ನವದೆಹಲಿ: ಅಶ್ಲೀಲ ಸಿನಿಮಾ ನಿರ್ಮಾಣ ಮತ್ತು ಹಂಚಿಕೆ ಪ್ರಕರಣ ಎದುರಿಸುತ್ತಿರುವ ನಟಿ ಶಿಲ್ಪಾ ಶೆಟ್ಟಿ(Shilpa Shetty) ಪತಿ ಖ್ಯಾತ ಉದ್ಯಮಿ ರಾಜ್ ಕುಂದ್ರಾಗೆ (Raj Kundra) ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ರಾಜ್ ಕುಂದ್ರಾ ಮನೆ ಮತ್ತು ಕಚೇರಿ ಮೇಲೆ ಕೆಲ ದಿನಗಳ ಹಿಂದೆಯಷ್ಟೇ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯ (Enforcement Directorate) ಇದೀಗ ಸಮನ್ಸ್ ಜಾರಿ ಮಾಡಿದ್ದು, ಸೋಮವಾರ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದೆ.
ಬಾಲಿವುಡ್(Bollywood) ನಟಿ ಶಿಲ್ಪಾ ಶೆಟ್ಟಿ ಅವರ ಪತಿ ಉದ್ಯಮಿ ರಾಜ್ ಕುಂದ್ರಾ ಅವರನ್ನು ಅಶ್ಲೀಲ ಸಿನಿಮಾ ನಿರ್ಮಾಣ ದಂಧೆ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯವು (ಇಡಿ) ಸಮನ್ಸ್ ಜಾರಿಗೊಳಿಸಿದೆ ಎಂದು ಮೂಲಗಳು ತಿಳಿಸಿವೆ. ರಾಜ್ ಕುಂದ್ರಾಗೆ ಸಂಬಂಧಿಸಿದ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದ ಕೆಲವೇ ದಿನಗಳಲ್ಲಿ ಸಮನ್ಸ್ ಜಾರಿಯಾಗಿದೆ.
ಇಡಿ ಮೂಲಗಳ ಪ್ರಕಾರ, ರಾಜ್ ಕುಂದ್ರಾ ಅವರನ್ನು ವಿಚಾರಣೆಗಾಗಿ ಸೋಮವಾರ(ಡಿ.2) ಬೆಳಗ್ಗೆ 11 ಗಂಟೆಗೆ ಏಜೆನ್ಸಿಯ ಮುಂದೆ ಹಾಜರಾಗುವಂತೆ ತಿಳಿಸಲಾಗಿದೆ. ಇಡಿ ಮುಂಬೈ ಕಚೇರಿಯಲ್ಲಿ ಅವರ ವಿಚಾರಣೆ ನಡೆಯಲಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವ ಇತರರನ್ನೂ ವಿಚಾರಣೆಗೆ ಕರೆಯಲಾಗಿದೆ ಎಂದು ತಿಳಿದು ಬಂದಿದೆ.
2021 ರ ಜುಲೈ ತಿಂಗಳಿನಲ್ಲಿ ಮುಂಬೈ ಪೊಲೀಸರು ರಾಜ್ ಕುಂದ್ರಾ ಅವರನ್ನು ಅಶ್ಲೀಲ ಸಿನಿಮಾ ನಿರ್ಮಾಣ ಮತ್ತು ಹಂಚಿಕೆ ಪ್ರಕರಣದಲ್ಲಿ ಬಂಧಿಸಿದ್ದರು. ಅಶ್ಲೀಲ ಸಿನಿಮಾಗಳನ್ನು ಮುಂಬೈನಲ್ಲಿ ನಿರ್ಮಿಸಿ ಅದನ್ನು ಲಂಡನ್ ಮೂಲದ ತಮ್ಮದೇ ಕಂಪೆನಿಯ ಸರ್ವರ್ನಿಂದ ಅಪ್ಲಿಕೇಶನ್ಗೆ ಅಪ್‌ಲೋಡ್ ಮಾಡಿಸುತ್ತಿದ್ದ ಆರೋಪವಿತ್ತು. ಇದರಿಂದ ಪ್ರತಿದಿನ ಲಕ್ಷಾಂತರ ರೂಪಾಯಿ ಹಣವನ್ನು ಕುಂದ್ರಾ ಗಳಿಸುತ್ತಿದ್ದರು ಎಂದು ತಿಳಿದು ಬಂದಿತ್ತು.
ಈ ಹಿಂದೆಯೂ ಒಮ್ಮೆ ರಾಜ್ ಕುಂದ್ರಾ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಇದೇ ವರ್ಷದ ಏಪ್ರಿಲ್ ತಿಂಗಳಲ್ಲಿ ಇಡಿ ಇಲಾಖೆ ರಾಜ್ ಕುಂದ್ರಾಗೆ ಸೇರಿದ 97.7 ಕೋಟಿ ರೂಪಾಯಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಅದರಲ್ಲಿ ಜುಹುವಿನ ಐಶಾರಾಮಿ ಮನೆ, ಪುಣೆಯ ಮನೆ ಹಾಗೂ ಕೆಲವು ಈಕ್ವಿಟಿ ಷೇರುಗಳು ಸಹ ಇದ್ದವು. 6,600 ಕೋಟಿ ಮೌಲ್ಯದ ಬಿಟ್ಕಾಯ್ನ್ ಹಗರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್ ತಿಂಗಳಲ್ಲಿ ರಾಜ್ ಕುಂದ್ರಾ ಮೇಲೆ ದಾಳಿ ಮಾಡಲಾಗಿತ್ತು.
ಪೋರ್ನ್ ಕಂಟೆಂಟ್ ಕೇಸ್
ರಾಜ್ ಕುಂದ್ರಾ ವೆಬ್ ಸರಣಿಗಳು ಮತ್ತು ಚಲನಚಿತ್ರಗಳ ಆಡಿಷನ್‌ಗಳ ಸಮಯದಲ್ಲಿ ಎಕ್ಸ್‌ಕ್ಲಿಪ್ಟ್ ಕಂಟೆಂಟ್ ಗಳಲ್ಲಿ ಭಾಗವಹಿಸುವಂತೆ ಒತ್ತಾಯಿಸಿದ್ದರು ಎಂದು ಆರೋಪಿಸಿ ಹಲವು ಮಹಿಳೆಯರು ದೂರು ನೀಡಿದ್ದರು. ನಂತರ ಮುಂಬೈ ಪೊಲೀಸರು ಅಶ್ಲೀಲ ಸಿನಿಮಾ ದಂಧೆಯ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡರು. ಕುಂದ್ರಾ ವಿರುದ್ಧದ ಪ್ರಕರಣದ ತನಿಖೆಯು ಫೆಬ್ರವರಿ 2021 ರಲ್ಲಿ ಪ್ರಾರಂಭವಾಯಿತು.
ಕುಂದ್ರಾ ಶೂಟ್‌ಗಳನ್ನು ಪೂರ್ಣಗೊಳಿಸುವಂತೆ ಹೇಳಿ ಬೆದರಿಕೆ ಹಾಕಿದ್ದು, ಸಾಕಷ್ಟು ಒತ್ತಡ ಹೇರುತ್ತಿದ್ದಾರೆ ಎಂದು ಮಹಿಳೆಯರು ಗಂಭೀರವಾಗಿ ಆರೋಪಿಸಿದ್ದರು. ನಂತರ ವಿಡಿಯೊಗಳನ್ನು ಸಬ್‌ಸ್ಕ್ರಿಪ್ಶನ್ ಆಧಾರಿತ ಮೊಬೈಲ್ ಅಪ್ಲಿಕೇಶನ್‌ಗಳಾದ Hotshots, HotHit Movies ಮತ್ತು Hothitmovies ಮತ್ತು Nuefliks ನಂತಹ ವೆಬ್‌ಸೈಟ್‌ಗಳಲ್ಲಿ ಅಪ್‌ಲೋಡ್ ಮಾಡಲಾಗಿತ್ತು.
2019 ರಲ್ಲಿ ಆರ್ಮ್ಸ್‌ಪ್ರೈಮ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಅನ್ನು ಸ್ಥಾಪಿಸಿದ ಕುಂದ್ರಾ, ಈ ಅಶ್ಲೀಲ ಸಿನಿಮಾ ನಿರ್ಮಾಣ ಮತ್ತು ಹಂಚಿಕೆಯ ದಂಧೆಯಲ್ಲಿನ ಪ್ರಮುಖ ಆರೋಪಿಯಾಗಿದ್ದರು. ಅವರ ಕಂಪನಿಯು ಹಾಟ್‌ಶಾಟ್ಸ್ ಅಪ್ಲಿಕೇಶನ್ ಅನ್ನು ಸಾಕಷ್ಟು ಬಿಲ್ಡ್ ಮಾಡಿ, ನಂತರ ಅದನ್ನು ಕುಂದ್ರಾ ಸೋದರ ಮಾವ ಪ್ರದೀಪ್ ಬಕ್ಷಿ ಒಡೆತನದ ಯುಕೆ ಮೂಲದ ಕೆನ್ರಿನ್ ಲಿಮಿಟೆಡ್‌ಗೆ ಮಾರಾಟ ಮಾಡಲಾಯಿತು.
ಕುಂದ್ರಾ ಅವರು ಅಶ್ಲೀಲ ವಿಷಯವನ್ನು ಪ್ರಸಾರ ಮಾಡುವ ಅಪ್ಲಿಕೇಶನ್ ಮತ್ತು ಇತರ ಪ್ಲಾಟ್‌ಫಾರ್ಮ್‌ಗಳನ್ನು ನಿರ್ವಹಿಸುವುದನ್ನು ಮುಂದುವರೆಸಿದ್ದು, ಸಬ್‌ಸ್ಕ್ರಿಪ್ಶನ್ ಗಳಿಂದ ಸಾಕಷ್ಟು ಆದಾಯವನ್ನು ಗಳಿಸಿದ್ದಾರೆ ಎಂದು ಪೊಲೀಸರು ಈ ಹಿಂದೆ ಆರೋಪಿಸಿದ್ದರು.
ಈ ಪ್ರಕರಣದಲ್ಲಿ ನನ್ನನ್ನು “ಬಲಿಪಶು” ಮಾಡಲಾಗಿದೆ ಎಂದು ಕುಂದ್ರಾ ಹೇಳಿದ್ದರು. ಅವರ ವಿರುದ್ಧದ ಆರೋಪಗಳನ್ನೂ ತಳ್ಳಿ ಹಾಕಿದ್ದರು. ಅವರು ಅಶ್ಲೀಲ ವಿಡಿಯೊ ನಿರ್ಮಾಣದಲ್ಲಿ ಯಾವುದೇ ಸಕ್ರಿಯ ಪಾತ್ರವನ್ನು ನಾನು ಹೊಂದಿಲ್ಲ ಎಂದು ಸಮರ್ಥಿಸಿಕೊಂಡಿದ್ದರು. ನಂತರ ಕೋರ್ಟ್ ರಾಜ್ ಕುಂದ್ರಾ ಅವರಿಗೆ ಜಾಮೀನು ನೀಡಿತು.
ಈ ಸುದ್ದಿಯನ್ನೂ ಓದಿ:ಹಾಟ್‌ಶಾಟ್‌ಗಳ ಅಪ್ಲಿಕೇಶನ್ ಬಗ್ಗೆ ಮಾಹಿತಿ ಇಲ್ಲ, ರಾಜ್ ಕುಂದ್ರಾ ನಿರಪರಾಧಿ: ಶಿಲ್ಪಾ ಶೆಟ್ಟಿ