಹಲಿ: ಭಾರತದ ಗ್ರಾಮೀಣ ಬಡತನ (Rural Poverty) ಪ್ರಮಾಣವು ಭಾರೀ ಇಳಿಕೆ ಕಂಡಿದೆ. 2011-12ರಲ್ಲಿ 25.5% ಇದ್ದ ಗ್ರಾಮೀಣ ಬಡತನ ಪ್ರಮಾಣ 2023-24ರಲ್ಲಿ 4.86%ಕ್ಕೆ ಇಳಿಕೆಯಾಗಿದೆ. ಇದೇ ಸಂದರ್ಭದಲ್ಲಿ ನಗರ ಪ್ರದೇಶದ ಬಡತನ ಪ್ರಮಾಣವು 4.06%ದಿಂದ 4.09%ಕ್ಕೆ ಬಂದಿದೆ. ಈ ಮಾಹಿತಿಯು ಜ. 3ರಂದು ಬಿಡುಗೆಗೊಂಡ ಎಸ್.ಬಿ.ಐ. (SBI) ಸಂಶೋಧನಾ ವರದಿಯಲ್ಲಿದೆ (SBI Report).

‘ಸರಾಸರಿ ಮಟ್ಟದಲ್ಲಿ ಭಾರತದ ಬಡತನ ಮಟ್ಟವು 4%ದಿಂದ 4.5% ಪ್ರಮಾಣದಲ್ಲಿದೆ ಎಂದು ನಾವು ಅಂದುಕೊಳ್ಳಬಹುದು ಮತ್ತು ತೀವ್ರ ಬಡತನ ಪ್ರಮಾಣ ಕನಿಷ್ಠ ಮಟ್ಟದಲ್ಲಿದೆ ಎಂದು ನಂಬಲಾಗಿದೆ’ ಎಂಬುದಾಗಿ ಈ ವರದಿ ತಿಳಿಸಿದೆ.

ಕೇಂದ್ರ ಸರ್ಕಾರದ (Central Government) ವಿವಿಧ ಯೋಜನೆಗಳ ಯಶಸ್ವಿ ಜಾರಿಯ ಕಾರಣ, ದೇಶದಲ್ಲಿ ಬಡತನ ಪ್ರಮಾಣ ಇಳಿಕೆಯಾಗಿದೆ. ಅದರಲ್ಲೂ ಗ್ರಾಮೀಣ ಬಡತನದಲ್ಲಿ ಭಾರೀ ಇಳಿಕೆ ಕಂಡುಬಂದಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (State Bank of India) ಸಂಶೋಧನಾ ವರದಿ ತಿಳಿಸಿದೆ.

2011-12ರಲ್ಲಿ ಶೇ. 25.7ರಷ್ಟಿದ್ದ ಗ್ರಾಮೀಣ ಬಡತನ 2024ರ ಮಾರ್ಚ್ ವೇಳೆಗೆ ಕೇವಲ ಶೇ. 4.86ಕ್ಕೆ ಇಳಿದಿದೆ. ಹೀಗೆ ಬಡತನ ಪ್ರಮಾಣ ಶೇ. 5ಕ್ಕಿಂತ ಕೆಳಗೆ ಇಳಿದಿದ್ದು ಇದೇ ಮೊದಲು ಎಂದು ವರದಿ ಹೇಳಿದೆ. ಎಸ್‌ಬಿಐಯ ಬಳಕೆ ವೆಚ್ಚ ವರದಿ ಅನ್ವಯ, 2011-12ರಲ್ಲಿ ನಗರ ಪ್ರದೇಶಗಳ ಬಡತನ ಶೇ.13.7ರಷ್ಟು ಇದ್ದಿದ್ದು 2024ರ ಮಾರ್ಚ್ ವೇಳೆಗೆ ಶೇ.4.09ಕ್ಕೆ ಇಳಿಕೆಯಾಗಿದೆ. ಗ್ರಾಮೀಣ ಬಡತನ ಶೇ. 25.7ರಿಂದ ಶೇ.4.86ಕ್ಕೆ ಇಳಿದಿದೆ. ಒಟ್ಟಾರೆಯಾಗಿ ನೋಡಿದರೆ ಭಾರತದಲ್ಲಿ ಬಡತನ ಪ್ರಮಾಣ ಶೇ.4-4.5ರಷ್ಟಿದೆ ಎಂದು ವರದಿ ಹೇಳಿದೆ.

ಮೂಲ ಸೌಕರ್ಯಗಳ ಅಭಿವೃದ್ಧಿಯಿಂದ ಗ್ರಾಮೀಣ ಪ್ರದೇಶದಲ್ಲೂ ಸಂಚಾರ ವ್ಯವಸ್ಥೆ ಸುಧಾರಿಸುತ್ತಿದೆ. ಇದರಿಂದ ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವಿನ ಅಂತರ ಕಡಿಮೆಯಾಗುತ್ತಿದ್ದು, ಗ್ರಾಮೀಣ ಆದಾಯ ಅಸಮಾನತೆಯನ್ನೂ ಇದು ಇಳಿಸಲು ಕಾರಣವಾಗುತ್ತಿದೆ. ಇನ್ನು ಫಲಾನುಭವಿಗಳ ಖಾತೆಗೆ ನೇರ ಹಣ ಸಂದಾಯ (DBT) ಹೆಚ್ಚುತ್ತಿರುವುದು ಗ್ರಾಮೀಣ ಮತ್ತು ನಗರಗಳ ನಡುವಿನ ಅಂತರ ಕಡಿಮೆಯಾಗಲು ಮತ್ತೊಂದು ಪ್ರಮುಖ ಕಾರಣ. ಇದರಿಂದ ಸೋರಿಕೆ ಕಡಿಮೆಯಾಗಿ ಜನರ ಕೈಗೆ ನೇರವಾಗಿ ಹಣ ಸಿಗುತ್ತಿದ್ದು, ಅವರ ಕೊಂಡುಕೊಳ್ಳುವ ಸಾಮರ್ಥ್ಯ ಹೆಚ್ಚಾಗುತ್ತಿದೆ ಎಂದು ಸಂಶೋಧನಾ ವರದಿ ಹೇಳಿದೆ.

ಇದನ್ನೂ ಓದಿ: Delhi Polls: ದೆಹಲಿ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ; ಕೇಜ್ರಿವಾಲ್ ವಿರುದ್ಧ ಪರ್ವೇಶ್ ವರ್ಮಾ ಸ್ಪರ್ಧೆ

ಗ್ರಾಮೀಣ ಪ್ರದೇಶಗಳ ಬಡತನ ರೇಖೆಗೆ 1,632 ರೂ. ಮಾನದಂಡವಾಗಿ ಪರಿಗಣಿಸಿದ್ದರೆ, ನಗರ ಪ್ರದೇಶಗಳಲ್ಲಿ ಇದಕ್ಕೆ 1,944 ರೂ. ಮಾನದಂಡವಾಗಿ ಬಳಸಲಾಗಿತ್ತು.

ಬಡತನ ಇಳಿಕೆ ಹಾದಿ:

2011-12: 25.7ರಷ್ಟಿದ್ದ ಗ್ರಾಮೀಣ ಬಡತನ
2024ರ ಮಾರ್ಚ್ ವೇಳೆಗೆ ಶೇ. 4.86ಕ್ಕೆ ಇಳಿಕೆ
2011-12: ನಗರ ಪ್ರದೇಶ ಗಳ ಬಡತನ ಶೇ.13.7 ಇತ್ತು
2024ರ ಮಾರ್ಚ್ ವೇಳೆಗೆ ಶೇ.4.09ಕ್ಕೆ ಪ್ರಮಾಣ ಇಳಿಕೆ