Sunday, 11th May 2025

Rahul Gandhi: ಬಿಜೆಪಿ ಸರ್ಕಾರ ಅದಾನಿಯನ್ನು ರಕ್ಷಿಸುತ್ತಿದೆ; ಪ್ರಧಾನಿ ಮೋದಿ ವಿರುದ್ಧ ರಾಹುಲ್‌ ಮತ್ತೊಮ್ಮೆ ವಾಗ್ದಾಳಿ

Rahul Gandhi

ತಿರುವನಂತಪುರಂ: ಇತ್ತೀಚೆಗೆ ಗೌತಮ್‌ ಅದಾನಿ (Gautam Adani) ವಿರುದ್ಧ ಕೇಳಿ ಬಂದಿರುವ ಬಹುಕೋಟಿ ರೂ. ಲಂಚ ಆರೋಪಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ (Rahul Gandhi) ಪ್ರತಿಕ್ರಿಯಿಸಿದ್ದು, ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಅದಾನಿಯನ್ನು ರಕ್ಷಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಕೇರಳದ ವಯನಾಡಿನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ʼʼನಾವು ಭಾವನೆಗಳು, ವಾತ್ಸಲ್ಯ, ಪ್ರೀತಿಯ ಬಗ್ಗೆ ಮಾತನಾಡುತ್ತಿದ್ದೇವೆ. ಅವರು (ಮೋದಿ) ದ್ವೇಷ, ಕೋಪ, ವಿಭಜನೆ, ಹಿಂಸೆಯ ಬಗ್ಗೆ ಮಾತನಾಡುತ್ತಾರೆ. ಎಲ್ಲ ಜನರನ್ನು ಸಮಾನವಾಗಿ ಪರಿಗಣಿಸಬೇಕೆಂದು ಸಂವಿಧಾನವು ಹೇಳುತ್ತದೆ. ಆದರೆ ನಮ್ಮ ಪ್ರಧಾನಿ ಅದಾನಿಯನ್ನು ಪ್ರತಿಯೊಬ್ಬ ಭಾರತೀಯರಿಗಿಂತ ವಿಭಿನ್ನವಾಗಿ ಪರಿಗಣಿಸುತ್ತಾರೆʼʼ ಎಂದು ಹೇಳಿದ್ದಾರೆ.

ʼʼಅದಾನಿ ಮೇಲೆ ಅಮೆರಿಕ ದೋಷಾರೋಪಣೆ ಮಾಡಿ ಕ್ರಿಮಿನಲ್ ಎಂದು ಕರೆದರೂ ಪರವಾಗಿಲ್ಲ. ಭಾರತದಲ್ಲಿ ನಾವು ಅವರ ಮೇಲೆ ದೋಷಾರೋಪಣೆ ಮಾಡುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳುತ್ತಾರೆʼʼ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ. ʼʼಇಡೀ ಬಿಜೆಪಿ ಸರ್ಕಾರ ಅದಾನಿ ರಕ್ಷಣೆಗೆ ನಿಂತಿದೆ. ಅವರ ಬಳಿ ಅಧಿಕಾರವಿದೆ, ಮಾಧ್ಯಮಗಳಿವೆ, ಹಣ, ಗುಪ್ತಚರ ಸಂಸ್ಥೆಗಳು, ಸಿಬಿಐ, ಇಡಿ, ಐಟಿ ಎಲ್ಲ ಇಲಾಖೆಗಳೂ ಕೈವಶವಾಗಿವೆ. ನಮ್ಮ ಬಳಿ ಅದ್ಯಾವುದೂ ಇಲ್ಲ. ಆದರೆ ನಮ್ಮ ಬಳಿ ಜನರ ಭಾವನೆಗಳಿವೆ. ನಾವು ಬಿಜೆಪಿಯ ಸಿದ್ಧಾಂತವನ್ನು ಸೋಲಿಸುತ್ತೇವೆ ಎಂದು ನನಗೆ ವಿಶ್ವಾಸವಿದೆʼʼ ಎಂದು ಅವರು ತಿಳಿಸಿದ್ದಾರೆ.

ತಮ್ಮ ಭಾಷಣದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ವಯನಾಡಿನ ನೂತನ ಸಂಸದೆ ಎಂದು ಪರಿಚಯಿಸಿದ ರಾಹುಲ್‌, ʼʼನನ್ನ ಸಹೋದರಿ ಮೊದಲ ಬಾರಿಗೆ ಸಂಸತ್ತಿಗೆ ಬಂದಾಗ ನಾನು ಸಂಸತ್ತಿನಲ್ಲಿದ್ದೆʼʼ ಎಂದು ತಮ್ಮ ಖುಷಿಯನ್ನು ಹಂಚಿಕೊಂಡರು. ʼʼಐದು ವರ್ಷಗಳ ಹಿಂದೆ, ನಾನು ಸಂಸತ್ತಿನ ಭವನದಲ್ಲಿ ನನ್ನ ಪ್ರಮಾಣ ವಚನ ಸ್ವೀಕರಿಸಿದೆ. ಈಗ ನಾವಿಬ್ಬರೂ ಪ್ರಮಾಣ ವಚನ ಸ್ವೀಕರಿಸಿದ್ದೇವೆ. ಅಭಿವೃದ್ದಿಗಾಗಿ ನಾವು ಶ್ರಮ ವಹಿಸುತ್ತೇವೆ ಎಂದು ಪ್ರತಿಜ್ಞೆ ಮಾಡುತ್ತೇವೆʼʼ ಎಂದು ಹೇಳಿದ್ದಾರೆ. ಸಂಸದೆಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಆಗಮಿಸಿದ ಪ್ರಿಯಾಂಕಾ ಗಾಂಧಿ ಅವರಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ.

ಈ ಸುದ್ದಿಯನ್ನೂ ಓದಿ: Rahul Gandhi: ರಾಹುಲ್‌ ಗಾಂಧಿ ವಿರುದ್ಧ ʻರಾಯಲ್‌ʼ ಲೀಡರ್ಸ್‌ ರೆಬೆಲ್‌- ರಾಜಮನೆತನಗಳ ಬಗ್ಗೆ ಕಾಂಗ್ರೆಸ್‌ ನಾಯಕ ಹೇಳಿದ್ದೇನು?