Friday, 16th May 2025

Rahul Gandhi: ಮನಮೋಹನ್‌ ಸಿಂಗ್‌ ನಿಧನದ ಶೋಕಾಚರಣೆ ಮಧ್ಯೆಯೇ ನ್ಯೂ ಇಯರ್‌ ಪಾರ್ಟಿಗೆ ವಿಯೆಟ್ನಾಂಗೆ ಹೊರಟ ರಾಗಾ; ಬಿಜೆಪಿ ಕಿಡಿ

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ ಸಿಂಗ್ (Manmohan Singh) ಅವರ ನಿಧನವನ್ನು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ತಮ್ಮ ರಾಜಕೀಯ ಅನುಕೂಲಕ್ಕೆ ಬಳಸಿಕೊಂಡರು. ಅಲ್ಲದೆ ಇಡೀ ದೇಶವೇ ಮನಮೋಹನ ಸಿಂಗ್ ಅವರ ಸಾವಿನ ಶೋಕಾರಚಣೆಯಲ್ಲಿರುವಾಗ ಹೊಸ ವರ್ಷಾಚರಣೆಗೆ ರಾಹುಲ್‌ ಗಾಂಧಿ ವಿಯೆಟ್ನಾಂಗೆ ತೆರೆಳಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.

ʼʼಮನಮೋಹನ್‌ ಸಿಂಗ್ ಅವರ ನಿಧನಕ್ಕೆ ದೇಶ ಶೋಕಾಚರಣೆ ನಡೆಸುತ್ತಿರುವಾಗ, ಹೊಸ ವರ್ಷಾಚರಣೆಗೆ ರಾಹುಲ್ ಗಾಂಧಿ ವಿಯೆಟ್ನಾಂಗೆ ಹೊರಟಿದ್ದಾರೆ. ಡಾ. ಸಿಂಗ್ ಅವರ ಸಾವನ್ನು ರಾಹುಲ್ ಗಾಂಧಿ ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಂಡಿದ್ದಾರೆ. ಇದು ಸಿಂಗ್ ಬಗ್ಗೆ ಅವರಿಗಿರುವ ತಿರಸ್ಕಾರದ ಪ್ರತೀಕʼʼ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ತಮ್ಮ ಎಕ್ಸ್‌ ಪೋಸ್ಟ್‌ನಲ್ಲಿ ವಾಗ್ದಾಳಿ ನಡೆಸಿದ್ದಾರೆ.

ʼʼಗಾಂಧಿಗಳು ಹಾಗೂ ಕಾಂಗ್ರೆಸ್ ನಾಯಕರು ಸಿಖ್ ದ್ವೇಷಿಗಳು. ಇಂದಿರಾ ಗಾಂಧಿ ದರ್ಬಾರ್ ಸಾಹಿಬ್ ಅನ್ನು ಅಪವಿತ್ರಗೊಳಿಸಿದ್ದನ್ನು ಮರೆಯಬಾರದುʼʼ ಎಂದು ಮಾಳವೀಯ ಬರೆದುಕೊಂಡಿದ್ದಾರೆ. ಬಿಜೆಪಿ ವಕ್ತಾರ ಶೆಹಜಾದ್ ಪೂನವಲ್ಲ ಕೂಡ ಕಾಂಗ್ರೆಸ್‌ ವಿರುದ್ಧ ಕಿಡಿ ಕಾರಿದ್ದು,”ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ ಹಿನ್ನೆಲೆಯಲ್ಲಿ ಇಡೀ ದೇಶ ಶೋಕದಲ್ಲಿದೆ. ದೇಶದಲ್ಲಿ 7 ದಿನಗಳ ಶೋಕಾಚರಣೆ ಇದ್ದಾಗಲೂ ಹೊಸ ವರ್ಷ ಆಚರಣೆಗೆ ರಾಹುಲ್ ಗಾಂಧಿ ವಿದೇಶಕ್ಕೆ ಹಾರುತ್ತಿದ್ದಾರೆ. ಕಾಂಗ್ರೆಸ್‌ನ ಯಾರೊಬ್ಬರೂ ಮನಮೋಹನ್‌ ಸಿಂಗ್ ಚಿತಾಭಸ್ಮವನ್ನು ಸಂಗ್ರಹಿಸಲು ಹೋಗಲಿಲ್ಲ. ಇದು ಅವರ ನಿಜವಾದ ಮುಖ” ಎಂದಿದ್ದಾರೆ. 

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಮಣಿಕಂ ಟಾಗೋರ್, ʼʼತಿರುಚುವ ರಾಜಕೀಯವನ್ನು ಸಂಘಿಗಳು ಯಾವಾಗ ನಿಲ್ಲಿಸುತ್ತಾರೆ?ʼ’ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಅಲ್ಲದೆ, ʼʼಯುಮುನಾ ನದಿ ದಡದಲ್ಲಿ ಡಾ. ಸಿಂಗ್ ಅವರ ಅಂತ್ಯಸಂಸ್ಕಾರ ಮಾಡುವುದಕ್ಕೆ ಪ್ರಧಾನಿ ಮೋದಿ ನಿರಾಕರಿಸಿದರು. ಅಷ್ಟೇ ಅಲ್ಲದೆ, ಸಚಿವರು ಸಿಂಗ್ ಕುಟುಂಬವನ್ನು ನಾಚಿಕೆಯಿಲ್ಲದೆ ಮೂಲೆಗುಂಪು ಮಾಡಿದರು. ರಾಹುಲ್ ಗಾಂಧಿ ಖಾಸಗಿಯಾಗಿ ಪ್ರಯಾಣಿಸಿದರೆ ನಿಮಗೇನು ಸಮಸ್ಯೆ? ಹೊಸ ವರ್ಷದಲ್ಲಿಯಾದರೂ ಸರಿಯಾಗಿ’ʼ ಎಂದು ತಿರುಗೇಟು ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ:Viral News: ಕೊರಿಯಾ ಪಾಪ್‌ ತಾರೆಯರ ಭೇಟಿಗೆ ಹಣ ಹೊಂದಿಸಲು ಖತರ್ನಾಕ್ ಬಾಲಕಿಯರು ಮಾಡಿದ್ದೇನು ಗೊತ್ತಾ? ಪೊಲೀಸರೇ ಶಾಕ್‌