Tuesday, 13th May 2025

S Jaishankar: ಪೂರ್ವ ಲಡಾಕ್‌ನಲ್ಲಿ ಭಾರತ-ಚೀನಾ ಸೇನಾ ಹಿಂತೆಗೆತ ಪ್ರಕ್ರಿಯೆ; ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದಿಷ್ಟು

S Jaishankar

ಮುಂಬೈ: ಪೂರ್ವ ಲಡಾಖ್‌ (Eastern Ladakh)ನಲ್ಲಿ ಉಭಯ ದೇಶಗಳ ಸೈನ್ಯಗಳ ನಡುವಿನ ಬಿಕ್ಕಟ್ಟನ್ನು ಕೊನೆಗೊಳಿಸಲು ಭಾರತ ಮತ್ತು ಚೀನಾ ಒಪ್ಪಂದಕ್ಕೆ ಬಂದಿದ್ದು, ವಾಸ್ತವಿಕ ನಿಯಂತ್ರಣ ರೇಖೆಯ (ಎಲ್ಎಸಿ) ಉದ್ದಕ್ಕೂ ಸೇನೆಯನ್ನು ಹಿಂಪಡೆಯುವ ಪ್ರತಿಕ್ರಿಯೆ ಆರಂಭವಾಗಿದೆ (India-China Border). ಈ ಪ್ರಕ್ರಿಯೆ ಪೂರ್ಣಗೊಳ್ಳಲು ಸ್ವಲ್ಪ ಸಮಯ ತಗಲುತ್ತದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ (S Jaishankar) ತಿಳಿಸಿದ್ದಾರೆ.

ʼʼಲಡಾಖ್‌ನ ಡೆಪ್ಸಾಂಗ್ ಮತ್ತು ಡೆಮ್ಚೋಕ್‌ನಲ್ಲಿ ಸೈನ್ಯವನ್ನು ಹಿಂತೆಗೆದುಕೊಳ್ಳುವುದು ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ಉದ್ವಿಗ್ನ ಪರಿಸ್ಥಿತಿ ಕೊನೆಗೊಳಿಸುವ ಮೊದಲ ಹೆಜ್ಜೆಯಾಗಿದೆʼʼ ಎಂದು ಅವರು ಹೇಳಿದ್ದಾರೆ. ಚೀನೀಯರು ಇದೇ ರೀತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎನ್ನುವುದನ್ನು ಖಚಿತಪಡಿಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಪೂರ್ವ ಲಡಾಖ್‌ನಲ್ಲಿ 4 ವರ್ಷಗಳ ಸುದೀರ್ಘ ಬಿಕ್ಕಟ್ಟನ್ನು ಕೊನೆಗೊಳಿಸುವ ಮೂಲಕ ಡೆಪ್ಸಾಂಗ್ ಮತ್ತು ಡೆಮ್ಚೋಕ್‌ನಲ್ಲಿ ಸೇನೆಯ ಹಿಂತೆಗೆಯುವ ಬಗ್ಗೆ ಉಭಯ ದೇಶಗಳು ಒಪ್ಪಂದಕ್ಕೆ ಬಂದಿವೆ ಎಂದು ಭಾರತ ಮತ್ತು ಚೀನಾ ಈ ತಿಂಗಳ ಆರಂಭದಲ್ಲಿ ತಿಳಿಸಿದ್ದವು.

ʼʼವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ 2020ರ ಸ್ಥಿತಿಯನ್ನು ಪುನಃಸ್ಥಾಪಿಸಲಾಗುವುದು. ಇದನ್ನು ಕಾರ್ಯಗತಗೊಳಿಸಲು ಸ್ವಲ್ಪ ಸಮಯ ತಗಲುತ್ತದೆʼʼ ಎಂದು ಎಸ್. ಜೈಶಂಕರ್ ಹೇಳಿದ್ದಾರೆ. ಎರಡೂ ಬದಿಗಳಲ್ಲಿ ಸುಮಾರು 12 ಡೇರೆಗಳಿವೆ, ಅವೆಲ್ಲವನ್ನೂ ತೆಗೆದು ಹಾಕಲು ಉಭಯ ದೇಶಗಳು ಮುಂದಾಗಿವೆ. ಎಲ್ಲ ಡೇರೆಗಳು ಮತ್ತು ತಾತ್ಕಾಲಿಕ ಶಿಬಿರಗಳನ್ನು ಸಂಪೂರ್ಣವಾಗಿ ತೆಗೆದುಹಾಕಿದ ನಂತರ ಸಮೀಕ್ಷೆಗಳ ಮೂಲಕ ಜಂಟಿ ಪರಿಶೀಲನಾ ಪ್ರಕ್ರಿಯೆ ಪ್ರಾರಂಭವಾಗಲಿದೆ.

“ಉದ್ವಿಗ್ನತೆಯನ್ನು ಕಡಿಮೆ ಮಾಡಿದ ನಂತರ ಗಡಿಗಳನ್ನು ಹೇಗೆ ನಿರ್ವಹಿಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಾಗುವುದು” ಎಂದು ಅವರು ಮಾಹಿತಿ ನೀಡಿದ್ದಾರೆ. 2020ರ ಜೂನ್ 15ರಂದು ಚೀನಾದ ದಾಳಿಗೆ 20 ಭಾರತೀಯ ಸೈನಿಕರು ಹುತಾತ್ಮರಾದ ನಂತರ ಭಾರತ ಮತ್ತು ಚೀನಾದ ದ್ವಿಪಕ್ಷೀಯ ಸಂಬಂಧಗಳು ಹದಗೆಟ್ಟಿದ್ದವು. ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಮುಖಾಮುಖಿಯಲ್ಲಿ ಚೀನೀ ಸೈನಿಕರು ಸಹ ಸಾವನ್ನಪ್ಪಿದ್ದರು.

ಸರಣಿ ಮಾತುಕತೆ ಫಲಪ್ರದ

ಭಾರತ ಮತ್ತು ಚೀನಾದ ನಡುವಿನ ಬಿಕ್ಕಟ್ಟಿಗೆ ಕಾರಣವಾಗಿದ್ದ ಪೂರ್ವ ಲಡಾಖ್‌ನ ವಾಸ್ತವಿಕ ಗಡಿ ನಿಯಂತ್ರಣ ರೇಖೆಯಲ್ಲಿ ಗಸ್ತು ತಿರುಗುವ ಬಗ್ಗೆ ಉಭಯ ರಾಷ್ಟ್ರಗಳು ಸಂಧಾನಕ್ಕೆ ಬಂದಿವೆ. ಎರಡೂ ದೇಶಗಳ ಯೋಧರು ಈ ಭಾಗದಲ್ಲಿ ಗಸ್ತು ತಿರುಗಲು ಒಪ್ಪಂದ ಮಾಡಿಕೊಂಡಿದ್ದಾಗಿ ಕೇಂದ್ರ ಸರ್ಕಾರ ಅಕ್ಟೋಬರ್‌ 21ರಂದು ತಿಳಿಸಿತ್ತು.

ʼʼ2020ರಲ್ಲಿ ಉದ್ಭವಿಸಿದ ಸಮಸ್ಯೆಯಾದ ಪೂರ್ವ ಲಡಾಖ್‌ನ​ ಎಲ್​​ಎಸಿಯಲ್ಲಿ ಗಸ್ತು ತಿರುಗುವ ಬಗ್ಗೆ ಪರಿಹಾರ ಕಂಡುಕೊಳ್ಳಲಾಗಿದೆ. ಕೆಲವು ದಿನಗಳಿಂದ ನಡೆಯುತ್ತಿರುವ ದ್ವಿಪಕ್ಷೀಯ ಸರಣಿ ಮಾತುಕತೆಯು ಫಲಪ್ರದವಾಗಿದೆ. ಎಲ್​​ಎಸಿ ಗಡಿಯಲ್ಲಿ ಗಸ್ತಿಗೆ ಸೇನೆಗಳು ಸಂಧಾನಕ್ಕೆ ಬಂದಿವೆʼʼ ಎಂದು ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಮಾಹಿತಿ ನೀಡಿದ್ದರು. ಕಳೆದ ವಾರ ರಷ್ಯಾದ ಕಜಾನ್‌ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ (Xi Jinping) ಅವರನ್ನು ಭೇಟಿ ಮಾಡಿದ್ದರು. 2019ರ ನಂತರ ನಡೆದ ಮೊದಲ ಬಾರಿಗೆ ದ್ವಿಪಕ್ಷೀಯ ಸಭೆಯಲ್ಲಿ, ಗಡಿಯಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳುವುದು ಉಭಯ ದೇಶಗಳ ಆದ್ಯತೆಯಾಗಿರಬೇಕು ಎಂದು ಪಿಎಂ ಮೋದಿ ಹೇಳಿದ್ದರು.

ಈ ಸುದ್ದಿಯನ್ನೂ ಓದಿ: India-China Border: ಪೂರ್ವ ಲಡಾಕ್‌ನಲ್ಲಿ ಭಾರತ-ಚೀನಾ ಸೇನಾ ಹಿಂತೆಗೆತ ಪ್ರಕ್ರಿಯೆ ಆರಂಭ