Thursday, 15th May 2025

Pushpa 2 : ʼಪುಷ್ಪ 2ʼ ಗೆ ಸೆನ್ಸಾರ್‌ ಬೋರ್ಡ್‌ನಿಂದ ಆಕ್ಷೇಪಣೆ – ಹಿಂಸಾತ್ಮಕ ದೃಶ್ಯಗಳಿಗೆ ಕತ್ತರಿ!

ಹೈದರಾಬಾದ್: ತೆಲುಗು ಚಿತ್ರರಂಗದ ಖ್ಯಾತ ನಟ ಅಲ್ಲು ಅರ್ಜುನ್‍ (Allu Arjun) ಅಭಿನಯದ ‘ಪುಷ್ಪ 2 – ದಿ ರೂಲ್‍’ ಚಿತ್ರದ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಡಿಸೆಂಬರ್ 05 ರಂದು ಈ ಸಿನಿಮಾ ಜಗತ್ತಿನಾದ್ಯಂತ ತೆರೆ ಮೇಲೆ ಕಾಣಿಸಿಕೊಳ್ಳಲು ಸಜ್ಜಾಗಿದೆ. ಇದರ ನಡುವೆ ಈ ಚಿತ್ರವು ಗುರುವಾರ(ನ.28) ಸಂಜೆ ಸೆನ್ಸಾರ್ ಆಗಿದೆ. ಜತೆಗೆ ಈ ಚಿತ್ರದ ರನ್‌ ಟೈಮ್‌ (Run Time) ಸಹ ಹೊರಬಿದ್ದಿದೆ.(Pushpa 2)

‘ಪುಷ್ಪ 2’ ಚಿತ್ರದ ತೆಲುಗು ಅವತರಣಿಕೆಯು ಗುರುವಾರ ಸೆನ್ಸಾರ್ ಆಗಿದ್ದು, ಚಿತ್ರವು ಮೂರು ತಾಸು 20 ನಿಮಿಷ ಮತ್ತು 38 ಸಕೆಂಡ್‍ಗಳ (200.38 ನಿಮಿಷ) ಅವಧಿಯದ್ದಾಗಿದೆ ಎಂದು ಹೇಳಲಾಗಿದೆ. 2021ರಲ್ಲಿ ಬಿಡುಗಡೆಯಾದ ‘ಪುಷ್ಪ 1’ ಚಿತ್ರವು 179 ನಿಮಿಷಗಳ ಅವಧಿಯದ್ದಾಗಿತ್ತು. ಅದಕ್ಕೆ ಹೋಲಿಸಿದರೆ, ಈಗ ಎರಡನೆಯ ಭಾಗವು 21 ನಿಮಿಷಗಳು ಹೆಚ್ಚುವರಿಯಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಇನ್ನು ಸುಕುಮಾರ್ ನಿರ್ದೇಶನದ ‘ಪುಷ್ಪ 2’ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ‘ಯು/ಎ’ ಪ್ರಮಾಣಪತ್ರವನ್ನು ನೀಡಿದೆ. ಕೆಲವು ಅಶ್ಲೀಲ ಪದಗಳನ್ನು ಮ್ಯೂಟ್‍ ಮಾಡುವುದರ ಜೊತೆಗೆ, ಒಂದು ದೃಶ್ಯವನ್ನು ಚಿತ್ರದಿಂದ ತೆಗೆದು ಹಾಕುವಂತೆ ಹೇಳಲಾಗಿದೆ. ಚಿತ್ರದಲ್ಲಿ ಕ್ರೌರ್ಯ ಸ್ವಲ್ಪ ಜಾಸ್ತಿಯಿದೆ ಎಂದು ಹೇಳಲಾಗಿದ್ದು, ಸೆನ್ಸಾರ್ ಮಂಡಳಿ ಸೂಚಿಸಿದ ಬದಲಾವಣೆಗಳನ್ನು‌ ಚಿತ್ರತಂಡ ಮಾಡಿದ ನಂತರ ಚಿತ್ರಕ್ಕೆ ಪ್ರಮಾಣ ಪತ್ರವನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ.

ʼಪುಷ್ಪ 2: ದಿ ರೂಲ್‌ʼ ಚಿತ್ರದ ತಯಾರಕರಿಗೆ ಸೆನ್ಸಾರ್‌ ಬೋರ್ಡ್ ಮೂರು ಸ್ಥಳಗಳಿಂದ ‘r***i’ ಪದವನ್ನು ಅಳಿಸಲು ಹೇಳಿದೆ. ಇದಲ್ಲದೇ ದೇಂಗುದ್ದಿ(‌Denguddi), ವೆಂಕಟೇಶ್ವರ (Venkateshwar) ಎಂಬ ಪದಗಳನ್ನೂ ತೆಗೆದು ಹಾಕಲಾಗಿದೆ. ಸೆನ್ಸಾರ್ ಮಂಡಳಿಯು ಚಲನಚಿತ್ರದಿಂದ ಕೆಲವು ವಿಪರೀತ ಕ್ರೌರ್ಯದ ದೃಶ್ಯಗಳನ್ನು ತೆಗೆದುಹಾಕಿದೆ. ಚಿತ್ರದ ಒಂದು ದೃಶ್ಯದಲ್ಲಿ ತುಂಡರಿಸಿದ ಕಾಲು ಒಂದು ಕಡೆಗೆ ಹಾರುತ್ತಿತ್ತು. ಇದನ್ನು CBFC ತೆಗೆದುಹಾಕುವಂತೆ ಹೇಳಿದೆ. ಮತ್ತೊಂದು ದೃಶ್ಯದಲ್ಲಿ ಚಿತ್ರದ ನಟ ಅಲ್ಲು ಅರ್ಜುನ್ ಒಬ್ಬ ವ್ಯಕ್ತಿಯ ತುಂಡರಿಸಿದ ತೋಳನ್ನು ಹಿಡಿದಿದ್ದರು. ಸೆನ್ಸಾರ್ ಮಂಡಳಿಯು ಪರದೆಯ ಮೇಲಿನ ಹಿಂಸಾಚಾರದ ಮಟ್ಟವನ್ನು ಕಡಿಮೆ ಮಾಡಲು ನಾಯಕ ನಟನನ್ನು ಜೂಮ್ ಮಾಡಿ ತೋರಿಸುವಂತೆ ಹೇಳಿದೆ. ಸೆನ್ಸಾರ್‌ ಹೇಳಿದ ಬದಲಾವಣೆಗಳನ್ನು ಚಿತ್ರತಂಡ ಮಾಡಿದ್ದು, ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು (CBFC) U/A ಪ್ರಮಾಣಪತ್ರವನ್ನು ನೀಡಿದೆ.

ಇನ್ನು ಸಿನಿಮಾ ರಿಲೀಸ್‌ ಗೂ ಮುನ್ನವೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸಿದೆ. ಅಭಿಮಾನಿಗಳು ತನ್ನ ನಾಯಕನ ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ಶ್ರೀ ಲೀಲಾ ಸೊಂಟ ಬಳುಕಿಸಿರುವ ʼಕಿಸ್ಸಿಕ್‌ʼ ಸಾಂಗ್‌ ಯೂಟ್ಯೂಬ್‌ ನಲ್ಲಿ ವೈರಲ್‌ ಆಗಿದೆ. ಪುಷ್ಪ-3 ಕೂಡ ಬರುವ ಸಾಧ್ಯತೆಯಿದ್ದು, ಅಭಿಮಾನಿಗಳು ಫುಲ್‌ ಥ್ರಿಲ್‌ ಆಗಿದ್ದಾರೆ.

ಇಡೀ ಸಿನಿಮಾದ ಕತೆಯನ್ನು ಕಳ್ಳ ಸಾಗಾಣಿಕೆಯ ಸುತ್ತ ಹೆಣೆಯಲಾಗಿದ್ದು, ಮೈತ್ರಿ ಮೂವಿ ಮೇಕರ್ಸ್ ಮತ್ತು ಸುಕುಮಾರ್ ರೈಟಿಂಗ್ಸ್ ಚಿತ್ರವನ್ನು ನಿರ್ಮಿಸಿದ್ದು, ಟಿ-ಸೀರೀಸ್‌ನಲ್ಲಿ(T-Series) ಹಾಡುಗಳಿವೆ. ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ, ಶ್ರೀಲೀಲಾ, ಡಾಲಿ ಧನಂಜಯ್‌, ಫಯಾದ್ ಫಾಸಿಲ್, ಅನುಸೂಯ ಸೇರಿದಂತೆ‌ ಇನ್ನು ಹಲವರು ತಾರಾಗಣದಲ್ಲಿದ್ದಾರೆ. ಚಿತ್ರವು ಡಿಸೆಂಬರ್ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಈ ಸುದ್ದಿಯನ್ನೂ ಓದಿ: SS Rajamouli: ಪುಷ್ಪಾ2 ಟ್ರೈಲರ್‌ಗೆ ರಾಜಮೌಳಿ ಫುಲ್‌ ಫಿದಾ? ಫಸ್ಟ್‌ ರಿಯಾಕ್ಷನ್‌ ಹೇಗಿತ್ತು?