Monday, 12th May 2025

ಕ್ಯಾಮೆರಾ, ಮೈಕ್ರೊಚಿಪ್‌ ಸಾಧನಗಳೊಂದಿಗೆ ಸಿಕ್ಕಿ ಬಿದ್ದ ಪಾರಿವಾಳ

ಪಾರಾದೀಪ್‌: ಕಾಲುಗಳಿಗೆ ಕ್ಯಾಮೆರಾ ಮತ್ತು ಮೈಕ್ರೊಚಿಪ್‌ ಸಾಧನಗಳನ್ನು ಜೋಡಿಸಲಾಗಿರುವ ಪಾರಿವಾಳ ವೊಂದು ಜಗತ್‌ಸಿಂಗ್‌ಪುರ ಜಿಲ್ಲೆಯ ಪಾರಾದೀಪ ಕರಾವಳಿಯಲ್ಲಿ ಮೀನುಗಾರಿಕೆ ದೋಣಿಗೆ ಸಿಕ್ಕಿಬಿದ್ದಿದೆ.

10 ದಿನಗಳ ಹಿಂದೆ ಕೊನಾರ್ಕ್‌ನಿಂದ ಸುಮಾರು 35 ಕಿ.ಮೀ. ದೂರದ ಕರಾವಳಿಯಲ್ಲಿ ಲಂಗರು ಹಾಕಿದ್ದ ಮೀನುಗಾರಿಕೆ ದೋಣಿಯಲ್ಲಿ ಈ ಪಾರಿವಾಳ ಸಿಕ್ಕಿಬಿದ್ದಿತ್ತು. ಈ ಪಾರಿವಾಳವನ್ನು ಬೇಹುಗಾರಿಕೆಗೆ ಬಳಸುತ್ತಿರಬಹು ದೆಂದು ಪೊಲೀಸರು ಶಂಕಿಸಿದ್ದಾರೆ.

ಸಮುದ್ರದಲ್ಲಿ ಮೀನುಗಾರಿಕೆ ನಡೆಸುವಾಗ ದೋಣಿ ಮೇಲೆ ಕುಳಿತಿದ್ದ ಈ ಪಾರಿವಾಳವನ್ನು ಬೆಹೆರಾ ಎಂಬುವವರು ಸೆರೆ ಹಿಡಿದಿದ್ದರು. ಪಾರಿವಾಳಕ್ಕೆ ಅಕ್ಕಿ ನುಚ್ಚನ್ನು ಆಹಾರವಾಗಿ ನೀಡಿ ಬದುಕಿಸಿದ್ದರು. ದೋಣಿ ದಡಕ್ಕೆ ಬಂದ ನಂತರ ಪಾರಿವಾಳವನ್ನು ಕರಾವಳಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

‘ಪಾರಿವಾಳದ ಕಾಲುಗಳಲ್ಲಿ ಕ್ಯಾಮೆರಾ ಮತ್ತು ಮೈಕ್ರೋಚಿಪ್ ಜೋಡಿಸಿರುವುದು ಕಂಡುಬಂದಿದೆ. ರೆಕ್ಕೆಗಳ ಮೇಲೆ ಗುರುತಿಸಲಾಗದ ಬರಹವಿದೆ. ಆದರೆ, ಇದು ಒಡಿಯಾ ಭಾಷೆ ಅಲ್ಲವೆಂಬುದು ಖಚಿತಪಟ್ಟಿದೆ. ಈ ಬರಹ ಗುರುತಿಸಲು ತಜ್ಞರ ನೆರವು ಪಡೆಯಲಾಗುವುದು. ಪಾರಿವಾಳವನ್ನು ಪಶುವೈದ್ಯರು ಪರೀಕ್ಷಿಸಲಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ.ಆರ್. ರಾಹುಲ್ ತಿಳಿಸಿದರು.