Saturday, 10th May 2025

Pranab Mukherjee: ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಸ್ಮಾರಕ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ಸ್ಥಳ ಮಂಜೂರು

ಹೊಸದಿಲ್ಲಿ: ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ (Pranab Mukherjee) ಅವರ ಸ್ಮಾರಕ ನಿರ್ಮಿಸಲು ರಾಷ್ಟ್ರೀಯ ಸ್ಮೃತಿ ಸಂಕೀರ್ಣದೊಳಗೆ (ರಾಜ್‌ಘಾಟ್‌ ಆವರಣದ ಒಂದು ಭಾಗ) ಸ್ಥಳವೊಂದನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದೆ.

ಈ ವಿಚಾರವನ್ನು ಪ್ರಣಬ್ ಮುಖರ್ಜಿ ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ʼʼಬಾಬಾ (ಪ್ರಣಬ್ ಮುಖರ್ಜಿ) ಅವರ ಸ್ಮಾರಕವನ್ನು ನಿರ್ಮಿಸಲು ಸ್ಥಳ ಮಂಜೂರು ಮಾಡಿರುವ ಸರ್ಕಾರದ ನಿರ್ಧಾರಕ್ಕಾಗಿ ನನ್ನ ಧನ್ಯವಾದಗಳು. ನಾವು ಮನವಿ ಮಾಡದಿದ್ದರೂ ಸ್ಥಳ ಮಂಜೂರು ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಈ ಅನಿರೀಕ್ಷಿತ ನಡೆಯಿಂದ ಪ್ರಭಾವಿತಳಾಗಿದ್ದೇನೆ” ಎಂದು ಬರೆದುಕೊಂಡಿದ್ದಾರೆ.

“ರಾಜ್ಯ ಗೌರವಗಳನ್ನು ನಾವು ಕೇಳಬಾರದು, ಅದನ್ನು ನೀಡಬೇಕು ಎಂದು ಬಾಬಾ ಹೇಳುತ್ತಿದ್ದರು. ಬಾಬಾ ಅವರ ಸ್ಮರಣೆಯನ್ನು ಗೌರವಿಸಲು ಪ್ರಧಾನಿ ಮೋದಿ ಇದನ್ನು ಮಾಡಿದ್ದಕ್ಕಾಗಿ ನಾನು ಕೃತಜ್ಞಳಾಗಿದ್ದೇನೆ. ಪ್ರಣಬ್‌ ಮುಖರ್ಜಿ ಅವರ ಮಗಳಾಗಿ ನನ್ನ ಸಂತೋಷವನ್ನು ವ್ಯಕ್ತಪಡಿಸಲು ಪದಗಳು ಸಾಕಾಗುತ್ತಿಲ್ಲ” ಎಂದು ಶರ್ಮಿಷ್ಠಾ ಮುಖರ್ಜಿ ವಿವರಿಸಿದ್ದಾರೆ.

ದೇಶಕ್ಕಾಗಿ ಅಪಾರ ಕೊಡುಗೆ ಸಲ್ಲಿಸಿದ ಪ್ರಣಬ್‌ ಅವರ ಸ್ಮರಣಾರ್ಥ ರಾಜ್‌ಘಾಟ್‌ನಲ್ಲಿ ಸ್ಮಾರಕ ತಲೆ ಎತ್ತಲಿದೆ. ಮಹಾತ್ಮ ಗಾಂಧಿ ಅವರ ಸಮಾಧಿಯ ಸ್ಥಳವಾದ ರಾಜ್‌ಘಾಟ್‌ ಐತಿಹಾಸಿಕವಾಗಿ ಬಹಳ ಪ್ರಾಮುಖ್ಯತೆ ಹೊಂದಿದೆ. ಭಾರತದ 13ನೇ ರಾಷ್ಟ್ರಪತಿಗಳಾಗಿದ್ದ ಪ್ರಣಬ್‌ ಮುಖರ್ಜಿ ಅವರು 2020ರ ಆಗಸ್ಟ್‌ 31ರಂದು ತಮ್ಮ 85ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದರು.

ಕಾಂಗ್ರೆಸ್‌ ನಡೆಯನ್ನು ಟೀಕಿಸಿದ್ದ ಶರ್ಮಿಷ್ಠಾ ಮುಖರ್ಜಿ

ಕೆಲವು ದಿನಗಳ ಹಿಂದೆ ಶರ್ಮಿಷ್ಠಾ ಮುಖರ್ಜಿ ಅವರು, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗೆ ಪ್ರತ್ಯೇಕ ಸ್ಮಾರಕವನ್ನು ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಲ್ಲಿಸಿರುವ ಪ್ರಸ್ತಾಪವನ್ನು ಟೀಕಿಸಿದ್ದರು. ಈ ಬಗ್ಗೆ ಎಕ್ಸ್‌ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದ ಅವರು ತಮ್ಮ ತಂದೆ ಮತ್ತು ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರು 2020ರ ಆಗಸ್ಟ್‌ನಲ್ಲಿ ನಿಧನರಾದಾಗ, ಕಾಂಗ್ರೆಸ್ ನಾಯಕತ್ವವು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (CWC) ಸಂತಾಪ ಸೂಚಕ ಸಭೆಯನ್ನು ಕರೆಯಲು ಸಹ ಚಿಂತಿಸಲಿಲ್ಲ ಎಂದು ಹೇಳಿದ್ದರು. ʼʼಈ ಹಿಂದೆ ಮೃತಪಟ್ಟಿದ್ದ ಯಾವ ರಾಷ್ಟ್ರಪತಿಗಳಿಗೂ ಸಭೆ ನಡೆಸಿಲ್ಲ ಎಂದು ಹಿರಿಯ ನಾಯಕರೊಬ್ಬರು ನನಗೆ ತಿಳಿಸಿದ್ದರುʼʼ ಎಂಬುದಾಗಿ ಹೇಳಿದ್ದರು.

ʼʼಇನ್ನೊಬ್ಬ ಮಾಜಿ ರಾಷ್ಟ್ರಪತಿ ಕೆ.ಆರ್.ನಾರಾಯಣನ್ ಅವರ ನಿಧನದ ನಂತರ, ಸಿಡಬ್ಲ್ಯುಸಿ ಸಭೆಯನ್ನು ಕರೆಯಲಾಯಿತು. ಬೇರೆ ಯಾರೂ ಅಲ್ಲ ಪ್ರಣಬ್ ಮುಖರ್ಜಿ ಅವರಿಂದ ಸಂತಾಪ ಸಂದೇಶವನ್ನು ರಚಿಸಲಾಯಿತು ಎನ್ನುವುದನ್ನು ಅವರ ಡೈರಿಗಳಿಂದ ತಿಳಿದುಕೊಂಡಿದ್ದೇನೆʼʼ ಎಂದು ಬರೆದುಕೊಂಡಿದ್ದರು. ಅಲ್ಲದೆ ಬಿಜೆಪಿಯ ಸಿ.ಆರ್. ಕೇಶವನ್ ಅವರ ಪೋಸ್ಟ್ ಅನ್ನು ಶರ್ಮಿಷ್ಠಾ ಮುಖರ್ಜಿ ಉಲ್ಲೇಖಿಸಿದ್ದರು. ಮುಖರ್ಜಿ ಅವರು ʼಗಾಂಧಿʼ ಕುಟುಂಬದ ಸದಸ್ಯರಲ್ಲ ಎಂಬ ಕಾರಣಕ್ಕಾಗಿ ಕಾಂಗ್ರೆಸ್ ಅವರನ್ನು ಕಡೆಗಣಿಸಿದೆ ಎಂದು ಆರೋಪಿಸಿದ್ದರು. ಇದು ದೇಶಾದ್ಯಂತ ವ್ಯಾಪಕ ಚರ್ಚೆ ಹುಟ್ಟು ಹಾಕಿತ್ತು.

ಈ ಸುದ್ದಿಯನ್ನೂ ಓದಿ: Sharmistha Mukherjee : ಸ್ಮಾರಕ ನಿರ್ಮಾಣ ವಿಚಾರಕ್ಕೆ ಪ್ರಣಬ್ ಮುಖರ್ಜಿ ಪುತ್ರಿಯಿಂದ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ

Leave a Reply

Your email address will not be published. Required fields are marked *