Sunday, 11th May 2025

Pushpa 2: ‘ಪುಷ್ಪ 2’ ಚಿತ್ರದ ಪ್ರೀಮಿಯರ್‌ ಶೋ ವೇಳೆ ದುರಂತ; ಕಾಲ್ತುಳಿತಕ್ಕೆ ಮಹಿಳೆ ಬಲಿ, ಬಾಲಕನ ಸ್ಥಿತಿ ಗಂಭೀರ

Pushpa 2

ಹೈದರಾಬಾದ್‌: ಈ ವರ್ಷದ ಬಹು ನಿರೀಕ್ಷಿತ ಟಾಲಿವುಡ್‌, ಪ್ಯಾನ್‌ ಇಂಡಿಯಾ ಚಿತ್ರ ʼಪುಷ್ಪ 2ʼ (Pushpa 2) ಕೊನೆಗೂ ರಿಲೀಸ್‌ ಆಗಿದೆ. ಟಾಲಿವುಡ್‌ ಸೂಪರ್‌ ಸ್ಟಾರ್‌ ಅಲ್ಲು ಅರ್ಜುನ್‌ (Allu Arjun) ಮತ್ತು ಕನ್ನಡತಿ ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ಈ ಚಿತ್ರವನ್ನು ಪ್ರೇಕ್ಷಕರು ಎರಡೂ ಕೈ ಚಾಚಿ ಸ್ವಗತಿಸಿದ್ದಾರೆ. ಎಲ್ಲೆಡೆ ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿದೆ. ಈ ಮಧ್ಯೆ ಬಹುದೊಡ್ಡ ದುರಂತವೊಂದು ಸಂಭವಿಸಿದ್ದು, ಹೈದರಾಬಾದ್‌ನ ಥಿಯೇಟರ್‌ ಹೊರಗೆ ಬುಧವಾರ (ಡಿ. 4) ತಡರಾತ್ರಿ ಕಾಲ್ತುಳಿತ ಸಂಭವಿಸಿ 39 ವರ್ಷದ ಮಹಿಳೆಯೊಬ್ಬರು ಮೃತಪಟ್ಟು, ಬಾಲಕನೊಬ್ಬನ ಸ್ಥಿತಿ ಗಂಭೀರವಾಗಿದೆ.

ಗುರುವಾರ (ಡಿ. 5) ʼಪುಷ್ಪ 2ʼ ರಿಲೀಸ್‌ ಆಗಿದ್ದು, ಮುನ್ನಾ ದಿನ ಅಂದರೆ ಬುಧವಾರ ಚಿತ್ರದ ಪ್ರೀಮಿಯರ್‌ ಶೋ ಏರ್ಪಡಿಸಲಾಗಿತ್ತು. ಈ ವೇಳೆ ಕಾಲ್ತುಳಿತ ಸಂಭವಿಸಿ ಮಹಿಳೆಯೊಬ್ಬರು ಅಸುನೀಗಿದ್ದಾರೆ. ಮೃತ ಮಹಿಳೆಯನ್ನು ರೇವತಿ ಎಂದು ಗುರುತಿಸಲಾಗಿದೆ.

ಘಟನೆ ವಿವರ

ಹೈದರಾಬಾದ್‌ನ ಚಿಕ್ಕಡ್‌ಪಲ್ಲಿಯ ಥಿಯೇಟರ್‌ನಲ್ಲಿ ಬುಧವಾರ ರಾತ್ರಿ ʼಪುಷ್ಪ 2ʼ ಚಿತ್ರದ ಪ್ರೀಮಿಯರ್‌ ಶೋ ಏರ್ಪಡಿಸಲಾಗಿತ್ತು. ರೇವತಿ ತಮ್ಮ ಪತಿ ಮತ್ತು ಮಗನ ಜತೆಗೆ ಚಿತ್ರ ವೀಕ್ಷಿಸಲು ಥಿಯೇಟರ್‌ಗೆ ಆಗಮಿಸಿದ್ದರು. ಈ ವೇಳೆ ಸ್ಟಾರ್‌ಗಳೂ ಥಿಯೇಟರ್‌ಗೆ ಲಗ್ಗೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಜನರ ನೂಕು ನುಗ್ಗಾಟ ಸಂಭಿಸಿದೆ. ಸೆಲೆಬ್ರಿಟಿಗಳನ್ನು ಭೇಟಿಯಾಗುವ ಸಲುವಾಗಿ ಅಭಿಮಾನಿಗಳು ಒಳಗೆ ನುಗ್ಗಿದ್ದಾರೆ. ಆಗ ಥಿಯೇಟರ್‌ನಿಂದ ಹೊರಬಂದ ರೇವತಿ ಕೆಳಗೆ ಬಿದ್ದಿದ್ದಾರೆ. ಜತೆಗೆ ತಳ್ಳಾಟದಲ್ಲಿ ಅವರ ಮಗ ಶ್ರೀ ತೇಜಾನೂ ಗಾಯಗೊಂಡಿದ್ದಾನೆ.

ತಕ್ಷಣ ಶ್ರೀ ತೇಜಾನನ್ನು ಆಂಬ್ಯುಲೆನ್ಸ್‌ನಲ್ಲಿ ಹತ್ತಿರದ ಆಸ್ಪತ್ರೆಗೆ ಕಳುಹಿಸಲಾಗಿದೆ. ಸದ್ಯ ಆತನ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಥಿಯೇಟರ್‌ಗೆ ಹೋಗುವ ರಸ್ತೆಗಳು ಮಧ್ಯರಾತ್ರಿಯವರೆಗೂ ಸಾವಿರಾರು ಅಭಿಮಾನಿಗಳಿಂದ ಗಿಜಿಗುಡುತ್ತಿದ್ದವು. ಹೀಗಾಗಿ ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್‌ ಮಾಡಬೇಕಾಯಿತು ಎಂದು ಮೂಲಗಳು ತಿಳಿಸಿವೆ.

ಸುಕುಮಾರ್‌ ನಿರ್ದೇಶನದ ಈ ಸಿನಿಮಾ ʼಪುಷ್ಪʼ ಚಿತ್ರದ ಸೀಕ್ವೆಲ್‌ ಆಗಿದ್ದು ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ ಜತೆಗೆ ಫಹದ್‌ ಫಾಸಿಲ್‌, ಸುನೀಲ್‌, ಡಾಲಿ ಧನಂಜಯ್‌, ಅನಸೂಯ ಅವರ ಪಾತ್ರಗಳೂ ಮುಂದುವರಿದಿದೆ. ದೇವಿಶ್ರೀ ಪ್ರಸಾದ್‌ ಸಂಗೀತ ಸಂಯೋಜಿಸಿರುವ ಹಾಡುಗಳು ಈಗಾಗಲೇ ಹಿಟ್‌‌ ಲಿಸ್ಟ್‌ ಸೇರಿವೆ. ಕನ್ನಡತಿ ಶ್ರೀಲೀಲಾ ಐಟಂ ಸಾಂಗ್‌ಗೆ ಹೆಜ್ಜೆ ಹಾಕಿದ್ದಾರೆ.

ಈ ಸುದ್ದಿಯನ್ನೂ ಓದಿ: Pushpa 2: ಪುಷ್ಪ-2 ರಿಲೀಸ್‌ನಿಂದ ಪಿವಿಆರ್‌ ಐನಾಕ್ಸ್‌ ಷೇರು ಹೈ ಜಂಪ್?‌