Monday, 12th May 2025

Kolkata Doctor Murder Case: ಜೈಲಿನಲ್ಲಿಯೂ ಮೊಂಡಾಟ ಬಿಡದ ಹಂತಕ ಸಂಜಯ್‌ ರಾಯ್‌; ಮೊಟ್ಟೆಯ ಖಾದ್ಯಕ್ಕೆ ಬೇಡಿಕೆ

Kolkata Doctor Murder Case

ಕೋಲ್ಕತ್ತಾ: ಪಶ್ವಿಮ ಬಂಗಾಳದ ಕೋಲ್ಕತ್ತಾ ಆರ್‌.ಜಿ. ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಭೀಕರ ಕೊಲೆ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿದೆ (Kolkata Doctor Murder Case). ಈ ಸಂಬಂಧ ಮುಖ್ಯ ಆರೋಪಿ ಸಂಜಯ್‌ ರಾಯ್‌ (Sanjay Roy)ನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಜೈಲಿನಲ್ಲಿದ್ದರೂ ಆತ ತನ್ನ ದರ್ಪವನ್ನು ಬಿಟ್ಟಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದು, ತನಗೆ ನೀಡಲಾಗುವ ಊಟದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾನೆ ಎಂದು ವಿವರಿಸಿದ್ದಾರೆ. ರೊಟ್ಟಿ-ಪಲ್ಯದ ಬದಲು ಮೊಟ್ಟೆಯಿಂದ ಮಾಡಿದ ಖಾದ್ಯಕ್ಕೆ ಬೇಡಿಕೆ ಇಟ್ಟಿದ್ದಾನೆ.

ʼʼಕೈದಿಗಳಿಗೆ ಸಾಮಾನ್ಯವಾಗಿ ನೀಡಲಾಗುವ ರೊಟ್ಟಿ ಮತ್ತು ಪಲ್ಯವನ್ನೇ ಸಂಜಯ್‌ ರಾಯ್‌ಗೂ ಒದಗಿಸಲಾಗುತ್ತಿದ್ದು, ಇದರ ಬಗ್ಗೆ ಆತ ಅಸಮಾಧಾನ ವ್ಯಕ್ತಪಡಿಸಿದ್ದಾನೆ. ತನಗೆ ಮೊಟ್ಟೆಯ ಚೌಮೈನ್‌ (Egg chowmein) ನೀಡಬೇಕೆಂದು ಬೇಡಿಕೆ ಇಟ್ಟಿದ್ದಾನೆʼʼ ಎಂದು ಮೂಲಗಳು ತಿಳಿಸಿವೆ. ʼʼಜೈಲಿನ ನಿಯಮಗಳ ಪ್ರಕಾರ, ಎಲ್ಲ ಕೈದಿಗಳು ಒಂದೇ ರೀತಿಯ ಆಹಾರ ಸೇವಿಸಬೇಕು. ಆದ್ದರಿಂದ ಆತನ ಮನವಿಯನ್ನು ತಿರಸ್ಕರಿಸಲಾಗಿದೆ.  ರೊಟ್ಟಿ ಮತ್ತು ತರಕಾರಿಯಿಂದ ತಯಾರಿಸಿದ ಪಲ್ಯ ಬಡಿಸಿದಾಗ ಸಂಜಯ್ ರಾಯ್ ಉದ್ವಿಗ್ನನಾಗಿದ್ದ. ಆದರೆ ಜೈಲು ಸಿಬ್ಬಂದಿ ಛೀಮಾರಿ ಹಾಕಿದ ನಂತರ ಅಂತಿಮವಾಗಿ ಊಟವನ್ನು ಸೇವಿಸಿದ್ದಾನೆʼʼ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಹಿಂದೆ ಸಿಬಿಐ ಕಸ್ಟಡಿಯಿಂದ ಸುಧಾರಣಾ ಗೃಹ (Correctional home)ಕ್ಕೆ ವರ್ಗಾವಣೆಯಾದಾಗ ಸಂಜಯ್ ರಾಯ್ ನಿದ್ದೆ ಮಾಡಲು ಹೆಚ್ಚುವರಿ ಸಮಯಾವಕಾಶ ನೀಡಬೇಕೆಂದು ಕೋರಿದ್ದ ಮತ್ತು ಗೊಣಗುತ್ತಲೇ ಇರುತ್ತಿದ್ದ.  ಆದಾಗ್ಯೂ ಕೆಲವು ದಿನಗಳ ನಂತರ ಸಾಮಾನ್ಯ ಸ್ಥಿತಿಗೆ ಮರಳಿದ್ದಾನೆ ಎಂದು ವರದಿಯೊಂದು ತಿಳಿಸಿದೆ.

ಆಗಸ್ಟ್ 9ರಂದು ಕೋಲ್ಕತ್ತಾದ ಆರ್‌.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಅತ್ಯಾಚಾರಕ್ಕೊಳಗಾಗಿ ಅರೆಬೆತ್ತಲೆ ಸ್ಥಿತಿಯಲ್ಲಿ 31 ವರ್ಷದ ಟ್ರೈನಿ ವೈದ್ಯೆಯ ಶವ ಪತ್ತೆಯಾಗಿತ್ತು. ಆಗಸ್ಟ್ 10ರಂದು  ಪೊಲೀಸರು ಪ್ರಮುಖ ಆರೋಪಿ ಸಂಜಯ್ ರಾಯ್‌ನನ್ನು ಬಂಧಿಸಿದ್ದರು. ಸಿಸಿಟಿವಿ ಕ್ಯಾಮೆರಾದಲ್ಲಿ ಸಂಜಯ್‌ ರಾಯ್‌ ಸೆಮಿನಾರ್‌ ಹಾಲ್‌ಗೆ ಪ್ರವೇಶಿಸುತ್ತಿರುವುದು ಕಂಡು ಬಂದಿತ್ತು. ಅಲ್ಲದೆ ಶವದ ಬಳಿ ಆತನ ಬ್ಲೂಟೂತ್ ಸಾಧನವು ಪತ್ತೆಯಾಗಿತ್ತು. ಇದೇ ಕಾರಣಕ್ಕೆ ರಾಯ್‌ನನ್ನು ಪೊಲೀಸರು ಬಂಧಿಸಿದ್ದರು. ಸದ್ಯ ಸಿಬಿಐ ಪ್ರಕರಣದ ತನಿಖೆ ನಡೆಸುತ್ತಿದೆ.

 

ಸಂದೀಪ್‌ ಘೋಷ್‌ನ ವಿಚಾರಣೆ

ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಆರ್‌.ಜಿ. ಕರ್‌ ವೈದ್ಯಕೀಯ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್‌ನನ್ನು ಸಿಬಿಐ ಸತತ 14ನೇ ದಿನ ವಿಚಾರಣೆ ನಡೆಸಿದೆ. ಈ ಮೂಲಕ ಈಗಾಗಲೇ ಈ ಪ್ರಕರಣದಲ್ಲಿ ಒಟ್ಟು 140 ಗಂಟೆಗಳ ಕಾಲ ಪ್ರಶ್ನಿಸಿದಂತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘೋರ ಅಪರಾಧದ ಹೊರತಾಗಿ ಆಸ್ಪತ್ರೆಯಲ್ಲಿನ  ಭ್ರಷ್ಟಾಚಾರಕ್ಕೆ ಪ್ರಕರಣಕ್ಕೆ ಸಂಬಂಧಿಸಿ ಸಂದೀಪ್ ಘೋಷ್‌ನನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಈಗಾಗಲೇ ಎಫ್ಐಆರ್ ದಾಖಲಿಸಲಾಗಿದೆ. ಸಂದೀಪ್ ಘೋಷ್‌ ಮತ್ತು ಆತನ ಬೆಂಬಲಿಗರ ನಿವಾಸದಲ್ಲಿಯೂ ಈಗಾಗಲೇ ಶೋಧ ನಡೆಸಲಾಗಿದೆ.

Leave a Reply

Your email address will not be published. Required fields are marked *