Sunday, 11th May 2025

ರಿಯಲ್ ಎಸ್ಟೇಟ್ ಸಂಸ್ಥೆ ಜಿ ಸ್ಕ್ವೇರ್ ರಿಯಲ್ಟರ್ಸ್ ಪ್ರೈವೇಟ್ ಲಿಮಿಟೆಡ್’ಗೆ ’ಐಟಿ’ ದಾಳಿ ಬಿಸಿ

ಚೆನ್ನೈ: ತಮಿಳು ನಾಡಿನಲ್ಲಿ ಡಿಎಂಕೆ ಕುಟುಂಬದ ಸದಸ್ಯರ ಆಸ್ತಿಗಳ ವಿವರಗಳ ಕಡತಗಳನ್ನು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಅವರು ಬಿಡುಗಡೆ ಮಾಡಿದ ವಾರದ ನಂತರ ಆದಾಯ ತೆರಿಗೆ ಇಲಾಖೆ ಸೋಮವಾರ ರಿಯಲ್ ಎಸ್ಟೇಟ್ ಸಂಸ್ಥೆ ಜಿ ಸ್ಕ್ವೇರ್ ರಿಯಲ್ಟರ್ಸ್ ಪ್ರೈವೇಟ್ ಲಿಮಿಟೆಡ್ಗೆ ಸಂಬಂಧಿಸಿ ತಮಿಳುನಾಡು ಮತ್ತು ಕರ್ನಾಟಕಗಳಲ್ಲಿ ಸುಮಾರು 50 ಸ್ಥಳಗಳಲ್ಲಿ ಶೋಧ ನಡೆಸಿತು.

ಅಣ್ಣಾಮಲೈ ಮಾಡಿದ ಆರೋಪಗಳನ್ನು ಜಿ-ಸ್ಕ್ವೇರ್ ನಿರಾಕರಿಸಿದ್ದು, ಕಂಪನಿಯು ‘ಡಿಎಂಕೆಯ ಪಕ್ಷದ ಮೊದಲ ಕುಟುಂಬ’ದ ಮಾಲೀಕತ್ವ ಅಥವಾ ನಿಯಂತ್ರಣದಲ್ಲಿಲ್ಲ. ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ಆರೋಪಗಳು ಸಂಪೂರ್ಣವಾಗಿ ಸುಳ್ಳು ಮತ್ತು ಆಧಾರ ರಹಿತವಾಗಿವೆ ಎಂದು ಹೇಳಿದ್ದು, ಇದರ ಬೆನ್ನಲ್ಲೇ ದಾಳಿ ನಡೆದಿರುವುದು ವಿಶೇಷ ಮಹತ್ವ ಪಡೆದಿದೆ.

ಅಣ್ಣಾಮಲೈ ಅವರು ‘ಜಿ ಸ್ಕ್ವೇರ್’ ‘ಡಿಎಂಕೆಯ 1ನೇ ಕುಟುಂಬದ’ ಒಡೆತನದಲ್ಲಿದೆ ಎಂಬ ಆರೋಪಗಳನ್ನು ಮಾಡಿದ್ದರು. ಒಟ್ಟು 38,827.70 ಕೋಟಿ ಆದಾಯವನ್ನು ಹೊಂದಿದ್ದು ಇವೆಲ್ಲವೂ ಭ್ರಷ್ಟಾಚಾರದಿಂದ ಬಂದ ಹಣಗಳಾಗಿವೆ ಎಂದು ಕೂಡ ಟೀಕೆ ಮಾಡಿದ್ದರು.

ಕಂಪನಿಯ ಆದಾಯವು 38,827.70 ಕೋಟಿ ರೂಪಾಯಿಗಳಾಗಿದ್ದು, ಕಂಪನಿಯು ಎಲ್ಲಾ ಜಮೀನುಗಳನ್ನು ಖರೀದಿಸಿ ಅವು ಗಳನ್ನು ಉಳಿಸಿಕೊಂಡಿದೆ ಎಂಬ ತಪ್ಪು ಲೆಕ್ಕಾಚಾರ ನೀಡುತ್ತಿದೆ. ಆನ್ಲೈನ್ನಲ್ಲಿ ಸುಲಭವಾಗಿ ಲಭ್ಯವಿರುವ ಎನ್ಕಂಬರೆನ್ಸ್ ಪ್ರಮಾಣ ಪತ್ರಗಳ ಮೂಲ ಸಂಶೋಧನೆ ಮತ್ತು ಪರಿಶೀಲನೆ ಮಾಡಿದಾಗ ಕಂಪನಿಯು ವಿವಿಧ ಹಂತಗಳಲ್ಲಿ ಯೋಜನೆಗಳನ್ನು ಅಭಿವೃದ್ಧಿ ಪಡಿಸಿದೆ ಎಂದು ತೋರಿಸುತ್ತದೆ.

ಇಷ್ಟು ವರ್ಷಗಳಲ್ಲಿ ಸುಮಾರು 6,000 ಗ್ರಾಹಕರಿಗೆ ಪ್ಲಾಟ್ಗಳನ್ನು ಮಾರಾಟ ಮಾಡಿದೆ ಎಂದು ಅಣ್ಣಾಮಲೈ ಅವರ ಆರೋಪ ಗಳಿಗೆ ಪ್ರತಿಕ್ರಿಯೆಯಾಗಿ ಜಿ-ಸ್ಕ್ವೇರ್ ಹೇಳಿಕೆ ತಿಳಿಸಿದೆ.

ಜಿ ಸ್ಕ್ವೇರ್, ವಿಶೇಷವಾಗಿ ಕೊಯಮತ್ತೂರಿನ ಮೂರು ಯೋಜನೆಗಳು, ಚೆಂಗಲ್ಪಟ್ಟು ಜಿಲ್ಲೆಯ ಎಗತ್ತೂರ್ ಮತ್ತು ಚೆನ್ನೈನ ನೀಲಂಕಾರೈನಲ್ಲಿ ಕಾರ್ಯಗತಗೊಳಿಸಿದ ಯೋಜನೆಗಳಿಗೆ ಭಾರೀ ವೇಗದಲ್ಲಿ ಅನುಮೋದನೆ ನೀಡುತ್ತಿದ್ದಾರೆ ಎಂದು ಅಣ್ಣಾಮಲೈ ಆರೋಪಿಸಿದ್ದರು.

ಈ ಹಿಂದೆ 2019 ರಲ್ಲಿ ಆದಾಯ ತೆರಿಗೆ ಇಲಾಖೆಯು ಕಂಪನಿಯ ಮೇಲೆ ದಾಳಿ ನಡೆಸಿತ್ತು.