Thursday, 15th May 2025

Rajasthan Temple : ರಾಜಸ್ಥಾನ ಶ್ರೀಕೃಷ್ಣ ದೇವಾಲಯಕ್ಕೆ ದೇಣಿಗೆಯ ಮಹಾಪೂರ! 1 ಕೆಜಿ ಚಿನ್ನ, 23 ಕೋಟಿ ರೂ.ಹಣ ಸಂಗ್ರಹ

ಜೈಪುರ: ರಾಜಸ್ಥಾನದ(Rajasthan) ಸನ್ವಾಲಿಯಾ ಸೇಠ್(Sanwaliya Seth) ನಲ್ಲಿರುವ ಭಗವಾನ್ ಶ್ರೀಕೃಷ್ಣನ(Sri  Krishna) ಪ್ರಸಿದ್ಧ ದೇವಾಲಯದಲ್ಲಿ ದೇಣಿಗೆಯ ಎಣಿಕೆ ಪ್ರಕ್ರಿಯೆ ಆರಂಭವಾಗಿದ್ದು, ಈವರೆಗೆ 1 ಕೆಜಿ ಚಿನ್ನ ಮತ್ತು 23 ಕೋಟಿ ರೂಪಾಯಿ ಹಣ ಸಂಗ್ರಹವಾಗಿದೆ ಎಂದು ತಿಳಿದು ಬಂದಿದೆ. (Rajasthan Temple)

ರಾಜಸ್ಥಾನದ ಚಿತ್ತೋರ್‌ಗಢ್‌ ಸಮೀಪದ ಸನ್ವಾಲಿಯಾ ಸೇಠ್ ಪ್ರದೇಶದಲ್ಲಿರುವ ಶ್ರೀಕೃಷ್ಣ ದೇವಾಲಯವು ದಾಖಲೆಯ ದೇಣಿಗೆ ಸಂಗ್ರಹಕ್ಕೆ ಸಾಕ್ಷಿಯಾಗಿದೆ. ಭಗವಾನ್ ಕೃಷ್ಣನಿಗೆ ಸಮರ್ಪಿತವಾದ ಪ್ರಸಿದ್ಧ ದೇವಾಲಯವು ಇತ್ತೀಚೆಗೆ ತನ್ನ ಖಜಾನೆ ಎಣಿಕೆ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದು, ಈ ವೇಳೆ ಸಂಗ್ರಹವಾಗಿರುವ ಒಟ್ಟು ಕಾಣಿಕೆಗಳನ್ನು ಬಹಿರಂಗಪಡಿಸಿದೆ.

ಇದುವರೆಗಿನ ಲೆಕ್ಕಾಚಾರದ ಪ್ರಕಾರ 23 ಕೋಟಿ ರೂ ನಗದು ಎಣಿಕೆಯಾಗಿದ್ದು,1 ಕೆ.ಜಿ ತೂಕದ ಚಿನ್ನದ ಬಿಸ್ಕತ್ ಗಳು ಕೂಡ ಕಾಣಿಕೆ ರೂಪದಲ್ಲಿ ಬಂದಿದೆ. ಭಕ್ತಾದಿಗಳು ಚಿಕ್ಕ ಚಿನ್ನದ ಬಿಸ್ಕತ್ತುಗಳು, ಬೆಳ್ಳಿಯ ಕಲಾಕೃತಿಗಳು, ಬೆಳ್ಳಿಯ ಪಿಸ್ತೂಲ್, ಶುದ್ಧ ಬೆಳ್ಳಿಯ ಬೀಗ, ಕೀ ಮತ್ತು ಕೊಳಲುಗಳಂತಹ ವಿಶೇಷ ವಸ್ತುಗಳನ್ನು ಕಾಣಿಕೆಯಾಗಿ ನೀಡಿರುವುದು ಕಂಡು ಬಂದಿದೆ. ಈ ದೇವಾಲಯದಲ್ಲಿ ಇಷ್ಟು ದೊಡ್ಡ ಪ್ರಮಾಣದ ದೇಣಿಗೆ ಸಂಗ್ರಹ ಇದೇ ಮೊದಲ ಬಾರಿಗೆ ಆಗಿರುವುದು ಎನ್ನಲಾಗಿದೆ.

ಎರಡು ತಿಂಗಳ ನಂತರ ದೇವಾಲಯದ ಖಜಾನೆಯನ್ನು ತೆರೆಯಲಾಗಿದ್ದು,ದಾಖಲೆಯ ಮಟ್ಟದಲ್ಲಿ ಕಾಣಿಕೆಗಳು ಬಂದಿರುವ ಕಾರಣದಿಂದಾಗಿ ಹಲವು ಹಂತಗಳಲ್ಲಿ ಎಣಿಕೆ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ 11.34 ಕೋಟಿ ರೂ ಲೆಕ್ಕ ಹಾಕಲಾಗಿತ್ತು. ಎರಡನೇ ಹಂತದಲ್ಲಿ  3.60 ಕೋಟಿ ರೂ, ಮೂರನೇ ಹಂತದಲ್ಲಿ ಒಟ್ಟು  4.27 ಕೋಟಿ ರೂ, ಸದ್ಯದ ಎಣಿಕೆಯು 19.22 ಕೋಟಿ ರೂ ನಗದನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ಉಳಿದ ಹಂತದ ಎಣಿಕೆ ಪ್ರಕ್ರಿಯೆ ಮುಕ್ತಾಯಗೊಳಿಸುವ ನಿರೀಕ್ಷೆಯಿದೆ. ಹುಂಡಿ, ಆನ್‌ಲೈನ್ ಮೂಲಕ ಪಾವತಿಯಾದ ಹಣ, ಹಲವು ರೂಪದ ಉಡುಗೊರೆಗಳನ್ನು ಕೂಡ ಲೆಕ್ಕ ಮಾಡಲಾಗುತ್ತದೆ. ಖಜಾನೆ ಪೆಟ್ಟಿಗೆಯಿಂದ ಸಂಗ್ರಹಿಸಿದ ಚಿನ್ನ ಮತ್ತು ಬೆಳ್ಳಿ ವಸ್ತುಗಳ ತೂಕ ಮತ್ತು ಅದರ ಮೌಲ್ಯಗಳ ಲೆಕ್ಕಾಚಾರ ಕೆಲಸಗಳು ಮುಂದುವರೆಯಲಿದೆ ಎಂಬ ಮಾಹಿತಿಯಿದೆ. ಪ್ರತಿ ತಿಂಗಳ ಅಮಾವಾಸ್ಯೆಯಂದು ನಡೆಸಲಾಗುವ ಎಣಿಕೆ ಪ್ರಕ್ರಿಯೆಯು ಈ ಬಾರಿ 6-7 ಹಂತಗಳಲ್ಲಿ ನಡೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಚಿತ್ತೋರ್‌ಗಢ್‌ನಿಂದ ಸರಿ ಸುಮಾರು 40 ಕಿಲೋಮೀಟರ್ ದೂರದಲ್ಲಿರುವ ಚಿತ್ತೋರ್‌ಗಢ್-ಉದಯ್‌ಪುರ್ ಹೆದ್ದಾರಿಯಲ್ಲಿರುವ ಸನ್ವಾಲಿಯಾ ಸೇಠ್ ನ ಶ್ರೀಕೃಷ್ಣ ದೇವಾಲಯವು ವೈಷ್ಣವ ಭಕ್ತರಿಗೆ ಅತ್ಯಂತ ಪ್ರಮುಖ ದೇವಾಲಯವಾಗಿದೆ. ಈ ದೇವಾಲಯವನ್ನು ಸಾಮಾನ್ಯವಾಗಿ ಶ್ರೀ ಸನ್ವಾಲಿಯಾ ಧಾಮ್ ಎಂದು ಕರೆಯಲಾಗುತ್ತದೆ.  1840ನೇ ಇಸವಿಯಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದ್ದು,ಭಗವಾನ್‌ ಶ್ರೀಕೃಷ್ಣನ ಪವಿತ್ರ ದೇವಾಲಯವೆಂದು ಪರಿಗಣಿಸಲಾಗಿದೆ. ಈ ದೇವಸ್ಥಾನಕ್ಕೆ ಪ್ರತಿದಿನ ಅಸಂಖ್ಯಾತ ಯಾತ್ರಾರ್ಥಿಗಳು ಬರುತ್ತಾರೆ. ಅಲ್ಲಿನ ಸ್ಥಳೀಯರ ನಂಬಿಕೆ ಪ್ರಕಾರ ಶ್ರೀಕೃಷ್ಣನ ಭಕ್ತೆ ಮತ್ತು ಖ್ಯಾತ ಹಿಂದೂ ಕವಯಿತ್ರಿ ಮೀರಾಬಾಯಿ ಈ ಸ್ಥಳದಲ್ಲಿ ಪ್ರಾರ್ಥನೆ ಮಾಡಿದ್ದಳು ಎನ್ನಲಾಗುತ್ತದೆ.

ಈ ಸುದ್ದಿಯನ್ನೂ ಓದಿ: Tirupati Laddu Row: ಒಡಿಶಾದ ಪುರಿ ಜಗನ್ನಾಥ ದೇವಸ್ಥಾನದಲ್ಲಿ ಬಳಸುವ ತುಪ್ಪದ ಗುಣಮಟ್ಟ ಪರಿಶೀಲನೆಗೆ ಆದೇಶ