Sunday, 11th May 2025

ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದದ ಬಗ್ಗೆ ಪ್ರಧಾನಿ ಸೈಲೆಂಟ್‌: ರಾವತ್ ಟೀಕೆ

ಮುಂಬೈ: ರಷ್ಯಾ-ಉಕ್ರೇನ್ ಯುದ್ಧದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸುತ್ತಿದ್ದು, ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದದ ಬಗ್ಗೆ ಕಣ್ಣು ಮುಚ್ಚಿ ಕುಳಿತಿದ್ದಾರೆ. ಇದು ಉತ್ತಮ ರಾಜಕಾರಣಿಯ ಲಕ್ಷಣವಲ್ಲ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಹೇಳಿದ್ದಾರೆ.
ರಾಜ್ಯಗಳ ಮರುಸಂಘಟನೆಯ ಸಮಯದಲ್ಲಿ ಅವರ ಇಚ್ಛೆಗೆ ವಿರುದ್ಧವಾಗಿ ಕರ್ನಾಟಕಕ್ಕೆ ಸೇರ್ಪಡೆಗೊಂಡ ಬೆಳಗಾವಿ ಮತ್ತು ಹತ್ತಿರದ ಪ್ರದೇಶಗಳಲ್ಲಿನ ಮರಾಠಿ ಮಾತನಾಡುವ ಜನಸಂಖ್ಯೆ ಯ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗದಿದ್ದರೆ, ಇನ್ನೆಲ್ಲಿ ನ್ಯಾಯ ಪಡೆಯ ಬೇಕು ಎಂದು ಪ್ರಶ್ನಿಸಿ ದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಮಸ್ಯೆ ಪರಿಹಾರಕ್ಕೆ ಮುಂದಾಗಿರುವುದು ಒಳ್ಳೆಯದು, ಆದರೆ ಕೇಂದ್ರ ಸರ್ಕಾರ ತಟಸ್ಥ ನಿಲುವು ತೆಗೆದುಕೊಳ್ಳುತ್ತದೆಯೇ ಎಂಬುದು ಪ್ರಶ್ನೆಯಾಗಿದೆ, ಗಡಿ ವಿವಾದಕ್ಕೆ ಸಂಸತ್ತು ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿ ದ್ದಾರೆ.
ಗಡಿ ವಿವಾದ ಕುರಿತು ಅಮಿತ್ ಶಾ ಕರೆದಿದ್ದ ಈ ವಿಷಯದ ಉಭಯ ರಾಜ್ಯಗಳ ಮುಖ್ಯ ಮಂತ್ರಿಗಳ ಸಭೆಯಲ್ಲಿ, ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ನಿರ್ಧರಿಸಲಾಗಿದೆ, ಇದು ಮಹಾರಾಷ್ಟ್ರದ ಪ್ರದೇಶಗಳ ಮೇಲೆ ಹಕ್ಕು ಸಾಧಿಸುವ ಬೊಮ್ಮಾಯಿ ಅವರ ಆಕ್ರಮಣಕಾರಿ ನಿಲುವನ್ನು ಎದುರಿಸಲು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ದುರ್ಬಲರಾಗಿದ್ದಾರೆ ಎಂಬುದನ್ನು ಸ್ಪಷ್ಟ ಪಡಿಸುತ್ತಿದೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕೆಲವು ಗ್ರಾಮಗಳು ಅಲ್ಲಿನ ಮೂಲ ಸೌಕರ್ಯಗಳ ಕೊರತೆಯಿಂದಾಗಿ ಕರ್ನಾಟಕದ ಜೊತೆ ಸೇರಲು ನಿರ್ಣಯವನ್ನು ಅಂಗೀಕರಿಸಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇತ್ತೀಚೆಗೆ ಹೇಳಿಕೆ ನೀಡಿದ್ದರು, ಈ ಹೇಳಿಕೆಯಿಂದಾಗಿ ಗಡಿ ವಿವಾದ ಮತ್ತೆ ಮರುಕಳಿಸಿದೆ.

Read E-Paper click here