Monday, 12th May 2025

ಪುಣೆ ಮಾರ್ಕೆಟ್ ಹೋಟೆಲ್​ನಲ್ಲಿ ಅಗ್ನಿ ಅವಘಡ

ಪುಣೆ: ಪುಣೆಯ ಮಾರುಕಟ್ಟೆ ಆವರಣದಲ್ಲಿ ಮತ್ತೊಮ್ಮೆ ಅಗ್ನಿ ಅವಘಡ ನಡೆದಿದೆ. ಇಬ್ಬರು ಕಾರ್ಮಿಕರು ಸಾವನ್ನಪ್ಪಿ, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿ ಯಾಗಿದ್ಧಾರೆ.

ಅಗ್ನಿಶಾಮಕ ಸಿಬ್ಬಂದಿ ಹೋಟೆಲ್‌ನಿಂದ ಒಬ್ಬ ಕಾರ್ಮಿಕನನ್ನು ರಕ್ಷಿಸಿ ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಘಟನೆ ನಡೆದಾಗ ಹೋಟೆಲ್‌ನಲ್ಲಿ ಒಟ್ಟು ಮೂವರು ಕಾರ್ಮಿಕರು ಇದ್ದರು. ಅವರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ.

ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದು, ಒಬ್ಬ ಕಾರ್ಮಿಕ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದು ಬಂದಿದೆ. ಕೆಲ ದಿನಗಳ ಹಿಂದೆ ಪುಣೆಯ ಟಿಂಬರ್ ಮಾರ್ಕೆಟ್​​ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿತ್ತು. ಘಟನೆಯಲ್ಲಿ ಹಲವು ಅಂಗಡಿಗಳಿಗೆ ಹಾನಿಯಾಗಿತ್ತು.

ಮುಂಬೈನ ಝವೇರಿ ಬಜಾರ್ ಪ್ರದೇಶದಲ್ಲಿರುವ ಐದು ಅಂತಸ್ತಿನ ಕಟ್ಟಡದಲ್ಲಿ ಇತ್ತೀಚೆಗೆ ಭಾರಿ ಅಗ್ನಿ ಅವಘಡ ಸಂಭವಿಸಿತ್ತು. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ 12ಕ್ಕೂ ಹೆಚ್ಚು ಅಗ್ನಿಶಾಮಕ ದಳದ ವಾಹನಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದವು. ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕಟ್ಟಡದಲ್ಲಿ ಸಿಲುಕಿದ್ದ 50 ರಿಂದ 60 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿತ್ತು.