Saturday, 10th May 2025

Physical Abuse: ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ; 19 ವರ್ಷದ ಯುವತಿಯ ಬಂಧನ

Physical Abuse

ತಿರುವನಂತಪುರಂ: 19 ವರ್ಷದ ಮಹಿಳೆಯೊಬ್ಬಳು 16 ವರ್ಷದ ಅಪ್ರಾಪ್ತ ಬಾಲಕನನ್ನು ವಿವಿಧ ಕಡೆಗಳಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ ಆಘಾತಕಾರಿ ಘಟನೆ ಕೇರಳದಲ್ಲಿ ನಡೆದಿದೆ. ಸದ್ಯ ಆರೋಪಿ ಮಹಿಳೆಯನ್ನು ಬಂಧಿಸಲಾಗಿದೆ. ಬಂಧಿತ ಮಹಿಳೆಯನ್ನು ಕೊಲ್ಲಂ ಜಿಲ್ಲೆಯ ಛಾವರದ ಶ್ರೀಕುಟ್ಟಿ ಎಂದು ಗುರುತಿಸಲಾಗಿದೆ. ಆಲಪ್ಪುಳದ ವಲ್ಲಿಕುನ್ನಂ ಪೊಲೀಸರು ಆಕೆಯನ್ನು ಬಂಧಿಸಿ ಆಕೆಯ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (POCSO)ಯಡಿ ದೂರು ದಾಖಲಿಸಿದ್ದಾರೆ (Physical Abuse).

ಸಂತ್ರಸ್ತ ಬಾಲಕ ಮತ್ತು ಆರೋಪಿ ಮಹಿಳೆ ಸಂಬಂಧಿಕರು ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕನ ತಾಯಿಯ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಡಿ. 1ರಂದು ಬಾಲಕನನ್ನು ಕರೆದೊಯ್ದ ಆಕೆ ಅಂದಿನಿಂದ ಆತನ ಮೇಲೆ ದೌರ್ಜನ್ಯ ಎಸಗುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಪ್ರಕರಣ?

ಬಾಲಕನ ಮನೆಯಲ್ಲಿ ತಂಗಿದ್ದ ಶ್ರೀಕುಟ್ಟಿ ಬಳಿಕ ಆತನನ್ನು ಮೈಸೂರು, ಪಾಲಕ್ಕಾಡ್‌, ಪಳನಿ ಮತ್ತು ಮಲಪ್ಪುರಂಗಳಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಛಾವರ ಮೂಲದ ಶ್ರೀಕುಟ್ಟಿ ಸ್ಥಳೀಯ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಇದನ್ನು ತಿಳಿದ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು.

ಈ ಸಂಬಂಧವನ್ನು ಕಡಿದುಕೊಳ್ಳುವಂತೆ ಆಗ್ರಹಿಸಿದ್ದರು. ಆದರೆ ಶ್ರೀಕುಟ್ಟಿ ಇದನ್ನು ಕಿವಿಗೆ ಹಾಕಿಕೊಂಡಿರಲಿಲ್ಲ. ಯುವಕನೊಂದಿಗಿನ ಸಂಬಂಧವನ್ನು ಮುಂದುವರಿಸಿದ್ದಳು. ಇದರಿಂದ ಬೇಸೆತ್ತ ಆಕೆಯ ಪಾಲಕರು ಆಕೆಯನ್ನು ಆಳಪ್ಪುಳ ಜಿಲ್ಲೆಯ ಭರಣಿಕ್ಕಾವಿನಲ್ಲಿರುವ ತಮ್ಮ ಸಂಬಂಧಿಕರಾದ ಸಂತ್ರಸ್ತ ಬಾಲಕನ ಮನೆಯಲ್ಲಿ ಇರಿಸಿದ್ದರು. ಅವರ ಮನೆಯಲ್ಲಿ ತಂಗಿದ್ದ ಶ್ರೀಕುಟ್ಟಿ ಕ್ರಮೇಣ ಬಾಲಕನ ಸ್ನೇಹ ಸಂಪಾದಿಸಿ ಡಿ. 1ರಂದು ಆತನನ್ನು ಹೊರಗಡೆ ಕರೆದೊಯ್ದಿದ್ದಳು. ಬಳಿಕ ವಿವಿಧ ಸ್ಥಳಗಿಳಿಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾಳೆ ಎಂದು ಬಾಲಕ ತಿಳಿಸಿದ್ದಾನೆ. ಡಿ. 26ರಂದು ಇವರನ್ನು ಪತ್ತನಂತ್ತಿಟ್ಟ ಬಸ್‌ ಸ್ಟ್ಯಾಂಡ್‌ನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದರು.

ಸದ್ಯ ಆರೋಪಿ ಶ್ರೀಕುಟ್ಟಿಯನ್ನು ಆಳಪ್ಪುಳದ ಹರಿಪಾಡ್‌ನ ಜ್ಯೂಡಿಶೀಯಲ್‌ ಫಸ್ಟ್‌ ಕ್ಲಾಸ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ಹಾಜರು ಪಡಿಸಿ ಕೋಟ್ಟಾರಕ್ಕರ ಸಬ್‌ ಜೈಲಿಗೆ ಕಳುಹಿಸಲಾಗಿದೆ. ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ಈ ಸುದ್ದಿಯನ್ನೂ ಓದಿ: Physical Abuse: ಶಾಲಾ ವಾರ್ಷಿಕೋತ್ಸವಕ್ಕೆ ಬಂದಿದ್ದ ಯುವತಿ ಮೇಲೆ ಅತ್ಯಾಚಾರ; ಕಾಮುಕ ಅರೆಸ್ಟ್‌